ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತದ ಸಾರಾಂಶ
ಪೀಠಿಕೆ:
ಇಲ್ಲಿ ಎರಡು ಉಪಾಖ್ಯಾನಗಳಿವೆ. ಅದರಲ್ಲಿ ಮೊದಲನೇ ಉಪಾಖ್ಯಾನದ ಪ್ರಕಾರ:
ವಾಜಾಶ್ರವಸ್ಸೆಂಬ ಋಷಿಗೆ ನಚಿಕೇತನೆಂಬ ಪುತ್ರನಿದ್ದನು. ವಾಜಾಶ್ರವಸ್ಸನು ಯಜ್ಞವನ್ನು ಮಾಡಿ ತನ್ನಲ್ಲಿದ್ದ ಬಡಕಲಾದ ಹಸುಗಳನ್ನು ಬ್ರಾಹ್ಮಣರಿಗೆ ದಾನಮಾಡಿದನು. ಇದನ್ನು ಕಂಡ ನಚಿಕೇತನು ಹೀಗೆ ಮಾಡುವುದರಿಂದ ಯಾವ ಪುಣ್ಯವು ಒದಗುವುದು, ಬದಲಾಗಿ ಒಳ್ಳೆಯ ವಸ್ತುಗಳನ್ನು ದಾನಮಾಡೆಂದು ತಂದೆಗೆ ಹೇಳಿದನು. ಅದಕ್ಕೆ ತಂದೆಯು ನಿನ್ನನ್ನು ಬಿಟ್ಟರೆ ನನ್ನ ಬಳಿ ಎನೂ ಇಲ್ಲವೆಂದನು. ಆಗ ನಚಿಕೇತನು ತನ್ನನ್ನೇ ದಾನಮಾಡೆಂದು ಪೀಡಿಸತೊಡಗಿದನು. ತಂದೆಯು ಕೋಪದಲ್ಲಿ ಅವನನ್ನು ಮೃತ್ಯುವಿಗೆ ದಾನಮಾಡಿರುವೆ ಎಂದನು. ಹಾಗಾಗಿ ನಚಿಕೇತನು ಯಮಾಲಯಕ್ಕೆ ಹೋಗಿ ಅಲ್ಲಿ ಯಮನನ್ನು ಕಾಣದೆ, ಮೂರು ಹಗಲು ಮೂರು ರಾತ್ರೆ ಉಪವಾಸವಿದ್ದನು. ಯಮನು ಬಂದು ಬಾಲಕನನ್ನು (ಅತಿಥಿ) ನೋಡಿ ಅವನನ್ನು ಉಪವಾಸವಿರುವಂತೆ ಮಾಡಿದ್ದಕ್ಕೆ ದೊರಕುವ ಪಾಪಕ್ಕೆ ಹೆದರಿ, ಅದರ ಪರಿಹಾರಾರ್ಥವಾಗಿ ಮೂರು ವರಗಳನ್ನು ನೀಡುವನು.
ಮತ್ತೊಂದು ಉಪಾಖ್ಯಾನದ ಪ್ರಕಾರ:
ಗೌತಮ ಗೋತ್ರದ ವಾಜಶ್ರವಃ ಎಂಬ ಋಷಿಗೆ ಉದ್ದಾಲಕನೆಂಬ ಪುತ್ರನಿದ್ದನು. ಅವನ ಮಗನೇ ನಚಿಕೇತ. ಉದ್ದಾಲಕನು ವಿಶ್ವಜಿತ್ ಎಂಬ ಯಾಗವನ್ನು ಮಾಡಿ ತನ್ನಲ್ಲಿದ್ದ ಸರ್ವಸ್ವವನ್ನೂ ದಾನಮಾಡಿದನು. ತನ್ನ ತಂದೆಯ ದಾನ ಕಾರ್ಯವು ಉಪನಯನವಾಗಿರದ ನಚಿಕೇತನ ಮನಸ್ಸಿನ ಮೇಲೆ ಪರಿಣಾಮವುಂಟಾಗಿ ದಾನ ಕಾರ್ಯದಲ್ಲಿ ವಿಶೇಷವಾದ ಶ್ರದ್ಧೆಯುಂಟಾಗಿ ತಾನು ತನ್ನ ತಂದೆಯ ಸ್ವತ್ತಾದ್ದರಿಂದ ತನ್ನನ್ನೂ ದಾನ ಮಾಡೆಂದು ತಂದೆಯನ್ನು ಸತತವಾಗಿ ಪೀಡಿಸತೊಡಗಿದ. ಮೊದ ಮೊದಲು ಉದ್ದಾಲಕನು ನಚಿಕೇತನಿಗೆ ಉತ್ತರಿಸದಿದ್ದರೂ ಕೊನೆಗೆ ಕೋಪಗೊಂಡು ಅವನನ್ನು ಮೃತ್ಯುವಿಗೆ (ಯಮ) ದಾನಮಾಡುವೆನೆಂದನು. ತಂದೆಯ ಮಾತಿನಂತೆ ನಚಿಕೇತನು ಮೃತ್ಯುವಿನ ಬಳಿಗೆ ಹೋಗಲು ಸಿದ್ಧನಾದನು. ಆಗ ವಾಗ್ದೇವತೆಯು ಅಶರೀರವಾಣಿಯ ಮೂಲಕ ನಚಿಕೇತನಿಗೆ ಅವನು ಯಮನ ಮನೆಗೆ ಹೋದಾಗ ಅವನು ಹೊರಗೆ ಹೋಗಿರುವನೆಂದೂ ಹಾಗೂ ಮೂರು ದಿನ ಬರುವುದಿಲ್ಲವೆಂದು ತಿಳಿಸಿ, ಆದರೂ ಮೂರು ದಿನ ಅಲ್ಲೇ ಇದ್ದು ಏನು ಆಹಾರ ಕೊಟ್ಟರೂ ತಿನ್ನಕೂಡದೆಂದು ತಿಳಿಸಿತು. ಆಕಾಶವಾಣಿಯು ಮುಂದುವರೆದು, ಯಮನು ಮನೆಗೆ ಬಂದ ನಂತರ ನೀನು ಏನನ್ನು ತಿಂದೆ ಎಂದು ಕೇಳಿದರೆ ನೀನು ಮೊದಲ ದಿನ ಪ್ರಜೆಯನ್ನು ತಿಂದೆ ಎಂದೂ ಹೀಗೆ ಎರಡನೇ ಹಾಗೂ ಮೂರನೇ ದಿನಗಳಲ್ಲಿ ಕ್ರಮವಾಗಿ ಪಶು ಹಾಗೂ ಇತರೆ ಸಂಪತ್ತುಗಳನ್ನು ಮತ್ತು ಯಮನು ಮಾಡಿದ ಸತ್ಕರ್ಮಗಳನ್ನು ತಿಂದೆ ಎಂದು ಹೇಳಬೇಕೆಂದು ತಿಳಿಸಿತು.
(ಇಲ್ಲಿ ಒಂದು ಸಂಶಯ ಬರುವುದು ಸಾಮಾನ್ಯ. ಅದೇನೆಂದರೆ ಒಂದು ಪಕ್ಷ ಜೀವಿಯು ಯಮಲೋಕಕ್ಕೆ ಸಶರೀರಿಯಾಗಿ ಹೋದಲ್ಲಿ (ಇದೂ ಅಸಾಧ್ಯವಾದದ್ದೆ), ಅಲ್ಲಿ ಹಸಿವು ನೀರಡಿಕೆಗಳು ಉಂಟಾಗುವುದೇ ಎಂಬುದು. ಇದಕ್ಕೆ ಸ್ವಲ್ಪ ವಿವರಣೆಯು ಅವಶ್ಯಕ. ಅದೇನೆಂದರೆ, ಗೃಹಸ್ಥ ಧರ್ಮದ ಪ್ರಕಾರ ಮನೆಗೆ ಬಂದ ಅತಿಥಿಗೆ ಸತ್ಕಾರವನ್ನು ಮಾಡದೆ, ಅನ್ನಾಹಾರಗಳಿಂದ ತೃಪ್ತಿಪಡಿಸದಿದ್ದರೆ ಆ ಗೃಹಸ್ಥನಿಗೆ ಪಾಪವುಂಟಾಗುವುದು. ಅತಿಥಿಯು ಒಂದು ದಿನ ಉಪವಾಸವಿದ್ದರೆ ಅದರಿಂದ ಗೃಹಸ್ಥನ ಸಂತತಿಯು ನಾಶವಾಗುವುದು. ಹೀಗೇ ಎರಡನೇ ದಿನವೂ ಉಪವಾಸವಿದ್ದಲ್ಲಿ ಮನೆಯ ಯಜಮಾನನ ಪಶು, ಧನ ಧಾನ್ಯ ಮೊದಲಾದ ಸಂಪತ್ತುಗಳು ನಾಶವಾಗುವುದು. ಮೂರನೇ ದಿನವೂ ಉಪವಾಸವಿದ್ದಲ್ಲಿ ಯಜಮಾನನು ಅದುವರೆಗೂ ಮಾಡಿರುವ ಸತ್ಕಾರ್ಯಗಳ ಪುಣ್ಯವೆಲ್ಲವೂ ನಶಿಸುವುದು ಎಂದು ಧರ್ಮಶಾಸ್ತ್ರದಲ್ಲಿ ವಿವರಿಸಲಾಗಿದೆ. ಇದಕ್ಕಾಗಿಯೇ ನಚಿಕೇತನು ಸಶರೀರಿಯಾಗಿ ಹೋಗಿದ್ದು ಹಾಗೂ ಹಸಿವು ನೀರಡಿಕೆಗಳನ್ನು ಅನುಭವಿಸಿದ್ದು.)
ನಚಿಕೇತನು ಯಮನ ನಿವಾಸಕ್ಕೆ ಬಂದನು ಹಾಗೂ ವಾಗ್ದೇವತೆಯ ಹಿತೋಪದೇಶದಂತೆ ಯಮನೊಂದಿಗೆ ನಡೆದುಕೊಂಡನು.
ಮೂಲ: ಋಗ್ವೇದಸಂಹಿತಾ - ಭಾಗ - 30ರ ಆಯ್ದ ಭಾಗಗಳು.
ಅನುವಾದಕರು: ಆಸ್ಥಾನ ಮಹಾವಿದ್ವಾನ್ ಹೆಚ್.ಪಿ.ವೆಂಕಟರಾವ್
ಸಂಗ್ರಹ: ಗುರುಪ್ರಸಾದ್ ಹಾಲ್ಕುರಿಕೆ
ಮುಂದಿನ ಭಾಗ - ನಚಿಕೇತ-ಯಮರ ಸಂವಾದ
No comments:
Post a Comment