Saturday, April 4, 2020

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು



ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು
ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ. ಬದಲಿಗೆ ಯಜ್ಞ ಯಾಗಾದಿಗಳಿಗೆ ಕರ್ಮಗಳ ಮಹತ್ವವನ್ನು ತೋರಿಸುವುದು ಹಾಗೂ ಮಂತ್ರ ತಂತ್ರಗಳ ನಡುವಿನ ವಿಶೇಷ ಸಂಬಂಧವನ್ನು ನಿರೂಪಿಸುವುದು. ಅಲ್ಲಲ್ಲಿ ಕೆಲವು ಮಂತ್ರಗಳಿಗೆ ಅರ್ಥ ಅಥವಾ ಕ್ಲಿಷ್ಟಪದಗಳಿಗೆ ವಿವರಗಳನ್ನು ನೀಡಿರುವುದೂ ಉಂಟು. ಇಂತಹ ಪ್ರಾಸಂಗಿಕ ವಿವರಣೆಗಳನ್ನೆಲ್ಲ ಒಟ್ಟುಗೂಡಿಸಿದರೆ ಒಂದು ಗ್ರಂಥವಾಗುವುದು ಹಾಗೂ ಇವುಗಳಿಲ್ಲದಿದ್ದಲ್ಲಿ ಅನೇಕ ಪದಗಳು, ವಾಕ್ಯಗಳೂ ಕೂಡ ಅರ್ಥವಾಗುತ್ತಿರಲಿಲ್ಲ.

ಪ್ರಾತಿಶಾಖ್ಯಗಳೂ ಸರ್ವಾನುಕ್ರಮಣಿ ಮುಂತಾದುವೂ ವೇದವನ್ನು ಅಧ್ಯಯನ ಮಾಡುವವರಿಗೆ ಸಹಾಯಕವಾಗಿವೆಯೇ ಹೊರತು ಅರ್ಥವನ್ನು ಅರಿಯಲು ಅಪೇಕ್ಷಿಸುವವರಿಗೆ ಪ್ರಯೋಜನವಾಗಿಲ್ಲ. ಪ್ರಾತಿಶಾಖ್ಯಗಳು, ವೇದದ ಮೂಲ, ಉಚ್ಚರಿಸಬೇಕಾದ ಸ್ವರಗಳಿಗೆ ಸಂಬಂಧಿಸಿದ ವಿಷಯಗಳನ್ನು ವಿವರಿಸುತ್ತವೆ. ಸರ್ವಾನುಕ್ರಮಣಿಯಲ್ಲಿ ಮಂತ್ರದ ಋಷಿ, ಛಂದಸ್ಸು, ದೇವತೆ ಮುಂತಾದ ವಿಷಯಗಳನ್ನು ತಿಳಿಸುವುದು.

ವೇದದ ಅರ್ಥವಿವರಣೆಯೇ ಪ್ರಮುಖ ಉದ್ದೇಶವಾಗಿರುವ ಗ್ರಂಥವೆಂದರೆ ಯಾಸ್ಕರ ನಿರುಕ್ತ. ನಿರುಕ್ತದಲ್ಲಿ ಯಾಸ್ಕರು ಪದಗಳಿಗೆ ವೈದಿಕವಾದ ಅರ್ಥ ಹಾಗೂ ಸಾಧಾರವಾಗಿ ಈಗ ಬಳಕೆಯಲ್ಲಿರುವ ಸಂಸ್ಕೃತದಲ್ಲಿನ ವ್ಯತ್ಯಸ್ತವಾದ ಅರ್ಥ ಇವೆರಡನ್ನೂ ಅಲ್ಲಲ್ಲಿ ಕೊಟ್ಟಿರುವುದನ್ನು ನೋಡಬಹುದು. ಈ ರೀತಿ ವೇದ ಮತ್ತು ಭಾಷೆಗಳಲ್ಲಿರುವ ಎರಡು ಅರ್ಥಗಳನ್ನು ನೀಡಿರುವುದನ್ನು ಗಮನಿಸಿದರೆ ಯಾಸ್ಕರ ಕಾಲದಲ್ಲಿ ಸಂಸ್ಕೃತದ ಎರಡು ರೂಪಗಳೂ ಬಳಕೆಯಲ್ಲಿತ್ತೆನ್ನಬಹುದು. ಹಾಗೂ ನಿರುಕ್ತದ ಉಪೋದ್ಘಾತದಲ್ಲಿ ಒಂದು ಚರ್ಚೆಯನ್ನು ಕೊಟ್ಟಿರುವರು. ಈ ಚರ್ಚೆಯು ವೇದಗಳ ವ್ಯಾಖ್ಯಾನಕ್ಕೆ ಸಂಬಂಧಿಸಿರುವುದು. ಇದರ ಸಾರಾಂಶವೆಂದರೆ, ವೇದಗಳಿಗೇ ಅರ್ಥವಿಲ್ಲದಿರುವಾಗ ಅದಕ್ಕೆ ವ್ಯಾಖ್ಯಾನ ಮಾಡುವುದರಿಂದ ಪ್ರಯೋಜನವಿಲ್ಲ ಎಂದು.

ಅಸಾಧ್ಯ ವಾಚಕವಾಕ್ಯಗಳು, ಪರಸ್ಪರ ವಿರುದ್ಧಾರ್ಥವುಳ್ಳ ವಾಕ್ಯಗಳು, ಎಲ್ಲರಿಗೂ ಗೊತ್ತಿರುವ ಅರ್ಥವನ್ನೇ ಪುನಃ ವಿವರಿಸುವುದು, ಅರ್ಥವಾಗದ ಪದಗಳು ಇವುಗಳಿಂದ ವೇದಮಂತ್ರಗಳು ಅರ್ಥವಿಲ್ಲದವು. ಅಂತಹ ಗ್ರಂಥಕ್ಕೆ ವ್ಯಾಖ್ಯಾನಮಾಡುವುದು ವ್ಯರ್ಥ ಎಂಬ ಆಪಾದನೆ. ಈ ವಾದಗಳಿಗೆ ಸಾಯಣಾಚಾರ್ಯರ ಉಪೋದ್ಘಾತದಲ್ಲಿ ಸಮಂಜಸವಾದ ಉತ್ತರವನ್ನು ಕೊಟ್ಟಿರುವರು.

ಮೇಲೆ ವಿವರಿಸಿದ ವಾದವಿವಾದಗಳಿಂದ ತಿಳಿದುಬರುವುದೇನೆಂದರೆ ಯಾಸ್ಕರ ಕಾಲದಲ್ಲಿಯೇ ವೇದಗ್ರಂಥವು ಸಾಮಾನ್ಯರ ಬಳಕೆಯಲ್ಲಿರಲಿಲ್ಲ ಎಂಬುದು.

ವೇದವೆಲ್ಲವೂ ಜನಗಳಿಗೆ ತಿಳಿಯುವಂತಿದ್ದರೆ ಶಬ್ದಕೋಶದ ಅವಶ್ಯಕತೆಯಾದರೂ ಏಕೆ? ಹಾಗೂ ನಿರುಕ್ತದಲ್ಲಿ ಪದೇಪದೇ ಪದಗಳಿಗೆ ರೂಪ ವ್ಯುತ್ಪತ್ತಿ (ಯಾವ ಮೂಲಪದದಿಂದ ಬಂದಿದ್ದು) ಮಾಡಿ, ಇತರ ವ್ಯಾಖ್ಯಾನಕಾರರು ಹೇಗೆ ನಿರೂಪಣೆ ಮಾಡಿರುವರು ಎಂಬುದನ್ನೂ ವಿವರಿಸಿ ತಮ್ಮ ಅರ್ಥವೇ ಸರಿಯೆಂದು ವಾದಿಸಲು ಕಾರಣಗಳೇನು? ಪದಗಳು ಪರಿಚಿತವಾಗಿದ್ದಿದ್ದರೆ ಕಷ್ಟಪಟ್ಟು ಅರ್ಥವನ್ನು ಏಕೆ ಪ್ರತಿಪಾದಿಸಬೇಕಿತ್ತು? ಯಾಸ್ಕರು ಅರ್ಥಪ್ರತಿಪಾದನೆಗೆ ವ್ಯಾಕರಣ ಸಹಾಯವನ್ನು ತೆಗೆದುಕೊಂಡಿರುವುದನ್ನು ನೋಡಿದರೆ ಈ ಕಾರ್ಯದಲ್ಲಿ ಅವರಿಗೆ ಸಂಪ್ರದಾಯವೂ ಹೆಚ್ಚಾಗಿ ಸಹಕರಿಸಿದಂತೆ ತೋರುವುದಿಲ್ಲ. ಬಹುಷಃ ಸಂಪ್ರದಾಯವೂ ಆ ಹೊತ್ತಿಗೆ ಕ್ಷೀಣಿಸುತ್ತಾ ಬಂದಿರಬೇಕು. ವೇದದ ಕಾಲಕ್ಕೂ ಯಾಸ್ಕರ ಕಾಲಕ್ಕೂ ಬಹಳ ಅಂತರವಿದ್ದಿರಬೇಕು. ಏನೇ ಆಗಲಿ ವೇದಾರ್ಥವನ್ನು ಅರಿಯಲು ನಿರುಕ್ತದಿಂದ ಅಪಾರ ಉಪಕಾರವಾಗಿರುವುದಂತೂ ಸತ್ಯ.

ವೇದ ಕಾಲದಲ್ಲಿ ಶ್ರದ್ಧೆಯಿಂದಲೇ ಎಲ್ಲ ಕೆಲಸಗಳೂ ನಡೆಯುತ್ತಿದ್ದವು. ಆದ್ದರಿಂದಲೇ ಎಲ್ಲ ಮಂತ್ರಗಳಿಗೂ ಪ್ರಾಮಾಣ್ಯವು ಸಿದ್ಧವಾಗುತ್ತಿತ್ತು. ಆದರೆ, ಯಾಸ್ಕರ ನಿರುಕ್ತ ರಚನೆಯ ಕಾಲಕ್ಕೆ ಜನಗಳಿಗೆ ಶ್ರದ್ಧೆ, ನಂಬಿಕೆಯ ಜೊತೆಗೆ ಎಲ್ಲವೂ ಚೆನ್ನಾಗಿ ಚರ್ಚೆಮಾಡಲ್ಪಟ್ಟು ನ್ಯಾಯಸಮ್ಮತವಾಗಿದೆ ಎಂದು ಅನಿಸಬೇಕಿತ್ತು. ಹೀಗಾಗಿ ಯಾಸ್ಕರು ತಾವು ಹೇಳುವುದಕ್ಕೆ ವ್ಯಾಕರಣ, ಹಿಂದಿನ ಜ್ಞಾನಿಗಳ ಅನುಮೋದಕ ವಾಕ್ಯಗಳನ್ನು ಉಪಯೋಗಿಸಿಕೊಂಡು ಸಮರ್ಥಿಸಬೇಕಿತ್ತು.

ಪಾಣಿನಿಯ ವ್ಯಾಕರಣವು ಸಾಧಾರಣವಾಗಿ ವ್ಯಾಕರಣಕ್ಕೆ ಸಂಬಂಧಿಸಿದ್ದು. ವೇದಗಳ ರೂಪಗಳೆಲ್ಲವನ್ನೂ ಇದರಲ್ಲಿ ನಿರೂಪಿಸಿಲ್ಲ. ಹೀಗಾಗಿ ಇದರಿಂದ ವೇದಾರ್ಥವನ್ನು ತಿಳಿಯಲು ಹೆಚ್ಚಿಗೆ ಉಪಯೋಗವಾಗಿಲ್ಲ.

ಶಂಕರಭಗವತ್ಪಾದರು ಸಾಧಾರಣವಾಗಿ ಉಪನಿಷತ್ತುಗಳಿಗೆ ಮಾತ್ರ ಭಾಷ್ಯವನ್ನು ಬರೆದಿರುವರು. ಸಂಹಿತೆಗಳಿಗೆ ಸರಿಯಾದ ವ್ಯಾಖ್ಯಾನವಿಲ್ಲ. ಉಪನಿಷತ್ತಿಗೆ ವ್ಯಾಖ್ಯಾನ ಬರೆಯುವಾಗ ಅಲ್ಲಲ್ಲಿ ಕೆಲವು ಮಂತ್ರಗಳಿಗೆ ವ್ಯಾಖ್ಯಾನ ಮಾಡಿರುವರು.

ಪೂರ್ವಮೀಮಾಂಸ ಶಾಸ್ತ್ರದ ಉದ್ದೇಶವೇನೋ ವೇದಾರ್ಥವನ್ನು ನಿರೂಪಿಸುವುದೇ ಆದರೂ ಗ್ರಂಥವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕಂಡುಬರುವುದು ವೇದದ ಅರ್ಥವಲ್ಲ. ಬದಲಿಗೆ ವೇದವನ್ನು ಅರ್ಥಮಾಡಿಕೊಳ್ಳುವ ರೀತಿಯ ಬಗ್ಗೆ ವಿವರಗಳಿರುವುದು. ಇದರ ಪ್ರಕಾರ ವೇದ ಮಂತ್ರಗಳನ್ನು ಯಾವ ಸಂದರ್ಭದಲ್ಲಿ ಉಪಯೋಗಿಸಬೇಕು, ಪರಸ್ಪರ ವಿರುದ್ಧ ವಾಕ್ಯಗಳಿದ್ದಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು ಇತ್ಯಾದಿ ವಿಷಯಗಳಿಗೆ ಅನ್ವಯಿಸುತ್ತವೆ. ಉದಾಹರಣೆಗೆ - ಒಂದೇ ಮಂತ್ರಕ್ಕೆ ಸಂಬಂಧಿಸಿದ್ದು, ಒಂದಕ್ಕೊಂದು ವಿರುದ್ಧವಾಗಿರುವ ಶ್ರುತಿ, ಲಿಂಗ, ವಾಕ್ಯ, ಪ್ರಕರಣ, ಸ್ಥಾನ ಮತ್ತು ಸಮಾಖ್ಯಾ ಮುಂತಾದವುಗಳಲ್ಲಿ ಮೊದಲು ಬರುವುದಕ್ಕೆ ಪ್ರಾಮುಖ್ಯತೆ ಹೆಚ್ಚು. ಆದ್ದರಿಂದ ಪೂರ್ವ ವಾಕ್ಯಕ್ಕೇ ಪ್ರಾಮುಖ್ಗ್ಯತೆ. ಹೀಗಾಗಿ ಮೀಮಾಂಸಶಾಸ್ತ್ರವು ಅರ್ಥ ನಿರೂಪಣೆಗಿಂತ ಅದರ ರೀತಿಯನ್ನೇ ವಿವರಿಸುತ್ತದೆ.

ಅತಿ ಮುಖ್ಯವಾದ ಹಾಗೂ ನೇರವಾಗಿ ವೇದಾರ್ಥಕ್ಕೇ ಸಂಬಂಧಿಸಿದಂತೆ ರಚಿಸಲ್ಪಟ್ಟ ಗ್ರಂಥವೆಂದರೆ ಸಾಯಣಾಚಾರ್ಯರ ವೇದಾರ್ಥಪ್ರಕಾಶಿಕೆ. ಈ ಗ್ರಂಥದಲ್ಲಿ ಋಗ್ವೇದಕ್ಕೆ ಆಮೂಲಾಗ್ರವಾಗಿ ವಿಸ್ತೃತವಾದ ವ್ಯಾಖ್ಯಾನವು ಬರೆಯಲ್ಪಟ್ಟಿದೆ ಮತ್ತು ಅಮೂಲ್ಯ ವಿಷಯಗಳನ್ನೊಳಗೊಂಡಿರುವ ಹಾಗೂ ಪ್ರೌಢವಾದ ಉಪೋದ್ಘಾತದಿಂದಲೂ ಕೂಡಿದೆ.

ವೇದಾರ್ಥಪ್ರಕಾಶಿಕೆಯಲ್ಲಿ ಸಾಯಣಾಚಾರ್ಯರು ಋಗ್ವೇದದ ಪ್ರತೀ ಮಂತ್ರಕ್ಕೂ ಪದದ ಅರ್ಥ, ಕ್ಲಿಷ್ಟಪದಗಳ ವ್ಯುತ್ಪತ್ತಿ, ಅಲ್ಲಲ್ಲೇ ಬರುವ ವ್ಯಾಕರಣ ವಿಶೇಷಗಳು ಮತ್ತು ಪ್ರತಿ ಮಂತ್ರಕ್ಕೂ ಆದಿಯಲ್ಲಿ ಆ ಮಂತ್ರವನ್ನು ಯಾವ ಯಜ್ಞದಲ್ಲಿ ಎಲ್ಲಿ ಉಪಯೋಗಿಸಬೇಕು ಎಂದು ವಿವರಿಸಿದ್ದಾರೆ. ವೇದವೆಂಬುದು ಒಂದು ಪವಿತ್ರ ಗ್ರಂಥರಾಶಿ. ಅದರಲ್ಲಿರುವ ಪ್ರತಿಯೊಂದು ವಾಕ್ಯವೂ ಪ್ರಮಾಣೀಕೃತವಾದದ್ದು. ಅದನ್ನು ವಿಮರ್ಶೆ ಮಾಡುವುದೇ ತಪ್ಪು. ಮಂತ್ರಗಳು ಯಜ್ಞಯಾಗಾದಿಗಳಲ್ಲಿ ಉಪಯೋಗಿಸುವುದಕ್ಕಾಗಿ ಇದ್ದರೂ, ಪ್ರತಿ ಮಂತ್ರಕ್ಕೂ ಒಬ್ಬೊಬ್ಬ ಅಭಿಮಾನಿ ದೇವತೆಗಳಿರುವರು. ತಂತ್ರಗಳಿಗೆ ಮಂತ್ರಗಳನ್ನು ಅನ್ವಯಿಸುವಾಗ ಇದೇ ದೃಷ್ಟಿಯಿಂದಲೇ ಅವರು ಬರೆದಿರುವುದು.

ನಿರುಕ್ತಕಾರರಂತೆ ಸಾಯಣಾಚಾರ್ಯರೂ ಸಾಧಾರಣವಾಗಿ ಪದಗಳ ವ್ಯುತ್ಪತ್ತಿ ಮಾಡಿದ ನಂತರವೇ ಅರ್ಥವನ್ನು ನಿರೂಪಿಸಿರುವರು. ಅನೇಕ ಕಡೆ ನಿರುಕ್ತದಿಂದ ಉದಾಹರಣೆಗಳನ್ನು ನೀಡಿರುವರು. ಬ್ರಾಹ್ಮಣಗಳು, ಆರಣ್ಯಕಗಳು, ಸರ್ವಾನುಕ್ರಮಣಿ, ಬೃಹದ್ದೇವತಾ ಮುಂತಾದವುಗಳಿಂದಲೂ ಆರಿಸಿಕೊಂಡಿರುವರು. ಒಂದು ವೇಳೆ ಸಾಯಣರು ಭಾಷ್ಯವನ್ನು ಬರೆಯದಿದ್ದರೆ, ಈ ದಿನ ವೇದಾಭ್ಯಾಸವು ಯಾವ ಸ್ಥಿತಿಯಲ್ಲಿರುತ್ತಿತ್ತು ಎಂಬುದನ್ನು ಊಹಿಸಲೂ ಅಸಾಧ್ಯ.

ಹಿಂದಿನ ಕಾಲದಿಂದಲೂ ವೈದಿಕ ಬ್ರಾಹ್ಮಣರು ವೇದವನ್ನು ಶ್ರಮದಿಂದ ಕಂಠಪಾಠಮಾಡಿ ಅದನ್ನು ಅಚ್ಚಳಿಯದೆ ಇರುವಂತೆ ಉಳಿಸಿಕೊಂಡು ಬಂದಿರುವರು. ಆದರೆ ವೇದಾರ್ಥನಿರೂಪಣೆಗೆ ಅವರಿಂದ ತಕ್ಕಷ್ಟು ಸಹಾಯವಾಗಿಲ್ಲದಿರುವುದು ವಿಷಾದಕರ.

ವೇದವನ್ನು ಗುರುಮುಖೇನ ಕಲಿಯುವುದು ಪುರಾತನಕಾಲದಿಂದ ನಡೆದುಬಂದ ಪದ್ಧತಿ. ವೇದಕಾಲದಲ್ಲಿ ಭಾಷೆಗೆ ಲಿಪಿ ಇರಲಿಲ್ಲ. ಹೀಗಾಗಿ ಗುರುವು ಶಿಷ್ಯನಿಗೆ ಸರಿಯಾದ ಉಚ್ಚಾರಣೆಯ ಮೂಲಕ ಹೇಳಿಕೊಟ್ಟು ಬಾಯಿಪಾಠಮಾಡಿಸುತ್ತಿದ್ದರು. ಮೊದಲು ಗುರುವು ಓಂಕಾರಪೂರ್ವಕವಾಗಿ ಪರಮಾತ್ಮನಿಗೂ ತನ್ನ ಗುರುವಿಗೂ ನಮಸ್ಕರಿಸಿ ಬಳಿಕ ವೇದ ಮಂತ್ರಗಳನ್ನು ಪಾದ ಪಾದವಾಗಿ ಅಂದರೆ ಒಂದು ಮಂತ್ರದ ಮೊದಲನೇ ಪಾದವನ್ನು ಸ್ಪಷ್ಟವಾಗಿ ಹಾಗೂ ಸ್ವರಪೂರ್ವಕವಾಗಿ ಉಚ್ಚಾರಮಾಡುವನು. ಗುರುವು ಹೇಳಿದ ಅದೇ ಪಾದವನ್ನು ಶಿಷ್ಯನು ಮನಸ್ಸಿನಲ್ಲಿಟ್ಟುಕೊಂಡು ಅದರಂತೆ ಎರಡು ಅಥವಾ ಮೂರು ಬಾರಿ ಉಚ್ಚರಿಸುವನು. ಶಿಷ್ಯನ ಉಚ್ಚಾರಣೆ ಸರಿಯಾಗಿಲ್ಲದಿದ್ದರೆ, ಗುರುವು ಕೂಡಲೇ ತಿದ್ದಿ ಸರಿಯಾಗಿ ಹೇಳಿಸುವನು. ಬಳಿಕ ಎರಡನೇ ಪಾದವನ್ನು ಹೇಳಿಕೊಡುವನು. ಶಿಷ್ಯನು ಚಿಕ್ಕವಯಸ್ಸಿನವನಾಗಿದ್ದು ಅನುಭವ ಸಾಲದಿದ್ದ ಪಕ್ಷದಲ್ಲಿ ದೊಡ್ಡ ಛಂದಸ್ಸಿನ ಪಾದಗಳನ್ನು ಪದಚ್ಛೇದ ಕ್ರಮದಿಂದ 2-3 ಭಾಗಗಳನ್ನಾಗಿ ಮಾಡಿ ಒಂದೊಂದು ಭಾಗವನ್ನೂ ಹೇಳಿಸುವನು. ಈ ರೀತಿ ಪಾಡ್ಯ, ಅಷ್ಟಮಿ, ಚತುರ್ದಶಿ, ಪೂರ್ಣಿಮಾ, ಅಮಾವಾಸ್ಯಾ, ಸಂಕ್ರಮಣ ಮೊದಲಾದ ಅನಧ್ಯಯನ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಪ್ರಾತಃಕಾಲದಲ್ಲಿ ಸ್ನಾನ, ಸಂಧ್ಯಾವಂದನೆ, ಅಗ್ನಿಕಾರ್ಯ ಮುಂತಾದ ಪ್ರಾತರಾಹ್ನಿಕಗಳ ನಂತರ ಶಿಷ್ಯನು ನಮ್ರನಾಗಿ ಗುರುಗಳ ಮುಂದೆ ಉತ್ತರಾಭಿಮುಖನಾಗಿ ಕುಳಿತು ಒಂದು ತಿಂಗಳೂ ಅಥವಾ ಹೆಚ್ಚಾಗಿಯೋ ಪ್ರತಿದಿನ ಪಾಠವನ್ನು ಕಲಿಯಬೇಕು. ಶಿಷ್ಯನು ಹಿಂದಿನ ಪಾಠವನ್ನು ಗುರುವಿನ ಆದೇಶದಂತೆ ಪ್ರತಿದಿನವೂ ಚೆನ್ನಾಗಿ ಹೇಳಿಕೊಳ್ಳುತ್ತಿರಬೇಕು. ಈ ಕ್ರಮದಿಂದ ಸ್ವಶಾಖೆಯ ಸಂಹಿತೆಯನ್ನು ಮೊದಲಿಗೆ ಮುಗಿಸಿ ಆ ಶಾಖೆಯ ಬ್ರಾಹ್ಮಣ ಮತ್ತು ಆರಣ್ಯಕ, ಉಪನಿಷತ್ತುಗಳನ್ನೂ ಅಧ್ಯಯನಮಾಡಬೇಕು. ಹೀಗೆ ವೇದಾಧ್ಯಯನ ಮಾಡುತ್ತಿರುವಾಗಲೇ ಮಧ್ಯಾಹ್ನ ಕಾಲದಲ್ಲಿಯೂ ಅವಕಾಶವಿದ್ದಾಗ ವೇದಗಳ ಶಿಕ್ಷಾದಿ ಷಡಂಗಗಳನ್ನೂ, ಕಲ್ಪಸೂತ್ರ, ಧರ್ಮಶಾಸ್ತ್ರ, ಪುರಾಣ, ಇತಿಹಾಸ ಮೊದಲಾದ ಇತರ ಗ್ರಂಥಗಳನ್ನೂ ಅಭ್ಯಾಸಮಾಡಬೇಕು. ಈ ರೀತಿ ಒಂದು ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕಾದರೆ 12 ವರ್ಷಗಳು ಬೇಕು ಎಂದು ನಿರ್ಣಯಮಾಡಿರುವರು. ಉಪನಯನವಾದ ಬಳಿಕ ಗಾಯತ್ರೀ ಮಂತ್ರೋಪದೇಶವನ್ನು ಪಡೆದ ನಂತರವೇ ಅಧ್ಯಯನ ಮಾಡಬೇಕು. ಅಧ್ಯಯನ ಕಾಲದಲ್ಲಿ ಗುರುವಿನ ಶುಶ್ರೂಷೆಯನ್ನು ಮಾಡುತ್ತಾ ಅವರ ಮನೆಯಲ್ಲೇ ವಾಸಿಸುತ್ತಿರಬೇಕು. ಈ ವಿಚಾರದ ನಿಯಮಗಳು ಗೃಹ್ಯಸೂತ್ರದಲ್ಲಿ ನಿರೂಪಿಸಲ್ಪಟ್ಟಿವೆ. ಸ್ವಶಾಖಾದ್ಯಯನ ಪೂರ್ತಿಯಾದಮೇಲೆ ಕಾಲಾವಕಾಶ ಮತ್ತು ಶಕ್ತಿಯಿದ್ದಲ್ಲಿ ಇತರ ಶಾಖೆಗಳನ್ನೂ ಅಧ್ಯಯನ ಮಾಡಬಹುದು. ವಿದ್ಯಾಭ್ಯಾಸ ಮುಗಿದ ನಂತರ ಗುರುವಿಗೆ ಯಥೋಚಿತ ದಕ್ಷಿಣೆಯನ್ನು ಸಲ್ಲಿಸಿ ಅವರನ್ನು ತೃಪ್ತಿಪಡಿಸಿ ಸ್ನಾತಕವ್ರತವನ್ನು ನೆರವೇರಿಸಿ ವಿವಾಹ ಮಾಡಿಕೊಂಡು ಗೃಹಸ್ಥಾಶ್ರಮವನ್ನು ಸ್ವೀಕರಿಸಬೇಕು. ಇದು ಪ್ರಾಚೀನಸಂಪ್ರದಾಯ.

ಮೂಲ : ಆಸ್ಥಾನ ವಿದ್ವಾನ್ ಹೆಚ್.ಪಿ.ವೆಂಕಟರಾವ್ ಅವರ ಋಗ್ವೇದ ಸಂಹಿತಾ.




Thursday, April 2, 2020

ವೇದಗಳ ಪದಪಾಠಕಾರರು

ವೇದಗಳ ಪದಪಾಠಕಾರರು

ವೇದ ಸಂಹಿತೆಗಳ ಪದಪಾಠವು ಅತ್ಯಂತ ಪ್ರಾಚೀನವಾದುದು. ಸಂಹಿತೆಗಿಂತಲೂ ಪದಪಾಠವೇ ಪ್ರಾಚೀನವೆಂದೂ ಸಂಹಿತೆಗೂ ಅದೇ ಮೂಲಭೂತವೆಂದೂ ಕೆಲವರ ಮತ. ಪದಪಾಠದಿಂದ ಭಾಷ್ಯಕಾರರಿಗೆ ಬಹಳಷ್ಟು ಉಪಯೋಗವಾಗಿದೆ. ಸಾಹಿತ್ಯಸಂಬಂಧವಾದ ಸಂಸ್ಕೃತ ಭಾಷೆಯಲ್ಲಿ ವಿದ್ವಾಂಸರು ತಮಗೆ ತೋಚಿದಂತೆ ಅಥವಾ ತಮ್ಮ ಅಭಿಪ್ರಾಯಕ್ಕೆ ಹೊಂದಿಕೊಳ್ಳುವಂತೆ ಪದವಿಭಾಗವನ್ನು ಮಾಡುವುದೂ, ಒಂದೇ ಪದಕ್ಕೆ ನಾನಾವಿಧವಾದ ಅರ್ಥಗಳನ್ನು ಕಲ್ಪಿಸುವುದೂ, ಸಮಾಸಪದಗಳನ್ನೂ ಸಹ ತಮಗಿಷ್ಟವಾದ ಅರ್ಥಬರುವಂತೆ ವ್ಯತ್ಯಾಸ ಮಾಡುವುದೂ ಸಾಧಾರಣವಾಗಿ ರೂಢಿಯಲ್ಲಿದೆ. ಈ ಕಾರಣದಿಂದ ವೇದಕ್ಕೆ ನಾನಾವಿಧವಾದ ಅರ್ಥಗಳನ್ನೂ, ಅಸಮಂಜಸವಾದ ವಿಚಿತ್ರಾರ್ಥಗಳನ್ನೂ ಕಲ್ಪಿಸಿ ಪ್ರಾಚೀನ ಋಷಿಗಳ ಅಭಿಪ್ರಾಯವೇ ವ್ಯತ್ಯಾಸವಾಗಬಹುದು ಎಂಬ ಶಂಕೆಯಿಂದ ವೇದಗಳ ಪದವಿಭಾಗವನ್ನು ಬಹು ಪುರಾತನಕಾಲದಲ್ಲಿಯೇ ಋಷಿಗಳು ಮಾಡಿರುವರು. ಆದುದರಿಂದ ವೇದದ ಪದಗಳಿಗೆ ಭಾಷ್ಯಕಾರರು ತಮ್ಮ ಬುದ್ಧಿಶಕ್ತಿಗನುಸಾರವಾಗಿ, ನಾನಾವಿಧವಾದ ಅರ್ಥಗಳನ್ನು ಕಲ್ಪಿಸಬಹುದೇ ವಿನಹ ಪದವಿಭಾಗವನ್ನು ತಮಗಿಷ್ಟಬಂದಂತೆ ಮಾಡಲು ಅವಕಾಶವಿಲ್ಲ. ಈ ಕಾರಣದಿಂದ ಸಂಹಿತೆಗಳೂ ಪಾಠಗಳೂ ಅತಿ ಪ್ರಾಚೀನ ಕಾಲದಿಂದಲೂ ಯಾವ ವ್ಯತ್ಯಾಸವನ್ನೂ ಹೊಂದದೆ ಋಷಿಗಳು ಹಿಂದೆ ರಚಿಸಿದಂತೆಯೇ ಈಗಲೂ ಇರುವುದು. ಇದಲ್ಲದೆ ವೇದಾಕ್ಷರಗಳಲ್ಲಿಯೂ, ಸ್ವರಗಳಲ್ಲಿಯೂ, ಉಚ್ಚಾರಣೆಯಲ್ಲಿಯೂ ವ್ಯತ್ಯಾಸಮಾಡುವುದು ಮಹಾಪಾಪವೆಂದು ಋಷಿಗಳು ನಿರ್ಣಯಿಸಿರುವರು. ಈರೀತಿಯಾಗಿ ವೇದಪಾಠವನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬರುವುದಕ್ಕಾಗಿಯೇ ಪ್ರತಿ ವೇದಕ್ಕೂ ಅನೇಕ ಶಿಕ್ಷಾಗ್ರಂಥಗಳೂ, ಪ್ರತಿಶಾಖ್ಯಗಳೂ ರಚಿತವಾಗಿವೆ. ಈ ಗ್ರಂಥಗಳ ಸಹಾಯದಿಂದಲೂ ವೇದಾಭ್ಯಾಸವಿಚಾರದಲ್ಲಿ ಪೂರ್ವ ಸಂಪ್ರದಾಯವನ್ನು ಅನುಸರಿಸುವುದೇ ರೂಢಿಯಾಗಿರುವುದರಿಂದಲೂ ವೇದಪಾಠವು ಯಾವ ವ್ಯತ್ಯಾಸವನ್ನೂ ಹೊಂದದೆ ಹಿಂದಿದ್ದಂತೆಯೇ ಈಗಲೂ ಇರುವುದು.

ಪದ ಪಾಠಗಳು ಸಂಹಿತೆಗಳಿಗೆ ಮಾತ್ರ ಇವೆ. ಬ್ರಾಹ್ಮಣ ಆರಣ್ಯಕ ಮೊದಲಾದ ಇತರ ವೇದ ಭಾಗಗಳಿಗೆ ಪದಪಾಠವಿಲ್ಲ. ಎಂದರೆ ಪದಪಾಠವನ್ನು ಪ್ರತ್ಯೇಕವಾಗಿ ಅಧ್ಯಯನಮಾಡುವ ರೂಢಿಯಿಲ್ಲ. ಭಾಷ್ಯಗಳಿಗೂ ಪದಪಾಠಗಳಿಗೂ ಇಷ್ಟು ಮಾತ್ರ ವ್ಯತ್ಯಾಸ. ಭಾಷ್ಯಗಳಿಂದ ಮಂತ್ರಗಳ ಅರ್ಥ ಮುಂತಾದವು ತಿಳಿಯುತ್ತವೆ. ಅರ್ಥ ತಿಳಿಯಬೇಕಾದರೆ, ಪದವಿಚ್ಛೇದ ಮಾಡಬೇಕು. ಪದಗಳ ಪ್ರಕೃತಿ ಪ್ರತ್ಯಯಜ್ಞಾನ, ಸಮಾಸಗಳು ಮುಂತಾದವು ತಿಳಿಯಬೇಕು. ಇವೆಲ್ಲ ಪದಪಾಠಗಳಿಂದ ತಿಳಿದುಬರುತ್ತವೆ. ಆದುದರಿಂದ ಪದಪಾಠಗಳು ವೇದಗಳಿಗೆ ಪ್ರಾಚೀನವೂ, ಮುಖ್ಯವೂ ಆದ ವೇದಭಾಗಗಳೆಂದು ಭಾವಿಸಬಹುದು. ಈ ಪದಪಾಠಗಳಿಂದ ಭಾಷ್ಯಕಾರರಿಗೆ ಬಹಳ ಉಪಕಾರವಾಗಿದೆ.

ವೇದಗಳನ್ನು ತಿಳಿಯಬೇಕೆನ್ನುವವರು ಎಲ್ಲಾ ಪದಪಾಠಗಳನ್ನೂ ಅಭ್ಯಾಸ ಮಾಡಬೇಕು. ಒಂದೇ ಪದಕ್ಕೆ ಬೇರೆಬೇರೆ ಅರ್ಥವಿರುವ ಸಂದರ್ಭದಲ್ಲಿ ಬೇರೆಬೇರೆ ವಿಧವಾಗಿ ಪದವಿಚ್ಛೇದ, ಅಥವಾ ಶಾಖಾಂತರವಾದ ಪಾಠ, ಅರ್ಥವ್ಯತ್ಯಾಸವಾದಾಗ ಸ್ವರವ್ಯತ್ಯಾಸ ಇವುಗಳೆಲ್ಲವೂ ಪದಪಾಠಗಳಿಂದ ಗೊತ್ತಾಗುತ್ತವೆ. ಪದವಿಭಾಗಕ್ರಮದಲ್ಲಿಯೂ, ಸ್ವರ ಜೋಡಣೆಯಲ್ಲಿಯೂ. ಒಂದು ಗೊತ್ತಾದ ಕ್ರಮವಿರುವುದಲ್ಲದೆ, ಇವುಗಳನ್ನು ಕ್ರಮಪಡಿಸಿದವರು ಎಷ್ಟರಮಟ್ಟಿಗೆ ತಮ್ಮ ಬುದ್ಧಿಶಕ್ತಿಯನ್ನೂ ಶ್ರಮವನ್ನೂ ಉಪಯೋಗಿಸಿರುವರೆಂಬುದು ವೇದಸಂಶೋಧಕರನ್ನು ಆಶ್ಚರ್ಯಪಡಿಸದಿರಲಾರದು.

ನಾಲ್ಕು ವೇದಗಳ ಪದಪಾಠಕಾರರ ಬಗೆಗೆ ವಿವರಗಳಿಗಾಗಿ ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್ ಅವರ "ಋಗ್ವೇದ ಸಂಹಿತಾ" - ಭಾಗ - 1ನ್ನು ಓದಿ.

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ...