ಅಶ್ವಮೇಧ ಯಜ್ಞದ ಸಾಂಕೇತಿಕತೆ ಒಂದು ವಿವರಣೆ
ಅಶ್ವಮೇಧ ಪದವು ಈ ಹೆಸರಿನ ಜನಪ್ರಿಯ ಯಜ್ಞದೊಂದಿಗೆ ಸಂಬಂಧಿತವಾಗಿದೆ. ಈಗ ನಾವು ಅಶ್ವಮೇಧ ಯಾಗದ ವಿಭಿನ್ನ ಅಂಶಗಳನ್ನು ತಿಳಿಯೋಣ:
ಅಶ್ವಮೇಧ ಪದವನ್ನು ವೇದಕಾಲದ ಹಾಗೂ ವೇದಕಾಲಾನಂತರದ ಗ್ರಂಥಗಳಲ್ಲಿ ಪದೇ ಪದೇ ಉಪಯೋಗಿಸಿರುವುದರಿಂದ ಇದು ಅತ್ಯಂತ ಜನಪ್ರಿಯವಾಗಿದೆ. ಕ್ಷತ್ರಿಯ ಯಜ್ಞಗಳೆಂದು ಕರೆಯಲ್ಪಡುವ ನಾಲ್ಕು ಯಜ್ಞಗಳಲ್ಲಿ ಅಶ್ವಮೇಧ ಯಜ್ಞವೇ ಅತ್ಯಂತ ಜನಪ್ರಿಯವಾದದ್ದು. ಉಳಿದ ಮೂರು ಕ್ಷತ್ರಿಯ ಯಜ್ಞಗಳೆಂದರೆ - ವಾಜಪೇಯಿ, ರಾಜಸೂಯ ಮತ್ತು ಸೌತ್ರಾಮಣಿ. ಯಜ್ಞದ ಕೊನೆಯ ಹಂತದಲ್ಲಿ ಅಶ್ವವನ್ನು ಬಲಿಕೊಡುವುದರ ಬಗ್ಗೆ ನಾವು ಅರಿಯುತ್ತೇವೆ. ಈ ಯಜ್ಞದ ಸಾಂಕೇತಿಕ ಅಂಶಗಳ ಕಡೆಗೆ ಇಲ್ಲಿ ನಾವು ಗಮನ ಕೊಡೋಣ.
ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧ ಎಂಬುದಕ್ಕೆ - "ಅಶ್ವಂ ವೈ ರಾಷ್ಟ್ರಂ" ಅಂದರೆ ರಾಷ್ಟ್ರವನ್ನು ಅಶ್ವವೆಂದು ಕರೆದು ಮೇಧಾ ಎಂಬುದನ್ನು ಸಂಯೋಜನೆ ಎಂಬುದಾಗಿ ವಿವರಿಸಲಾಗಿದೆ. ಇದು ಒಂದು ವಿಶೇಷವಾದ ಅರ್ಥವನ್ನು ನೀಡುತ್ತದೆ. ಹಿಂದಿನ ಕಾಲದಲ್ಲಿ ರಾಜರುಗಳು ತಮ್ಮ ರಾಜ್ಯವನ್ನು ಸಂಯೋಜಿಸುವ ಸಲುವಾಗಿ ಈ ಯಾಗವನ್ನು ಮಾಡುತ್ತಿದ್ದರು. ಅಂದರೆ ರಾಜರುಗಳು ತಮ್ಮ ರಾಜ್ಯದ ಸರಹದ್ದನ್ನು ಬಲಪಡಿಸಲು ಅಥವಾ ರಾಜ್ಯವನ್ನು ವಿಸ್ತರಿಸಲು ಅಶ್ವಮೇಧ ಯಾಗವನ್ನು ಮಾಡುತ್ತಿದ್ದರು. ರಾಮಾಯಣ ಮಹಾಭಾರತದಲ್ಲಿ ಅಶ್ವಮೇಧ ಯಾಗವನ್ನು ಮಾಡಿರುವುದನ್ನು ಓದಿರಬಹುದು. ಕ್ರಮೇಣ ಈ ಯಾಗದಲ್ಲಿ ಚಿನ್ಹೆಯಾಗಿ ಉಪಯೋಗಿಸುತ್ತಿದ್ದ ಅಶ್ವವನ್ನು ಮರೆತು ಅಶ್ವಮೇಧಯಜ್ಞದಲ್ಲಿ ಅಶ್ವವನ್ನು ಬಲಿಕೊಡುವುದು ಪದ್ಧತಿಯಾಯಿತು.
ವೇದಗ್ರಂಥಗಳಲ್ಲಿ ಅನೇಕ ಕಡೆಗಳಲ್ಲಿ ಪ್ರಾಣಿಹಿಂಸೆಯನ್ನು ವಿರೋಧಿಸಲಾಗಿದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ಅಶ್ವಮೇಧ ಪದಕ್ಕೆ ಕುತೂಹಲಕರವಾದ ಅರ್ಥವಿರುವುದು. ಇಲ್ಲಿ ಅಶ್ವ ಎಂದರೆ ಮಾನವನ ಇಂದ್ರಿಯಗಳು, ಮೇಧ ಎಂದರೆ ಸಂಯೋಜನೆ ಎಂದು. ಹೀಗಾಗಿ ಅಶ್ವಮೇಧ ಎಂದರೆ ಆತ್ಮಜ್ಞಾನವನ್ನು ಪಡೆದುಕೊಳ್ಳಲು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.
ಒಂದು ಆಸಕ್ತಿದಾಯಕ ವಿಷಯವೆಂದರೆ ಅಶ್ವಮೇಧ ಯಜ್ಞದ ಎಲ್ಲ ಮಂತ್ರಗಳೂ ಮೂಲತಃ ಋಗ್ವೇದ ಸಂಹಿತೆಯಲ್ಲೇ ಇರುವುದು. ಒಟ್ಟು 36 ಮಂತ್ರಗಳ ಪೈಕಿ 22 ಮಂತ್ರಗಳು ಸೂಕ್ತ 1-162ರಲ್ಲಿದ್ದರೆ, 13 ಮಂತ್ರಗಳು ಸೂಕ್ತ 1-163ರಲ್ಲಿದ್ದು, ಕೊನೆಯ ಒಂದು ಮಂತ್ರವು ತೈತ್ತೀರಿಯ ಸಂಹಿತೆ 5-7-24ರಲ್ಲಿ ಇರುವುದು.
ಸುಪ್ರಸಿದ್ಧ ವೇದ ವಿದ್ವಾಂಸರಾದ ಪ್ರೊ.ಆರ್.ಎಲ್.ಕಶ್ಯಪ್ ಅವರು ಯೋಗದೃಷ್ಟಿಯಿಂದ ಎಲ್ಲ 36 ಮಂತ್ರಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿರುವರು. ಅವರ ಪ್ರಕಾರ ಅಶ್ವ ಎಂಬುದು ಜೀವಶಕ್ತಿ ಅಥವಾ ಪ್ರಾಣದ ಸಂಕೇತವೆಂದು ಹಾಗೂ ಇದು ಮಾನವನ ಶರೀರದೊಳಗೂ ಹಾಗೂ ವಿಶ್ವದಲ್ಲೂ ಇರುವುದು ಎಂಬುದಾಗಿ ಅರ್ಥೈಸುತ್ತಾರೆ. ಅವರು ಮೇಧ ಎಂಬ ಪದಕ್ಕೆ ಅರ್ಪಣೆ ಎಂದು ಅರ್ಥೈಸಿ ಅಶ್ವಮೇಧ ಪದಕ್ಕೆ - ಜೀವಶಕ್ತಿ ಅಥವಾ ಪ್ರಾಣವನ್ನು ಅದರೊಂದಿಗೆ ಸಮಸ್ತ ಪ್ರಚೋದನೆಗಳು, ಆಸೆಗಳು, ಸುಖಸಂತೋಷಗಳು ಮತ್ತು ಅವುಗಳೊಂದಿಗಿನ ಭೌತಿಕ ಪ್ರತಿರೂಪಗಳೊಂದಿಗೆ ಅರ್ಪಣೆಮಾಡುವ ಕ್ರಿಯೆ ಎಂದಿರುವರು. ಇಲ್ಲಿ ಅರ್ಪಣೆಯಲ್ಲಿ ಯಜಮಾನನ ನಕಾರಾತ್ಮಕ ಗುಣಗಳನ್ನೂ ಶುದ್ಧೀಕರಣದ ಸಲುವಾಗಿ ಅಗ್ನಿಯಲ್ಲಿ ಅರ್ಪಿಸುವುದೂ ಸೇರಿದೆ.
ಅಶ್ವವು ಪ್ರಮುಖ ಶಕ್ತಿಯಾದ ಪ್ರಾಣವನ್ನು ಸಂಕೇತಿಸುತ್ತದೆ. ಇದು ಸೂರ್ಯ ಹಾಗೂ ಸೂರ್ಯಕಿರಣಗಳನ್ನೂ ಸಂಕೇತಿಸುತ್ತದೆ. ಬೃಹದಾರಣ್ಯಕೋಪನಿಷತ್ತಿನಲ್ಲಿ ಸಮಸ್ತ ವಿಶ್ವದ ಸೃಷ್ಟಿ-ಸ್ಥಿತಿಗಳನ್ನು ಯಜ್ಞದ ಮೂಲಕ ಸಂಕೇತಿಸಿ ವಿವಿಧ ರೀತಿಯಲ್ಲಿ
ವಿವರಿಸಲಾಗಿದೆ. ಇಲ್ಲಿನ ಮೊದಲ ಮಂತ್ರದಲ್ಲೇ ಬಲಿ ಕೊಡುವ ಅಶ್ವದ ಬಗ್ಗೆ ಸಾಂಕೇತಿಕವಾಗಿ ಪ್ರಾಣ ಎಂಬುದಾಗಿ ವಿವರಿಸಲಾಗಿದೆ. ಅಶ್ವದ ವಿವಿಧ ಅಂಗಗಳನ್ನು ವಿಶ್ವದ ವಿವಿಧ ಅಂಶಗಳಾದ ಮುಂಜಾನೆ, ಸೂರ್ಯ, ನದಿಗಳು ಇತ್ಯಾದಿಗಳೊಂದಿಗೆ ಸಾಂಕೇತಿಕವಾಗಿ ವಿವರಿಸಿರುವುದನ್ನು ಈ ಮಂತ್ರದಲ್ಲಿ ಕಾಣಬಹುದು.
ಓಂ ಉಷಾ ವಾ ಅಶ್ವಸ್ಯ ಮೇಧ್ಯಸ್ಯ ಶಿರಃ|
ಸೂರ್ಯಶ್ಚಕ್ಷುಃ ವಾತಃ ಪ್ರಾಣಃ, ವ್ಯಾತ್ತಮಗ್ರಿರ್ವೈಶ್ವಾನರಃ ಸಂವತ್ಸರ ಆತ್ಮಾಶ್ವಸ್ಯ ಮೇಧ್ಯಸ್ಯ|
ದ್ಯೋಃ ಪೃಷ್ಠಮ್ ಅಂತರಿಕ್ಷಮುದರಮ್ ಪೃಥಿವೀ ಪಾಜಸ್ಯಮ್, ದಿಶಃ ಪಾರ್ಶ್ವೆ ಅವಾಂತರದಿಶಃ ಪರ್ಶ್ವವಃ, ಋತವೋಂಗಾನಿ ಮಾಸಾಶ್ಚಾರ್ಧ ಮಾಸಾಶ್ಚ ಪರ್ವಾಣ್ಯ ಹೋರಾತ್ರಾಣಿ ಪ್ರತಿಷ್ಠಾ ನಕ್ಷತ್ರಾಣ್ಯಸ್ಥೀನಿ ನಭೋ ಮಾಸಾಂನ್ಯೂ ವಧ್ಯ ಸಿಕತಾ ಸ್ಸಿಂಧವೋ ಗುದಾ ಯಕೃಚ್ಚ ಕ್ಲೋಮಾ ಗಹನಶ್ಚ ಪರ್ವತಾ ಓಷಧಯಶ್ಚ ವನಸ್ಪತಯಶ್ಚ ಲೋಮಾನ್ಯುದ್ಯನ್ಪೂರ್ವಾರ್ಧೋ ನಿಮ್ಲೋಚಞಜಘನಾರ್ಧೋ ಯದ್ವಿಜೃಂಭತೇ ತದ್ವಿದ್ಯೋತತೇ ಯಾದ್ವಿಧೂನು-ತೇ ತತ್ಸನಯತಿ ಯನ್ಮೇಹತಿ ತದ್ವರ್ಷತಿ ವಾಗೇವಾಸ್ಯ ವಾಕ್|| ಬೃಹದಾರಣ್ಯಕೋಪನಿಷತ್ 1-1-1
ಅಶ್ವಮೇಧ ಯಾಗದಲ್ಲಿ ಅಶ್ವವೇ ಪ್ರಧಾನವಾದುದು. ಹಾಗಾಗಿ ಕ್ರತುವನ್ನು ಅಶ್ವವೆಂದು ಕರೆದಿದೆ. ಇಂತಹ ಅಶ್ವಕ್ಕೆ ಮುಹೂರ್ತವೇ ತಲೆ, ಸೂರ್ಯನೇ ಕಣ್ಣು, ವಾಯುವೇ ಉಸಿರು. ವ್ಯಾತ್ತವು ಅಂದರೆ ತೆರೆದ ಮುಖವು ಅಗ್ನಿಃ - ವೈಶ್ವಾನರನು. ಮೇಧ್ಯವಾದ ಅಶ್ವಕ್ಕೆ ಸಂವತ್ಸರವು ಆತ್ಮ, ದ್ಯುಲೋಕವೇ ಬೆನ್ನು, ಅಂತರಿಕ್ಷವೇ ಉದರ, ಪೃಥಿವಿಯು ಪಾಜಸ್ಯ - ಅಂದರೆ ಪಾದಗಳನ್ನು ಇಡುವ ಹೆಜ್ಜೆಗಳು, ದಿಕ್ಕುಗಳೇ ಪಕ್ಕೆಗಳು, ಅವಾಂತರ ದಿಕ್ಕುಗಳು ಪರ್ಶುಗಳು ಅಂದರೆ ಆಗ್ನೇಯವೇ ಮುಂತಾದ ದಿಕ್ಕುಗಳು ಪಕ್ಕೆಲಬುಗಳು, ಋತಗಳು ಅಂಗಗಳು, ಮಾಸಗಳೂ, ಅರ್ಧಮಾಸಗಳು ಪರ್ವತಗಳು, ಅಹೋರಾತ್ರಿಗಳು, ಪ್ರತಿಷ್ಠೆಗಳು, ನಕ್ಷತ್ರಗಳು ಎಲುಬುಗಳು, ನಭವು ಅಂದರೆ ಅಕಾಶದಲ್ಲಿರುವ ಮೋಡಗಳು. ಉದಯಿಸುವ ಸೂರ್ಯನು ಮೊದಲನೆಯ ಅರ್ಧ, ಅಸ್ತಮಿಸುವ ಸೂರ್ಯನು ಕೆಳಗಿನ ಅರ್ಧ.
ವಿಶ್ವದ ವಿವಿಧ ಅಂಶಗಳೊಂದಿಗೆ ಅಶ್ವದ ಎಲ್ಲ ಸಾದೃಶ್ಯಗಳೂ ಕಾಲದ ಸುತ್ತ ಕೇಂದ್ರೀಕೃತಗೊಂಡಿದ್ದು ಅದನ್ನು ಸಾಂಕೇತಿಕ ಭಾಷೆಯಲ್ಲಿ ವ್ಯಕ್ತಪಡಿಸಲಾಗಿದೆ. ಇಲ್ಲಿ ವಿವರಿಸಿರುವ ಅಶ್ವವು ನಾಲ್ಕು ಕಾಲಿನ ಅಶ್ವವನ್ನಲ್ಲ. ಸಮಯದ ಪರಿಕಲ್ಪನೆಯನ್ನು ಯಜ್ಞದಲ್ಲಿ ಶಾಶ್ವತವಾಗಿ ಸಮರ್ಪಿಸುವುದರ ಬಗ್ಗೆ ಋಷಿಗಳು ವಿವರಿಸಿರುವರು. ದುರದೃಷ್ಟವಶಾತ್ ಕಾಲ ಕ್ರಮೇಣ ಈ ಮಂತ್ರವನ್ನು ಅಶ್ವದ ಆಹುತಿಗೆ ಜೋಡಣೆಮಾಡಲಾಗಿದೆ. ಅಧ್ಯಾತ್ಮದ ಅರ್ಥವನ್ನು ಪಡೆಯಲು ಈ ಯಜ್ಞದ ದೇವತೆಯಾದ ಪ್ರಜಾಪತಿಯ ಪಾತ್ರವು ವಿಶೇಷವಾದದ್ದು ಹಾಗೂ ಇದು ಇದೇ ಮಂಡಲದಲ್ಲಿನ ಮುಂದಿನ ಮಂತ್ರಗಳಲ್ಲಿ (2.1) ಸ್ಪಷ್ಟಪಡಿಸಲಾಗಿದೆ ಹಾಗೂ ಅದರಲ್ಲಿ ಸೃಷ್ಟಿಯ (ಹಿರಣ್ಯಗರ್ಭ) ಬಗ್ಗೆ ವಿವರಿಸಲಾಗಿದೆ.
ಅಶ್ವಮೇಧ ಯಜ್ಞ - ಪ್ರಾಣಾಯಾಮದಂತೆ
ವಪ ಎಂದು ಕರೆಯಲ್ಪಡುವ ಬಲಿಪಶುವಿನ ಹೊಟ್ಟೆ ಮತ್ತು ಎದೆಗಳ ನಡುವಿನ ಭಾಗವನ್ನು ಅಗ್ನಿಗೆ ಅಹುತಿಕೊಡುವುದು ಒಂದು ಪದ್ದತಿ. ಪ್ರೊ.ಕಶ್ಯಪ್ ಅವರು ಅಶ್ವಮೇಧಕ್ಕೆ ಪ್ರಾಣಾಯಾಮದ ಪ್ರಕ್ರಿಯೆಯ ಮೂಲಕ ಗಮನಾರ್ಹವಾದ ಹೋಲಿಕೆಯನ್ನು ಮಾಡುತ್ತಾರೆ. ಪ್ರಾಣಾಯಾಮದಲ್ಲಿ ಉಸಿರನ್ನು ಒಳಗೆಳೆದುಕೊಳ್ಳುವಾಗ ಎದೆ ಮತ್ತು ಹೊಟ್ಟೆಗಳ ನಡುವೆ ಇರುವ ವಪೆಯ ಚಲನೆಯು ಕೆಳಮುಖವಾಗಿರುವುದನ್ನು ಉದರದಲ್ಲಿರುವ ಜಠರಾಗ್ನಿಗೆ ಅರ್ಪಿಸುವುದನ್ನು ಸೂಚಿಸುತ್ತದೆ.
ಪ್ರೇರಣೆ : ಡಾ.ಜಯಂತಿ ಮನೋಹರ ಅವರ Symbolism of Rig-Veda.
ಕನ್ನಡಕ್ಕೆ : ಗುರುಪ್ರಸಾದ್ ಹಾಲ್ಕುರಿಕೆ
No comments:
Post a Comment