Monday, March 30, 2020

ಋಗ್ವೇದ ಭಾಷ್ಯಕಾರರು

ಋಗ್ವೇದ ಭಾಷ್ಯಕಾರರು
ಸಾಯಣಾಚಾರ್ಯರು
(ಕ್ರಿ.ಶ.1315-1382)
ಪರಿಚಯ ಲೇಖನ

ವೈದಿಕ ಭಾಷ್ಯಕಾರರುಗಳಲ್ಲಿ ಸಾಯಣಾಚಾರ್ಯರಿಗೆ ವಿಶೇಷವಾದ ಪೂಜ್ಯಸ್ಥಾನವಿದೆ. ಅವರು ಬರೆದ ವೇದ ಭಾಷ್ಯವು ಅವರ ಅಸಾಧಾರಣ ಯೋಗ್ಯತೆಗೆ ಬೆಳಕಾಗಿದೆ.

ವೇದಸಂಹಿತೆಗಳಿಗೂ ಮತ್ತು ಬ್ರಾಹ್ಮಣಗಳಿಗೂ ಅವರು ಬರೆದಿರುವ ಭಾಷ್ಯಗಳು ಉತ್ಕೃಷ್ಟವಾಗಿರುವುದು ಹಾಗೂ ವೇದಗಳಲ್ಲಿ ಅಡಗಿರುವ ಸೂಕ್ಷ್ಮತತ್ವಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಹಕಾರಿಯಾಗಿದೆ. ಇವರನ್ನು ಹೊರತುಪಡಿಸಿ ಇತರೆ ಭಾಷ್ಯಕಾರರು ಬರೆದಿರುವ ಭಾಷ್ಯವು ವೇದದ ಕೆಲವು ಭಾಗಗಳಿಗೆ ಮಾತ್ರ ಸಂಕ್ಷೇಪವಾಗಿಯೋ ಅಥವಾ ವಿಸ್ತಾರವಾಗಿಯೋ ಬರೆದಿರುವರು. ಸಾಯಣಾಚಾರ್ಯರು ಹಾಗೂ ಅವರ ಹಿರಿಯ ಸಹೋದರ ಮಾಧವಾಚಾರ್ಯರೂ ವಿಜಯನಗರ ಮಹಾರಾಜರ ಆಶ್ರಯ ಪಡೆದು ವೇದಭಾಷ್ಯಗಳನ್ನು ಮತ್ತು ಅನೇಕ ಉತ್ಕೃಷ್ಟ ಗ್ರಂಥಗಳನ್ನು ರಚಿಸಿ ವಿದ್ವಜ್ಜನರ ಮನ್ನಣೆಯನ್ನು ಗಳಿಸಿದ್ದಾರೆ.

ಸಾಯಣರು ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ಬ್ರಾಹ್ಮಣ ವಂಶದಲ್ಲಿ ಜನಿಸಿದವರು. ತಂದೆ ಮಾಯಣ; ತಾಯಿ ಶ್ರೀಮತಿ. ಭಾರದ್ವಾಜಗೋತ್ರ, ಕೃಷ್ಣ ಯಜುರ್ವೇದಿ, ಬೊಧಾಯನ ಶಾಖೆ. ಹಿರಿಯ ಸಹೋದರ - ಮಾಧವಾಚಾರ್ಯ; ಕಿರಿಯ ಸಹೋದರ - ಭೋಗನಾಥ.

ಮಾಧವಾಚಾರ್ಯರು ರಚಿಸಿದ ಕೃತಿಗಳು -
ಪರಾಶರಸ್ಮೃತಿ - ವ್ಯಾಖ್ಯಾ - ಇದು ಪರಾಶರ-ಮಾಧವ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದು ಬಹು ದೊಡ್ಡ ಗ್ರಂಥ.
ಕಾಲನಿರ್ಣಯ ಅಥವಾ ಕಾಲಮಾಧವ
ಜೈಮಿನಿ-ನ್ಯಾಯಮಾಲಾ - ಜೈಮಿನಿಮಹರ್ಷಿಯ ಪೂರ್ವಮೀಮಾಂಸ ದರ್ಶನಕ್ಕೆ ಈ ವ್ಯಾಖ್ಯಾನವು ಪ್ರಮಾಣಗ್ರಂಥ
ಜೀವನ್ಮುಕ್ತಿವಿವೇಕ - ಜೀವನ್ಮುಕ್ತಿ ವಿಚಾರದ ವೇದಾಂತ ಗ್ರಂಥ
ಪಂಚದಶಿ - ಸುಪ್ರಸಿದ್ಧ ಅದ್ವೈತವೇದಾಂತ ಗ್ರಂಥ
ವೈಯಾಸಕನ್ಯಾಯಮಾಲಾ - ವೇದಾಂತಸೂತ್ರಗಳಿಗೆ ವ್ಯಾಖ್ಯಾನ

ಕೊನೆಯ ಎರಡು ಗ್ರಂಥಗಳನ್ನು ಮಾಧವಾಚಾರ್ಯರು ತಮ್ಮ ಗುರುಗಳಾದ ಭಾರತಿತೀರ್ಥರ ಸಹಾಯದಿಂದ ರಚಿಸಿರುವರು.

ಸಾಯಣಾಚಾರ್ಯರ ತಮ್ಮ ಭೋಗನಾಥರು ಕಂಪಣನ ಮಗನಾದ ಎರಡನೇ ಸಂಗಮನಿಗೆ ಸಚಿವರಾಗಿದ್ದರು. ಇವರು ಉತ್ತಮ ಕವಿಗಳು. ಇವರು ರಚಿಸಿದ ಗ್ರಂಥಗಳು -

ರಾಮೋಲ್ಲಾಸ - ರಾಮಾಯಣವನ್ನು ಆಶ್ರಯಿಸಿರುವ ಕಾವ್ಯ
ತ್ರಿಪುರವಿಜಯ - ಈಶ್ವರನ ತ್ರಿಪುರವಧೆಯನ್ನಾಶ್ರಯಿಸಿದ ಗ್ರಂಥ
ಉದಾಹರಣಮಾಲಾ - ಸಂಸ್ಕೃತದ ಅಲಂಕಾರಗಳಿಗೆ ಉದಾಹರಣೆಗಳು.
ಮಹಾಗಣಪತಿಸ್ತವ - ಗಣಪತಿಯ ಸ್ತೋತ್ರ
ಶೃಂಗಾರಮಂಜರೀ - ಶೃಂಗಾರರಸದ್ಯೋತಕ ಗ್ರಂಥ
ಗೌರೀನಾಥಾಷ್ಟಕ - ಗೌರೀನಾಥನ ಕುರಿತ ಎಂಟು ಶ್ಲೋಕಗಳು.

ಗ್ರಂಥಗಳ ಹಾಗೂ ಶಾಸನಗಳ ಆಧಾರದ ಮೇಲೆ ಸಾಯಣಾಚಾರ್ಯರು ವಿಜಯನಗರದ ನಾಲ್ಕು ರಾಜರುಗಳಿಗೆ ಸಂಬಂಧಿಸಿದವರೆಂಬುದು ಸ್ಪಷ್ಟವಾಗುತ್ತದೆ. ಅವರೇ ಕಂಪಣ, ಎರಡನೇ ಸಂಗಮ, ಒಂದನೇ ಬುಕ್ಕ, ಎರಡನೇ ಹರಿಹರ. ಈ ನಾಲ್ಕು ಜನರ ಕಾಲದಲ್ಲಿ ಸಾಯಣಾಚಾರ್ಯರು ಮಂತ್ರಿಪದವಿಯಲ್ಲಿದ್ದು ವಿಜಯನಗರ ಸಾಮ್ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.

ಚತುರ್ವೇದಗಳಿಗೂ ಭಾಷ್ಯವನ್ನು ರಚಿಸಿದ ಸಾಯಣಾಚಾರ್ಯರೇ ಯುದ್ಧರಂಗದಲ್ಲಿ ಅಸಾಮಾನ್ಯ ಯೋಧರಾಗಿ ಕತ್ತಿಯನ್ನು ಹಿಡಿದು ಶೌರ್ಯ ಪ್ರದರ್ಶನಮಾಡಿರುವುದು ಯಾರನ್ನಾದರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಇವರು ಕ್ಲಿಷ್ಟವಾದ ವೇದಮಂತ್ರಗಳಿಗೆ ಅರ್ಥವನ್ನು ತಿಳಿಸುವುದರಲ್ಲಿ ಮಗ್ನರಾದ ಮೀಮಾಂಸಕರು ಮಾತ್ರವಲ್ಲ, ದೊಡ್ಡ ರಾಜ್ಯವನ್ನು ಅಳುವುದರಲ್ಲೂ ದಕ್ಷರು ಮತ್ತು ಸ್ವತಃ ಯುದ್ಧ ರಂಗಕ್ಕಿಳಿದು ಶೌರ್ಯದಿಂದ ಕಾದಬಲ್ಲ ಮಹಾ ಯೋಧರೂ ಆಗಿದ್ದರು. ಇವರು ತಮ್ಮ ರಾಜ ಸಂಗಮನೋಡನೆ ದಂಡೆತ್ತಿ ಹೋಗಿ, ಚೋಳರಾಜನಾದ ಕಂಪನನ್ನೂ, ಗರುಡನಾಗರದ ಪಾಳೆಯಗಾರನನ್ನೂ ಸೋಲಿಸಿದರು.

ಇವರ ಸಾಂಸಾರಿಕ ಜೀವನವೂ ಸುಖಮಯವಾಗಿತ್ತು. ಇವರಿಗೆ ಕಂಪಣ, ಮಾಯಣ ಮತ್ತು ಸಿಂಗಣ ಎಂಬ ಮೂರು ಮಕ್ಕಳಿದ್ದರು. ಕಂಪಣನು ಪ್ರಸಿದ್ಧ ಸಂಗೀತಗಾರನಾದರೆ, ಮಾಯಣನು ಕವಿ. ಸಿಂಗಣನು ವೇದದಲ್ಲಿ, ಅದರಲ್ಲೂ ಪ್ರಮುಖವಾಗಿ ಕ್ರಮ ಮತ್ತು ಜಟಾ ಪಾಠಗಳಲ್ಲಿ ನಿಪುಣ. ಸಾಯಣಾಚಾರ್ಯರು ಎರಡನೇ ಹರಿಹರನ ಆಳ್ವಿಕೆಯ ಅವಧಿಯಲ್ಲಿ ಕ್ರಿ.ಶ.1387ರಲ್ಲಿ ಕಾಲವಾದರು ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ.

ಸಾಯಣಾಚಾರ್ಯರ ಕೃತಿಗಳು
ಸಾಯಣಾಚಾರ್ಯರು ರಚಿಸಿದ ಗ್ರಂಥಗಳಲ್ಲಿ ವೇದಸಂಹಿತ ಮತ್ತು ಬ್ರಾಹ್ಮಣಗಳ ಭಾಷ್ಯಗಳು ಬಹುಮುಖ್ಯವಾದವು. ಇವುಗಳಲ್ಲದೇ ಇವರು ಅನೇಕ ಗ್ರಂಥಗಳನ್ನು ರಚಿಸಿರುವರು. ನಂತರದ ದಿನಗಳಲ್ಲಿ ಕೆಲವು ಸಾಧಾರಣ ಪಂಡಿತರು ಪ್ರಚಾರವನ್ನು ಗಳಿಸುವ ಉದ್ದೇಶದಿಂದ ತಾವು ರಚಿಸಿದ ಕೃತಿಗಳನ್ನು ಸಾಯಣರು ರಚಿಸಿದ್ದೆಂದು ಹೇಳಿಕೊಂಡಿರುವುದು ಕಂಡುಬರುವುದು. ಆದರೆ, ಈ ಕೆಳಗೆ ಸೂಚಿಸಿರುವ ಎಲ್ಲ ಗ್ರಂಥಗಳೂ ಸಾಯಣರದ್ದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ :-

ಸುಭಾಷಿತಸುಧಾನಿಧಿ - ಇದು ಅನೇಕ ಗ್ರಂಥಗಳಿಂದ ಆರಿಸಿ ರಚಿಸಿದ ಸುಭಾಷಿತಗಳ ಸಮುಚ್ಚಯ ಹಾಗೂ ಇದು ಅವರ ಮೊದಲ ಕೃತಿ ಇರಬಹುದು ಎಂದು ಅನಿಸುತ್ತದೆ. ಗ್ರಂಥದ ಕೊನೆಯಲ್ಲಿರುವ ಅಂಕಿತದಿಂದ ಇದು ಕಂಪ ಅಥವಾ ಕಂಪಣರಾಜನ ಮಂತ್ರಿಯಾಗಿದ್ದಾಗ ರಚಿತವಾಯಿತೆಂದು ಕಂಡುಬರುತ್ತದೆ.

ಪ್ರಾಯಶ್ಚಿತ್ತಸುಧಾನಿಧಿ - ಇದಕ್ಕೆ ಕರ್ಮವಿಪಾಕ ಎಂದೂ ಹೆಸರುಂಟು. ಹಿಂದೂ ಧರ್ಮ ಶಾಸ್ತ್ರದಲ್ಲಿ ಮುಖ್ಯ ಭಾಗವಾದ ಪ್ರಾಯಶ್ಚಿತ್ತಗಳ ಕುರಿತು ರಚಿಸಿದ ಗ್ರಂಥ.

ಧಾತುವೃತ್ತಿ - "ಮಾಧಾವೀಯಾ ಧಾತುವೃತ್ತಿ" ಎಂದು ಪ್ರಸಿದ್ಧಿಯಾದ ಗ್ರಂಥ. ಸಂಸ್ಕೃತಧಾತುಗಳ ಪ್ರಮಾಣಭೂತವಾದ ಗ್ರಂಥ. ಪಾಣಿನಿಯ ಧಾತುಪಾಠದಲ್ಲಿರುವ ಎಲ್ಲ ಧಾತುಗಳನ್ನೂ ಈ ಗ್ರಂಥದಲ್ಲಿ ಚರ್ಚಿಸಲಾಗಿದೆ. ಸಾಯಣರು ತಮ್ಮ ಅಣ್ಣ ಮಾಧವಾಚಾರ್ಯರು ನೀಡಿದ ಪ್ರೋತ್ಸಾಹಕ್ಕಾಗಿ ಈ ಗ್ರಂಥವನ್ನು "ಮಾಧಾವೀಯಾ ಧಾತುವೃತ್ತಿ" ಎಂದು ಕರೆದು ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಅಲಂಕಾರಸುಧಾನಿಧಿ - ಇದು ಸಂಸ್ಕೃತದ ಅಲಂಕಾರ ಗ್ರಂಥ. ಇದರ ಪ್ರಮುಖ ವೈಶಿಷ್ಟ್ಯವೆಂದರೆ - ಇದರಲ್ಲಿರುವ ಎಲ್ಲ ಉದಾಹರಣೆಗಳು ಗ್ರಂಥಕರ್ತೃವನ್ನೇ ಹೊಗಳುತ್ತದೆ. ಈ ರೀತಿಯ ವೈಶಿಷ್ಟ್ಯವು ಬೇರಾವ ಗ್ರಂಥದಲ್ಲೂ ಕಂಡುಬರುವುದಿಲ್ಲ.

ಪುರುಷಾರ್ಥಸುಧಾನಿಧಿ - ಪುರುಷಾರ್ಥಕ್ಕೆ ಸಂಬಂಧಿಸಿದ ಪೌರಾಣಿಕ ಶ್ಲೋಕಗಳಿಂದ ಕೂಡಿದೆ.
ಆಯುರ್ವೇದಸುಧಾನಿಧಿ - ಆಯುರ್ವೇದ ಗ್ರಂಥ
ಯಜ್ಞತಂತ್ರಸುಧಾನಿಧಿ - ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ಗ್ರಂಥ.

ವೇದಭಾಷ್ಯಗಳು - ಬುಕ್ಕರಾಜನು ತನ್ನ ಗುರುವಾದ ಮಾಧವಾಚಾರ್ಯರನ್ನು ವೇದಭಾಷ್ಯಗಳನ್ನು ರಚಿಸಿ ಎಂದು ಪ್ರಾರ್ಥಿಸಿದನು. ಮಾಧವಾಚಾರ್ಯರು ಕಾರ್ಯಗೌರವದಿಂದ ಈ ಕೆಲಸಕ್ಕೆ ಕೈಹಾಕದೆ, ತಮ್ಮ ಸಹೋದರ ಸಾಯಣಾಚಾರ್ಯರಿಗೆ ಭಾಷ್ಯರಚನೆ ಮಾಡುವಂತೆ ಅಜ್ಞಾಪಿಸಿ ಅವರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡಿ ಭಾಷ್ಯಗಳನ್ನು ರಚಿಸುವಂತೆ ಮಾಡಿದರು. ಈ ಭಾಷ್ಯಗಳು ಸಾಯಣಾಚಾರ್ಯರ ಅದ್ವಿತೀಯ ಪಾಂಡಿತ್ಯಕ್ಕೆ ಸಾಕ್ಷಿ. ಇವುಗಳಲ್ಲಿ ಅವರ ಪ್ರತಿಭೆಯು ಪ್ರಕಾಶಿಸುವಂತೆ ಅವರ ಬೇರಾವ ಕೃತಿಗಳಲ್ಲೂ ಪ್ರಕಾಶಕ್ಕೆ ಬಂದಿಲ್ಲ. ಆದುದರಿಂದಲೇ ಈ ಭಾಷ್ಯಗಳನ್ನು ಹಿರಿಯ ಸಹೋದರರ ಉಪಕಾರಸ್ಮರಣೆಗಾಗಿ "ಮಾಧಾವೀಯ" ಎಂದೂ ಕರೆಯಲಾಗಿದೆ. ಸಾಯಣಾಚಾರ್ಯರ ವೇದಭಾಷ್ಯಗಳು ಈ ಸಂಹಿತೆಗಳಿಗೆ ಸಂಬಂಧಿಸಿದೆ -

ಕೃಷ್ಣ ಯಜುರ್ವೇದ - ತೈತ್ತಿರೀಯ ಶಾಖಾ ಸಂಹಿತೆ
ಋಗ್ವೇದ ಸಂಹಿತೆ
ಸಾಮವೇದ ಸಂಹಿತೆ
ಶುಕ್ಲಯಜುರ್ವೇದ - ಕಣ್ವ ಸಂಹಿತೆ
ಅಥರ್ವವೇದ ಸಂಹಿತೆ

ಈ ಕೆಳಕಂಡ ಬ್ರಾಹ್ಮಣ, ಅರಣ್ಯಕ ಹಾಗೂ ಉಪನಿಷತ್ತುಗಳಿಗೆ ಸಾಯಣಾಚಾರ್ಯರು ವ್ಯಾಖ್ಯಾನವನ್ನು ಬರೆದಿರುವರು -
ತೈತ್ತಿರೀಯ - ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತು

ಋಗ್ವೇದದಲ್ಲಿನ ಐತರೇಯ ಬ್ರಾಹ್ಮಣ ಹಾಗೂ ಅರಣ್ಯಕ
ಸಾಮವೇದದ - ತಾಂಡ್ಯ(ಪಂಚವಿಂಶ) ಬ್ರಾಹ್ಮಣ, ಷಡ್‌ವಿಂಶ ಬ್ರಾಹ್ಮಣ, ಸಾಮವಿಧಾನ ಬ್ರಾಹ್ಮಣ, ಆರ್ಷೇಯ ಬ್ರಾಹ್ಮಣ, ದೇವತಾಧ್ಯಾಯ ಬ್ರಾಹ್ಮಣ, ಉಪನಿಷತ್ ಬ್ರಾಹ್ಮಣ, ಸಂಹಿತೋಪನಿಷತ್ ಬ್ರಾಹ್ಮಣ, ವಂಶ ಬ್ರಾಹ್ಮಣ

ಶುಕ್ಲ ಯಜುರ್ವೇದದ - ಶತಪಥ ಬ್ರಾಹ್ಮಣ

ಮೇಲೆ ವಿವರಿಸಿರುವ ವೇದಭಾಷ್ಯಗಳ ಪ್ರಕಾರ ಸಾಯಣಾಚಾರ್ಯರು ಪ್ರಥಮವಾಗಿ ಕೃಷ್ಣಯಜುರ್ವೇದಕ್ಕೆ ಭಾಷ್ಯವನ್ನು ರಚಿಸಿ, ನಂತರ ಉಳಿದ ವೇದಗಳಿಗೆ ಭಾಷ್ಯವನ್ನು ರಚಿಸಿರುವರು. ಋಗ್ವೇದವು ನಾಲ್ಕು ವೇದಗಳಲ್ಲಿ ಅಗ್ರ ಸ್ಥಾನವನ್ನು ಪಡೆದಿರುವುದು ಎಲ್ಲರಿಗೂ ಅನಾದಿಕಾಲದಿಂದ ಗೊತ್ತಿರುವ ವಿಷಯ. ಹೀಗಿದ್ದರೂ ಸಾಯಣಾಚಾರ್ಯರು ಮೊದಲಿಗೆ ಕೃಷ್ಣಯಜುರ್ವೇದಕ್ಕೆ ಮೊದಲು ಭಾಷ್ಯಮಾಡಿದ್ದು ಏಕೆ ಹಾಗೂ ಸರಿಯೇ ಎಂಬ ಪ್ರಶ್ನೆಗಳು ಸ್ವಾಭಾವಿಕವಾಗೆ ಉದ್ಭವಿಸುವುದು. ಇದಕ್ಕೆ ಉತ್ತರವನ್ನು ಆಚಾರ್ಯರು ಋಗ್ವೇದಭಾಷ್ಯ ಭೂಮಿಕೆಯಲ್ಲಿ ಕೊಟ್ಟಿರುವರು. ಅದರ ಪ್ರಕಾರ, ವೇದಗಳಿಗೆ ಪ್ರಮುಖ ಪ್ರಯೋಜನವು ಯಜ್ಞಯಾಗಾದಿಗಳು. ಯಾವುದೇ ಯಜ್ಞದಲ್ಲಿ ಪ್ರಮುಖ ಋತ್ವಿಜನು ಅಧ್ವರ್ಯುವು. ಆತನೇ ಯಜ್ಞಕ್ಕೆ ಒಂದು ರೂಪವನ್ನು ಕೊಡುತ್ತಾನೆ- (ಯಜ್ಞಸ್ಯ ಮಾತ್ರಾಂ ಮಿಮಿಮೀತ ಉತ್ವಃ) ಎಂದು ಹೇಳಿದೆ. ಆಗ ಅಧ್ವರ್ಯುವು ಅನುಸರಿಸಬೇಕಾದುದು ಯಜುರ್ವೇದ. ಹೀಗಾಗಿ ಸಾಯಣಾಚಾರ್ಯರು ಭಾಷ್ಯ ರಚಿಸಲು ಮೊದಲಿಗೆ ಯಜುರ್ವೇದವನ್ನೂ ನಂತರ ಎರಡನೇ ಋತ್ವಿಜನಿಗೆ ಬೇಕಾದ ಋಗ್ವೇದ ಸಂಹಿತೆಯನ್ನು ಅರಿಸಿಕೊಂಡಿರುವರು. ಅಲ್ಲದೆ, ಸಾಯಣಾಚಾರ್ಯರು ಯಜುರ್ವೇದಿಗಳು. ಹೀಗಾಗಿ ಅವರು ಆ ವೇದಕ್ಕೇ ಪ್ರಾಧಾನ್ಯವನ್ನು ಕೊಡುವುದು ಸ್ವಾಭಾವಿಕ.

ವೇದಭಾಷ್ಯ ಭೂಮಿಕೆಗಳು
ಸಾಯಣಾಚಾರ್ಯರು ಪ್ರತಿಯೊಂದು ವೇದಭಾಷ್ಯಕ್ಕೂ ಒಂದೊಂದು ಭೂಮಿಕೆಯನ್ನು ಬರೆದಿದ್ದಾರೆ ಹಾಗೂ ಇವುಗಳು ಮುಖ್ಯವಾದವು. ಇವುಗಳಲ್ಲಿ ವೇದಕ್ಕೆ ಸಂಬಂಧಿಸಿದ ಮುಖ್ಯವಾದ ಅಂಶಗಳನ್ನು ಚರ್ಚಿಸಲಾಗಿದೆ.

ತೈತ್ತಿರೀಯ ಭಾಷ್ಯದ ಉಪೋದ್ಘಾತದಲ್ಲಿ, ವೇದಲಕ್ಷಣ, ಅಧಿಕಾರಿ, ವೇದ ಪ್ರಾಮಾಣ್ಯ(ಸಂಕ್ಷಿಪ್ತ), ಎರಡು ವೇದಭಾಗಗಳು(ಒಂದು ಚತುರ್ವಿಧ ಕರ್ಮಕ್ಕೆ ಹಾಗೂ ಮತ್ತೊಂದು ಬ್ರಹ್ಮ ಮತ್ತು ಬ್ರಹ್ಮಜ್ಞಾನಗಳಿಗೆ ಸಂಬಂಧಿಸಿದುದು) ಮತ್ತು ಯಜ್ಞಗಳ ವಿಭಾಗಗಳು(ದರ್ಶ ಮತ್ತು ಪೌರ್ಣಮಾಸಗಳು ಸಮಸ್ತ ಯಜ್ಞಗಳಿಗೂ ಅವಶ್ಯಕವಾದದ್ದು, ಆದ್ದರಿಂದ ಅವುಗಳಿಗೆ ಪ್ರಕೃತಿ ಎಂತಲೂ ಉಳಿದ ಎಲ್ಲ ಯಜ್ಞಗಳಿಗೆ ವಿಕೃತಿ ಎಂತಲೂ ವಿಧಾನಮಾಡಿರುವರು). ಇವೆಲ್ಲವುಗಳ ಬಗೆಗೂ ಚರ್ಚಿಸಲಾಗಿದೆ.

ಋಗ್ವೇದ ಭಾಷ್ಯಭೂಮಿಕೆ ಅತ್ಯಂತ ಉಪಯುಕ್ತವಾದುದು. ವೈದಿಕ ಜ್ಞಾನಕ್ಕೆ ಸಂಬಂಧಿಸಿದ ಮುಖ್ಯ ಪ್ರಶ್ನೆಗಳನ್ನು ಚರ್ಚಿಸಿ, ಪೂರ್ವಪಕ್ಷವನ್ನು ಅನುವಾದ ಮಾಡಿ ಸಿದ್ಧಾಂತವನ್ನು ಸ್ಥಾಪಿಸಲಾಗಿದೆ. ವೇದ ವೇದಾಂಗಾಗಳನ್ನು ಅಭ್ಯಾಸ ಮಾಡುವವರಿಗೆ ಇದು ಅತ್ಯಂತ ಉಪಯುಕ್ತವಾದದ್ದು.

ವೇದಲಕ್ಷಣ, ವೇದಗಳ ಸ್ವತಃಪ್ರಾಮಾಣ್ಯ, ವೇದಪೌರುಷೇಯತ್ವ, ವೇದ ಮತ್ತು ಬ್ರಾಹ್ಮಣ ಎಂಬ ವಿಭಾಗಕ್ಕೆ ಆಧಾರ, ವೇದ ಪ್ರಯೋಜನ ಇವೆಲ್ಲವನ್ನೂ ಸ್ಪಷ್ಟವಾಗಿ ವಿವರಿಸಿ, ವೇದವನ್ನು ಅರ್ಥಸಹಿತವಾಗಿ ತಿಳಿಯುವವನನ್ನು ಪ್ರಶಂಸೆಮಾಡಿ, ಕಡೆಯಲ್ಲಿ ವೇದಾಂಗಗಳನ್ನೂ ಅವುಗಳು ಹೇಗೆ ವೇದಾರ್ಥವನ್ನು ಪ್ರಕಟಿಸುವುದಕ್ಕೆ ಸಹಾಯಕವಾಗುತ್ತದೆ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ.

ಸಾಮವೇದದ ಉಪೋದ್ಘಾತದಲ್ಲಿ ವೇದಲಕ್ಷಣವನ್ನು ಸೂಕ್ಷ್ಮವಾಗಿ ವಿವರಿಸಿ, ಸಾಮಗಾನ, ಗಾನದ ರೀತಿ, ಇವೆಲ್ಲವನ್ನೂ ವಿವರವಾಗಿ ಚರ್ಚಿಸಿದ್ದಾರೆ. ಇಲ್ಲಿ ಕೂಡಾ ಪೂರ್ವಮೀಮಾಂಸಾ ಶಾಸ್ತ್ರದ ಭಾಗಗಳನ್ನು ಉದಾಹರಿಸಿರುವರು. ಸಾಮಗಾನಕ್ಕೆ ಸಂಬಂಧಿಸಿದ 67 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.

ಕಣ್ವ ಸಂಹಿತೆಯ ಉಪೋದ್ಘಾತದಲ್ಲಿ ಶುಕ್ಲಯಜುರ್ವೇದ ಭಾಗಗಳ ವಿಷಯವಾಗಿ ಚರ್ಚಿಸಿ, "ಸ್ವಾಧ್ಯಾಯೋsಧ್ಯೇತವ್ಯಃ" ಎಂಬ ವಾಕ್ಯದ ಅರ್ಥವನ್ನು ತಿಳಿಸಿ, ಅನಂತರ ಶುಕ್ಲಯಜುರ್ವೇದದ 40 ಅಧ್ಯಾಯಗಳ ಮುಖ್ಯ ವಿಷಯಗಳನ್ನು ಸಂಗ್ರಹಿಸಿ ವಿವರಿಸಿರುವರು.

ಅಥರ್ವವೇದಭಾಷ್ಯಭೂಮಿಕೆಯಲ್ಲಿರುವ ಪ್ರಮುಖ ಅಂಶಗಳು - ಪುರಾಣಗಳ ಆಧಾರದಮೇಲೆ ಈ ವೇದವು ರಾಜಪುರೋಹಿತ ಮತ್ತು ಬ್ರಹ್ಮ ಇವರುಗಳಿಗೆ ಅತ್ಯಂತ ಉಪಯುಕ್ತವಾದ ವೇದ. ಇದನ್ನು ಅಭ್ಯಾಸ ಮಾಡುವುದೆಂದರೆ - ಮಂತ್ರಗಳ ಅರ್ಥದ ಬಗ್ಗೆ ಜ್ಞಾನವನ್ನು ಹೊಂದುವುದು, ವೇದವು ಸ್ವತಃ ಪ್ರಾಮಾಣ್ಯವು ಮತ್ತು ಪದ ಶಬ್ದಾರ್ಥ ನಿರ್ಣಯವು ಎಂಬಿವುಗಳು.

ಮೇಲೆ ವಿವರಿಸಿದ ಎಲ್ಲ ಭೂಮಿಕೆಗಳಲ್ಲಿ ಚರ್ಚಿತವಾದ ವಿಷಯಗಳನ್ನು ಎರಡು ಗುಂಪಾಗಿ ವಿಂಗಡಿಸಬಹುದು- ಎಲ್ಲ ವೇದಗಳಿಗೂ ಅನ್ವಯಿಸುವ ಅಂಶಗಳು ಹಾಗೂ ಒಂದೊಂದು ವೇದಕ್ಕೆ ಮಾತ್ರ ಅನ್ವಯಿಸುವುದು.

ಮಂತ್ರ ಮತ್ತು ಬ್ರಾಹ್ಮಣಗಳಿಂದ ಕೂಡಿರುವುದೇ ವೇದದ ಲಕ್ಷಣ. ಇದರಲ್ಲಿ ಮಂತ್ರ ಯಾವುದು ಬ್ರಾಹ್ಮಣ ಯಾವುದು ಎಂಬ ಚರ್ಚೆ, ವೇದವು ಅಪೌರುಷೇಯ, ವೇದ ಪೌರುಷೇಯ ಎಂಬ ನೈಯಾಯಿಕ ಮತದವರ ಖಂಡನೆ, ವೇದಗಳಿಗೆ ಅರ್ಥವಿದೆ, ಉಚ್ಚಾರಣೆ ಮಾತ್ರ ಪ್ರಯೋಜನವಲ್ಲ, ಋಕ್, ಯಜುಸ್, ಸಾಮಗಳಿಗಿರುವ ವ್ಯತ್ಯಾಸಗಳು, ವೇದದಲ್ಲಿ ಉಕ್ತವಾದ ವಿಷಯ (ವೇದದಲ್ಲಿ ಎರಡು ಕಾಂಡಗಳು, ಒಂದು ಕರ್ಮಗಳನ್ನು ವಿವರಿಸುವುದು, ಎರಡನೆಯದು ಬ್ರಹ್ಮಸ್ವರೂಪ, ಬ್ರಹ್ಮಪ್ರಾಪ್ತಿ ಮಾರ್ಗಗಳನ್ನು ತಿಳಿಸುವುದು, ಅಂದರೆ ಧರ್ಮ ಮತ್ತು ಬ್ರಹ್ಮ ಎರಡೇ ವೇದದ ವಿಷಯ, ಇವುಗಳ ಜ್ಞಾನವೇ ವೇದದ ಪ್ರಯೋಜನ) - ಇವೆಲ್ಲವೂ ಚತುರ್ವೇದಗಳಲ್ಲಿನ ಸಾಮಾನ್ಯ ಅಂಶಗಳು.

ಇವುಗಳಲ್ಲದೆ ಆಯಾಯ ವೇದಗಳಿಗೆ ಅನ್ವಯಿಸುವ ವಿಷಯಗಳೂ ಇವೆ. ಅವುಗಳೆಂದರೆ - ಮಾಸೇಷ್ಟಿಗಳು, ವೇದಾಧ್ಯಯನ ಮಾಡಿದವನ ಪ್ರಶಂಸೆ, ವೇದಾಂಗಗಳ ಪರಿಚಯ, ಶುಕ್ಲಯಜುರ್ವೇದದ 40 ಅಧ್ಯಾಯಗಳ ಸೂಕ್ಷ್ಮ ಪರಿಚಯ ಇತ್ಯಾದಿ.

ಸಾಯಣಾಚಾರ್ಯರು - ಶ್ರೇಷ್ಠ ಭಾಷ್ಯಕಾರರು

ವೇದಗಳು ಪುರಾತನ ಗ್ರಂಥಗಳು. ಇವುಗಳಲ್ಲಿನ ಭಾಷೆಗೂ ಈಗ ಬಳಕೆಯಲ್ಲಿರುವ ಭಾಷೆಗೂ ವ್ಯತ್ಯಾಸವಿದೆ. ಕ್ಲಿಷ್ಟವಾದ ವಾಕ್ಯಗಳು, ಸಂದಿಗ್ಧ ಪ್ರಯೋಗಗಳು, ರೂಢಿಯಲ್ಲಿಲ್ಲದ ಪದಗಳು ಇವೇ ಮೊದಲಾದುವು ವೇದಗಳಲ್ಲಿ ವಿಶೇಷವಾಗಿದೆ. ಹೀಗಾಗಿ ವೇದಗಳನ್ನು ಸರಿಯಾಗಿ ತಿಳಿಯಬೇಕಾದರೆ, ಅದಕ್ಕೂ ಹೆಚ್ಚಾಗಿ ಇತರರಿಗೆ ತಿಳಿಸಬೇಕಾದರೆ, ವೈದಿಕ ಸಂಪ್ರದಾಯಜ್ಞನಾಗಿರಬೇಕು. ಈ ಸಂಪ್ರದಾಯ ಜ್ಞಾನವು ಆರು ವೇದಾಂಗಗಳಿಂದ ತಿಳಿಯುತ್ತದೆ. ವೇದಾಂಗಗಳು ತಿಳಿಸುವುದೇನೆಂದರೆ ;-

ಶಿಕ್ಷಾ - ವೇದವನ್ನು ಸ್ವರಪೂರ್ವಕವಾಗಿ ಉಚ್ಚರಿಸುವ ರೀತಿಯನ್ನು ವಿವರಿಸುತ್ತದೆ;
ವ್ಯಾಕರಣ - ಪದಗಳ ರೂಪನಿಷ್ಪತ್ತಿಯ ಮೂಲಕ, ಎಂತಹ ಕ್ಲಿಷ್ಟ ಪ್ರಯೋಗಗಳನ್ನೂ ತಿಳಿಯಲು ಸಹಕಾರಿಯಾಗಿದೆ;
ಛಂದಸ್ಸು - ಮಂತ್ರಗಳ ಛಂದಸ್ಸನ್ನು ತಿಳಿಸುವುದು;
ಜ್ಯೋತಿಷ - ಯಜ್ಞಯಾಗಾದಿಗಳನ್ನು ಮಾಡಬೇಕಾದ ಕಾಲವನ್ನು ನಿರ್ಣಯ ಮಾಡಲು ಸಹಕಾರಿ;
ಕಲ್ಪ - ಯಜ್ಞಯಾಗಾದಿಗಳನ್ನು ಮಾಡುವ ವಿಧಾನವನ್ನು ವಿವರಿಸುತ್ತದೆ.

ಇವುಗಳೊಂದಿಗೆ ಉಪಾಂಗಗಳಾದ ಪುರಾಣ, ಇತಿಹಾಸ, ಧರ್ಮಶಾಸ್ತ್ರ, ಅನುಕ್ರಮಣಿ ಹಾಗೂ ಮಂತ್ರಾರ್ಥನಿರ್ಣಯಕ್ಕೆ ಅವಶ್ಯವಾದ ಮೀಮಾಂಸಶಾಸ್ತ್ರ ಇವೆಲ್ಲವುಗಳನ್ನೂ ಚೆನ್ನಾಗಿ ಅಭ್ಯಾಸಮಾಡಿ, ನಂತರವೇ ವೇದವ್ಯಾಖ್ಯಾನಕ್ಕೆ ತೊಡಗಬೇಕು.

ಸಾಯಣಾಚಾರ್ಯರು ಸ್ವತಃ ಮೇಲೆ ವಿವರಿಸಿರುವ ಎಲ್ಲಾ ಭಾಗಗಳನ್ನೂ ಸಾಂಗವಾಗಿ ಅಭ್ಯಾಸಮಾಡಿದ ನಂತರವೇ ವ್ಯಾಖ್ಯಾನವನ್ನು ಮಾಡುವ ಪ್ರಯತ್ನ ಮಾಡಿರುವರು. ವೇದವನ್ನು ಅರಿಯಬೇಕೆಂದಿರುವ ಪ್ರತಿಯೊಬ್ಬರೂ ಈ ಎಲ್ಲ ವಿಷಯಗಳನ್ನು ತಿಳಿದೇ ಮುಂದುವರೆಯಲಿ ಎಂಬ ಉದ್ದೇಶದಿಂದಲೇ, ಉಪೋದ್ಘಾತದಲ್ಲಿ ಎಲ್ಲ ಅಂಶಗಳನ್ನೂ ಚರ್ಚೆಮಾಡಿದ್ದಾರೆ.

ಸಾಯಣಾಚಾರ್ಯರು ಮತ್ತು ಆಧುನಿಕ ಪಂಡಿತರು

ಸಾಯಣಾಚಾರ್ಯರ ಭಾಷ್ಯಗಳು ಸಂಪ್ರದಾಯಾನುಸಾರವಾಗಿ ವೇದಾಭ್ಯಾಸ ಮಾಡುವವರಿಗೆ ಮಾತ್ರವಲ್ಲದೆ, ಆಧುನಿಕ ಜನಾಂಗಕ್ಕೂ ಬಹಳ ಉಪಕಾರಿಯಾಗಿದೆ. ಭಾಷಾಶಾಸ್ತ್ರ ಮತ್ತು ಪುರಾಣಗಳನ್ನು ಪರಸ್ಪರ ಹೋಲಿಸಿ, ಅವುಗಳ ಸಹಾಯದಿಂದ ವೇದಾರ್ಥವನ್ನು ಅರಿಯುವ ಪ್ರಯತ್ನದಲ್ಲಿರುವವರಿಗೂ ಸಾಯಣಭಾಷ್ಯದಲ್ಲಿ ಸ್ವಾರಸ್ಯವಾದ ಅಂಶಗಳಿವೆ.

ವೇದವ್ಯಾಖ್ಯಾನಗಳಲ್ಲಿ ಸಾಯಣಭಾಷ್ಯಗಳಷ್ಟು ಸಮಗ್ರವಾಗಿ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿರುವ ಭಾಷ್ಯಗಳು ಇಲ್ಲವೆಂದೇ ಹೇಳಬೇಕು.

ಅಪಾರವಾದ ವೇದರಾಶಿಯಲ್ಲಿ ಅಡಗಿರುವ ವಿಶೇಷವಾದ ಅಂಶಗಳನ್ನು ಸಂಶೋಧನೆ ಮಾಡುವ ಕಾರ್ಯದಲ್ಲಿರುವ ವಿದ್ವಾಂಸರಿಗೂ ಕೂಡ, ಸಂಪ್ರದಾಯವಾಗಿ ಬಂದಿರುವ ಅರ್ಥವನ್ನು ಅರಿಯುವುದು ಮುಖ್ಯ. ಅವರ ಪ್ರಯತ್ನಕ್ಕೆ ಇದೇ ಅಡಿಗಲ್ಲೆನ್ನಬಹುದು. ಈ ಸಂಪ್ರದಾಯಾನುಸಾರವಾದ ಅರ್ಥವು ಸಾಯಣಭಾಷ್ಯದಷ್ಟು ಸ್ಪಷ್ಟವಾಗಿಯೂ, ಸಂರ್ಣವಾಗಿಯೂ ಬೇರಾವ ಗ್ರಂಥದಲ್ಲಿಯೂ ಇಲ್ಲ. ಸಾಯಣಭಾಷ್ಯಗಳು ಇಲ್ಲದಿದ್ದಲ್ಲಿ ವೇದಾಭ್ಯಾಸವು ಯಾವ ಮಟ್ಟದಲ್ಲಿರುತ್ತಿತ್ತೆಂಬುದನ್ನು ಊಹಿಸಲೂ ಅಸಾಧ್ಯ.

ಮೂಲ : ಮೂಲ : ಋಗ್ವೇದ ಸಂಹಿತಾ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್.
ಮುಂದಿನ ಲೇಖನ :- ವೇದಸಂಹಿತೆಗಳ ಪದಪಾಠಕಾರರು - ಒಂದು ಸಮೀಕ್ಷೆ



  
  

No comments:

Post a Comment

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ...