Monday, March 30, 2020

ಬ್ರಾಹ್ಮಣ ಮತ್ತು ಅರಣ್ಯಕಗಳಲ್ಲಿ ಕಂಡ ಉಲ್ಲೇಖಗಳು

ಬ್ರಾಹ್ಮಣ ಮತ್ತು ಅರಣ್ಯಕಗಳಲ್ಲಿ ಕಂಡ ಉಲ್ಲೇಖಗಳು

ವೇದಗಳಲ್ಲಿನ ಅನೇಕ ಮಂತ್ರಗಳಲ್ಲಿ ಆಧ್ಯಾತ್ಮಿಕ ಜ್ಞಾನವು ಒಳಗೊಂಡಿರುವುದು. ವೇದಮಂತ್ರಗಳಲ್ಲಿನ ಆಧ್ಯಾತ್ಮಿಕ-ಮಾನಸಿಕ ಅರ್ಥಗಳನ್ನು ಬ್ರಾಹ್ಮಣ ಗ್ರಂಥಗಳಲ್ಲಿ ಸಂಕೇತರೂಪಗಳಲ್ಲಿ ಗುರುತಿಸಿ ಮತ್ತು ದಾಖಲಿಸಿರುವುದು ಆಸಕ್ತಿಯನ್ನು ಹುಟ್ಟಿಸುವುದು. ಈ ಸಾಂಕೇತಿಕ ರೂಪಗಳನ್ನು ಸಂಹಿತೆಗಳೊಂದಿಗೆ ಅನುಸರಿಸಬಹುದಾದ ಪಠ್ಯಗಳ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವೇದ ಗ್ರಂಥ ಸಂಗ್ರಹದಲ್ಲಿ ಸಂಹಿತೆ ಮತ್ತು ಬ್ರಾಹ್ಮಣ ಪಠ್ಯಗಳ ನಂತರ ಅರಣ್ಯಕಗಳು ಕಂಡುಬರುವುದು.

ವೇದಸಂಹಿತೆಗಳ ಆಧ್ಯಾತ್ಮಿಕ ವ್ಯಾಖ್ಯಾನಗಳನ್ನು ಪುನರ್ನಿರ್ಮಿಸಲು ವೇದಕಾಲೋತ್ತರದ ಅನೇಕ ಋಷಿಮುನಿಗಳು ಮತ್ತು ಆಚಾರ್ಯರುಗಳು ಮೂರು ಮಹಾನ್ ಪ್ರಯತ್ನವನ್ನು ಮಾಡಿರುವುದನ್ನು ಶ್ರೀ ಅರವಿಂದರು ಗುರುತಿಸಿರುವರು. ಅವುಗಳಲ್ಲಿ ಬ್ರಾಹ್ಮಣ ಗ್ರಂಥಗಳ ಕಾಲವು ಮೊದಲನೆಯದು. ಉಪನಿಷತ್ತುಗಳು ಮತ್ತು ಭಗವದ್ಗೀತೆಯ ಕಾಲಗಳು ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಕಾಲಗಳು. ಋಗ್ವೇದ ಮಂತ್ರಗಳಲ್ಲಿ ಕಂಡುಬರುವ ಆಧ್ಯಾತ್ಮಿಕ ವ್ಯಾಖ್ಯಾನಗಳ ಸಂಪ್ರದಾಯಗಳನ್ನು ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಮಹಾಭಾರತಗಳಲ್ಲಿ ಮುಂದುವರೆಸಿರುವುದರ ಬಗ್ಗೆ ಅನೇಕ ಉಲ್ಲೇಖಗಳನ್ನು ಕಪಾಲಿ ಶಾಸ್ತ್ರಿಗಳು ಉದ್ಧರಿಸಿರುವರು.

ಬ್ರಾಹ್ಮಣ ಗ್ರಂಥಗಳಲ್ಲಿನ ಅನೇಕ ಉದ್ಧೃತ ಭಾಗಗಳು ವೇದಮಂತ್ರಗಳಲ್ಲಿನ ಅರ್ಥಗಳ ಬಗ್ಗೆ ವಿವರಣೆಗಳನ್ನು ಅವುಗಳ ವಿನಿಯೋಗದೊಂದಿಗೆ ನೀಡುತ್ತವೆ. ಬೇರೆ ಬೇರೆ ಯಜ್ಞಗಳಲ್ಲಿ ಅನುಸರಿಸುವ ವಿಧಿ-ವಿಧಾನಗಳ ನಡುವೆ ಕಂಡುಬರುವ ಆತ್ಮ ಮತ್ತು ವಿಶ್ವಗಳ ಬಗ್ಗೆ ಬ್ರಾಹ್ಮಣ ಗ್ರಂಥಗಳಲ್ಲಿ ಚರ್ಚೆಗಳನ್ನು ನಾವು ಕಾಣಬಹುದು. ಈ ಚರ್ಚೆಗಳು ನಮ್ಮನ್ನು ದೇವತೆಗಳು ಮತ್ತು ಯಜ್ಞಗಳ ಮಾನಸಿಕ ಅಂಶಗಳೆಡೆಗೆ ಕೊಂಡೊಯ್ಯುವುದು. ಇವುಗಳು ಯಾಸ್ಕ ಮುನಿಗಳು ತಮ್ಮ ನಿರುಕ್ತದಲ್ಲಿ ಉಪಯೋಗಿಸಿರುವ ವೇದ ಪದಗಳ ವ್ಯುತ್ಪತ್ತಿಯ ಹಿನ್ನೆಲೆಯನ್ನು ಪ್ರಕಟಪಡಿಸುವುದು. ಅಂತಿಮ ಸತ್ಯದ ಬಗೆಗಿನ ಆಧ್ಯಾತ್ಮಿಕ ಚರ್ಚೆಗಳ ಬಗ್ಗೆ ಅನೇಕ ಉದ್ಧೃತ ಭಾಗಗಳನ್ನು ಬ್ರಾಹ್ಮಣ ಗ್ರಂಥಗಳಲ್ಲಿ ಕಾಣಬಹುದು.

ವೇದಗಳಲ್ಲಿನ ನೈಜ ಇಂಗಿತಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದೃಢಪಡಿಸಲು ಕಪಾಲಿ ಶಾಸ್ತ್ರಿಗಳು ಬ್ರಾಹ್ಮಣ ಗ್ರಂಥಗಳಿಂದ ಅನೇಕ ಉದ್ಧೃತ ಭಾಗಗಳನ್ನು ಉಲ್ಲೇಖಿಸಿರುವರು. ಅವುಗಳ ಪ್ರಕಾರ ಯಜ್ಞದಲ್ಲಿ ಯಜಮಾನನು ಸ್ವತಃ ತನ್ನನ್ನೇ ಹವಿಸ್ಸನ್ನಾಗಿ ಅರ್ಪಿಸುವನು, ಇದು ಅಂತರ್ಯಜ್ಞದ ಪರಿಕಲ್ಪನೆಯನ್ನು ಸಮರ್ಥಿಸುತ್ತದೆ.

ಐತರೇಯ ಬ್ರಾಹ್ಮಣದಲ್ಲಿನ ಹೇಳಿಕೆ : ಯಜಮಾನೋ ವೈ ಯೂಪಃ
"ಯಜಮಾನನೇ ಬಲಿಪೀಠ - ಯೂಪ. ಅವನೇ ಕಲ್ಲು ಅಥವಾ ಬಂಡೆ. ಅಗ್ನಿಯು ದೇವತೆಗಳ ಗರ್ಭಾಶಯ. ಅಗ್ನಿಯ ಮೂಲಕ ನೀಡಿದ ಹವಿಸ್ಸುಗಳಿಂದ ಜನಿಸಿದ ಯಜಮಾನನು ತನ್ನ ಸ್ವರ್ಣಶರೀರದೊಂದಿಗೆ ಸ್ವರ್ಗದೆಡೆಗೆ ಉರ್ಧ್ವಮುಖವಾಗಿ ಹೊರಡುವನು." ಮುಂದುವರೆದು ಅದು,"ಯಾರು ತಮ್ಮನ್ನೇ ದೇವತೆಗಳಿಗೆ (ಇಲ್ಲಿ ಅಗ್ನಿಯೇ ಎಲ್ಲ ದೇವತೆಗಳನ್ನೂ ಪ್ರತಿನಿಧಿಸುವನು) ಅರ್ಪಿಸಿಕೊಳ್ಳುವರೋ, ಅವರು ಸ್ವರ್ಗದೆಡೆಗೆ ಹೋಗುವರು."

ಕೌಷಿತಕ ಬ್ರಾಹ್ಮಣದಲ್ಲೂ ಇದೇ ರೀತಿಯ ಹೇಳಿಕೆಯು ಕಂಡುಬರುವುದು : "ಯಾರು ತಮ್ಮನ್ನೇ ಅರ್ಪಿಸಿಕೊಳ್ಳುವರೋ ಅವರು ಅಗ್ನಿ ಹಾಗೂ ಸೋಮರುಗಳನ್ನು ಪ್ರವೇಶಿಸುವರು; ಉಪವಾಸದ ದಿನ ತಮ್ಮನ್ನೇ ಪಶುವನ್ನಾಗಿ ಅರ್ಪಿಸಿಕೊಂಡಲ್ಲಿ ಅವರು ತಮ್ಮನ್ನೇ ವಿಮೋಚನೆಗೊಳಿಸಿಕೊಳ್ಳುವರು. ಈ ರೀತಿಯಾಗಿ ಎಲ್ಲ ಬಂಧನಗಳಿಂದ ವಿಮೋಚನೆಗೊಂಡು, ಯಜಮಾನನು ಯಜ್ಞವನ್ನು ಮುಂದುವರಿಸುವನು"(10.3).

ಬೇರೆ ಬೇರೆ ಬ್ರಾಹ್ಮಣ ಗ್ರಂಥಗಳಲ್ಲಿ ಕಂಡುಬರುವ ಈ ರೀತಿಯ ಉದ್ಧೃತಗಳು ಯಜ್ಞದ ಸಾಂಕೇತಿಕ ಗುಣಗಳನ್ನು ಸ್ಪಷ್ಟವಾಗಿ ತೋರ್ಪಡಿಸುವುದು.

ಶತಪಥ ಬ್ರಾಹ್ಮಣದಲ್ಲಿನ ಹೇಳಿಕೆಯನ್ನು ಗಮನಿಸೋಣ:

ತದೇಷ ಶ್ಲೋಕೋ ಭವತಿ ವಿಧ್ಯಯಾ ತದರೋಹಂತಿ ಯತ್ರ ಕಾಮಃ ಪರಾಗತಾಃ ನ ತತ್ರ ದಕ್ಷಿಣಾ ಯಾಂತಿ ನಾವಿದ್ವಾoಸಸ್ತಪಸ್ವಿನಃ ಇತಿ ನ ಹೈವ ತಂ ಲೋಕಂ ದಕ್ಷಿಣಾಭಿರ್ನ ತಪಸಾ ಅನೇವಂಬಿದ್ ಅಷ್ಮುತಾ ಏವಂಬಿದಮ್ ಹೈವ ಸ ಲೋಕಃ ಶತಪಥಬ್ರಾಹ್ಮಣೇ|

"ಇದೇ ನಿರ್ಣಯ(ಶ್ಲೋಕ). ಎಲ್ಲಿ ಆಸೆಗಳನ್ನು ಬಿಡುವರೋ ಅಲ್ಲಿಂದ ಅವರು ತಮ್ಮಲ್ಲಿನ ಜ್ಞಾನದೊಂದಿಗೆ ಮೇಲೇರುವರು. ಅಲ್ಲಿಗೆ ಜ್ಞಾನವಿಲ್ಲದೆ ಆಹುತಿಗಳು ತಲಪುವುದಿಲ್ಲ."

ಹಾಗೆಯೇ ಋಷಿಮುನಿಗಳು ಮತ್ತು ವೇದ ದೇವತೆಗಳಿಗೆ ಸಾಂಕೇತಿಕ ವಿವರಣೆಗಳನ್ನು ಶತಪಥ ಬ್ರಾಹ್ಮಣದಲ್ಲಿ ಕಾಣಬಹುದು.

8-1-1-6 ಪ್ರಾಣವೇ ವಶಿಷ್ಠ - ಪ್ರಾಣೋ ವೈ ವಶಿಷ್ಠ ಋಷಿಃ
8-1-1-9 ಮನಸ್ಸೇ ಭಾರದ್ವಾಜ ಋಷಿ - ಮನೋ ವೈ ಭರದ್ವಾಜೋ ಋಷಿಃ
8-1-2-6 ಕಿವಿಗಳೇ ವಿಶ್ವಾಮಿತ್ರ ಋಷಿ - ಶ್ರೋತ್ರಂ ವೈ ವಿಶ್ವಾಮಿತ್ರ ಋಷಿಃ
8-1-2-3 ಜಮದಗ್ನಿ ಋಷಿಯೇ ಪ್ರಜಾಪತಿ - ಪ್ರಜಾಪತಿ ವೈ ಜಮದಗ್ನಿ ಋಷಿಃ
8-1-2-9 ಮಾತುಗಳೇ ವಿಶ್ವಕರ್ಮಾ ಋಷಿ - ವಾಗ್ವೈ ವಿಶ್ವಕರ್ಮಾ ಋಷಿಃ

ಯಾಸ್ಕಾಚಾರ್ಯರ ನಿರುಕ್ತದಲ್ಲೂ ಇದೇ ರೀತಿಯ ನಿರ್ವಚನಗಳನ್ನು ಕಾಣಬಹುದು:

ಮೇಧಾವಿನಾಮಾನ್ಯುತ್ತರಾಪಿ ಚತುರ್ವಿಂಶತಿಃ|
ಕಣ್ವ ಇತಿ ಮೇಧಾವಿನಾಮ|
ಗೃತ್ಸ್ನ ಇತಿ ಮೇಧಾವಿನಾಮ| ಋಭುಃ ಇತಿ ಮೇಧಾವಿನಾಮ|

"ಕಣ್ವ ಎಂದರೆ ಬುದ್ಧಿಜೀವಿಗಳು, ಗೃತ್ಸ್ನ ಮತ್ತು ಋಭು ಎಂದರೆ ಹೆಚ್ಚಿನ ಬೌದ್ಧಿಕ ಶಕ್ತಿಯನ್ನು ಹೊಂದಿರುವ ಜನಗಳು (ಋಷಿಗಳು)."

ವೇದಗಳಲ್ಲಿ ಉಲ್ಲೇಖಿಸಲಾದ 33 ದೇವ-ದೇವತೆಗಳನ್ನೂ ಶತಪಥ ಬ್ರಾಹ್ಮಣದಲ್ಲಿ ಸಾಂಕೇತಿಕವಾಗಿ ವಿವರಿಸಲಾಗಿದೆ :

ಕತಮೆ ತೇ ತ್ರಯತ್ರಿಂಶತ್ ಇತಿ ಅಷ್ಟೌ ವಸವಃ|
ಏಕಾದಶಃ ರುದ್ರಾಃ ದ್ವಾದಶಾದಿತ್ಯಾಃ ತ ಏಕತ್ರಿಂಶತ್ ಇಂದ್ರಶ್ಚೈವ ಪ್ರಜಾಪತಿಶ್ಚ ತ್ರಯಸ್ತ್ರಿಂಶಾವಿತಿ||

ಕತಮೇ ವಸವಃ ಇತಿ| ಅಗ್ನಿಶ್ಚ ಪೃಥಿವೀ ಚ ವಾಯುಶ್ಚಾಂತರಿಕ್ಷಂ ಚಾದಿತ್ಯಶ್ಚ ಘೌಶ್ವ ಚಂದ್ರಮಾಶ್ವ ನಕ್ಷತ್ರಾಣಿ ಚೈತೆ ವಸವ ಏತೇಷು ಹಿದಂ ಸರ್ವೇ ವಸುಹಿತಂ ಏತೇ ಹಿದಂ ಸರ್ವೇ ವಾಸಯಂತೆ ತಧ್ಯದಿದಂ ಸರ್ವಂ ವಾಸಯಂತೆ ತಸ್ಮಾದ್ ವಸವ ಇತಿ| ಕತಮೆ ರುದ್ರ ಇತಿ| ಕತಮ ಏಕೋ ದೇವ ಇತಿ ಸ ಬ್ರಹ್ಮೋsತ್ಯಾದಿತ್ಯಾ ಚಾತ್ರತೆ || ಶತಪಥ ಬ್ರಾಹ್ಮಣೇ

"ಅಗ್ನಿ, ಪೃಥ್ವಿ, ವಾಯು, ಅಂತರಿಕ್ಷ, ಆದಿತ್ಯ, ದ್ಯೌಃ, ಚಂದ್ರಮಾ ಮತ್ತು ನಕ್ಷತ್ರಗಳನ್ನು ಅಷ್ಟವಸುಗಳೆಂದು ಕರೆಯಲಾಗುವುದೇಕೆಂದರೆ ಅವುಗಳು ಸಮಸ್ತ ಸೃಷ್ಟಿಗಳ ವಾಸಸ್ಥಾನವಾಗಿರುವುದರಿಂದ. ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಮತ್ತು ಆತ್ಮ ಸೇರಿ ಅವುಗಳನ್ನು ಏಕಾದಶರುದ್ರರೆಂದು ಕರೆಯಲಾಗುವುದು. ಹನ್ನೆರಡು ಮಾಸಗಳೇ ದ್ವಾದಶ ಆದಿತ್ಯರುಗಳು, ಇಂದ್ರನೇ ವಿದ್ಯುಶ್ಚಕ್ತಿ (ಸ್ಥಾನಯೀತುನಃ), ಪ್ರಜಾಪತಿಯೇ ಸೃಜನಶೀಲ ಶಕ್ತಿ ಮತ್ತು ಇವೆಲ್ಲ ದೇವತೆಗಳನ್ನೂ ನಿಯಂತ್ರಿಸುವವನೇ ಬ್ರಹ್ಮನ್".

ಬ್ರಾಹ್ಮಣ ಗ್ರಂಥಗಳಲ್ಲಿ ಅನೇಕ ದೊಡ್ಡದಾದ ಮತ್ತು ಸಣ್ಣ ಪುಟ್ಟ ಆಖ್ಯಾಯಿಕಗಳು ಇರುವುದು. ಇವುಗಳನ್ನು ನೈಜ ಘಟನೆಗಳೆಂದು ಪರಿಗಣಿಸಲಾಗುವುದಿಲ್ಲ. ಇಂತಹ ಆಖ್ಯಾಯಿಕೆಗಳಲ್ಲಿ ಆಚಾರ್ಯರು ದೇವರು ಮತ್ತು ಮಾನಸಿಕ ತತ್ತ್ವಗಳ ನಿಗೂಢಾರ್ಥಗಳನ್ನು ಗುಪ್ತವಾಗಿ ಅಳವಡಿಸಿರುವರು. ತಾಂಡ್ಯ ಬ್ರಾಹ್ಮಣದಲ್ಲಿ ಇಂತಹ ಆಖ್ಯಾಯಿಕೆಗಳನ್ನು ಗಮನಿಸಬಹುದು. ಉದಾಹರಣೆಗೆ - ಒಂದು ಘಟನೆಯಂತೆ ವಾಗ್ದೇವತೆಯು ದೇವತೆಗಳನ್ನು ತ್ಯಜಿಸಿ ನೀರೊಳಗೆ ಮತ್ತು ವನಸ್ಪತಿಗಳೊಳಗೆ ಪ್ರವೇಶಿಸಿದಳು (6-5-10-12) ಎಂಬುದಾಗಿ. ಮತ್ತೊಂದು ಕಥೆಯ ಪ್ರಕಾರ ಯಾಗ ಶಾಲೆಯಿಂದ ಯಜ್ಞನು ಅಶ್ವರೂಪವನ್ನು ತಾಳಿ ದೇವತೆಗಳಿಂದ ಓಡಿಹೋದನು (ತಾಂಡ್ಯ ಬ್ರಾಹ್ಮಣ (6-7-18) ಎಂದು.

ಶತಪಥ ಮತ್ತು ಐತರೇಯ ಬ್ರಾಹ್ಮಣಗಳಲ್ಲಿ (2-1-6-8 ಮತ್ತು 1-4-23, 6-2-11) ದೇವ-ದಾನವರ ನಡುವಿನ ಯುದ್ಧಗಳ ಬಗ್ಗೆ ವಿವರಗಳಿರುವುದು. ಇವುಗಳನ್ನು ಭೂಮಿಯ ಮೇಲಾಗಲಿ ಅಥವಾ ಅಂತರಿಕ್ಷಾದಲ್ಲಾಗಲಿ ನಡೆದ ಯುದ್ಧಗಳ ದಾಖಲೆಗಳನ್ನಾಗಿ ಪರಿಗಣಿಸಲಾಗುವುದಿಲ್ಲ. ಈ ರೀತಿಯ ಘಟನೆಗಳನ್ನು ಅನುಗುಣವಾದ ವೇದ ಮಂತ್ರಗಳಿಂದ ಆಮದಾದ ವಿಷಯಗಳೆಂದು ಪರಿಗಣಿಸಬಹುದು ಹಾಗೂ ಈ ವಿಷಯಗಳನ್ನು ಸಾಂಕೇತಿಕವಾಗಿ ಗಮನಿಸಿದಾಗ ಆ ಘಟನೆಗಳ ಅಂತರಂಗದ ಸಂಘಟಿತ ಅರ್ಥವು ಹೊಳೆಯುವುದು. ಶತಪಥ ಬ್ರಾಹ್ಮಣದಲ್ಲಿ ಒಂದು ಅಸಕ್ತಿಯುತವಾದ ಕಥೆಯೆಂದರೆ - ಮನಸ್ಸು ಮತ್ತು ಮಾತುಗಳ ನಡುವೆ ನಡೆದ ವಾದ-ವಿವಾದಗಳು. ಇದು ಅನೇಕ ಮಾನಸಿಕ ಒಳನೋಟಗಳನ್ನು ಬಹಿರಂಗಪಡಿಸುತ್ತದೆ. ಇದೇ ರೀತಿಯ ಅಲೋಚನೆಗಳು ಐತರೇಯ ಬ್ರಾಹ್ಮಣದಲ್ಲೂ ಕಂಡುಬರುವುದು. ಅದರ ಪ್ರಕಾರ, "ಶ್ರದ್ಧಾ ಮತ್ತು ಸತ್ಯ, ಇವೆರಡರ ಜಂಟಿ ಪ್ರಯತ್ನಗಳಿಂದ ಸಾಧಕನು ಸ್ವರ್ಗವನ್ನು ಹೊಂದಬಹುದು." ಎಂದು:

ಶ್ರದ್ಧಾ ಪತ್ನಿ ಸತ್ಯಂ ಯಜಮಾನಃ| ಶ್ರದ್ಧಾ ಸತ್ಯಂ ತದಿತ್ಯುತ್ತಮಂ ಮಿಥುನಮ್|
ಶ್ರದ್ಧಾ ಸತ್ಯೇನ ಮಿಥುನೇನ ಸ್ವರ್ಗಾನ್ ಲೋಕಾನ್ ಜಯತೀತಿ|| (ಐ.ಬ್ರಾ.)

ಬ್ರಾಹ್ಮಣ ಗ್ರಂಥಗಳ ಪ್ರಮುಖ ಉದ್ದೇಶವು ವಿವಿಧ ಯಜ್ಞಗಳಲ್ಲಿನ ಪ್ರಕ್ರಿಯೆ ಹಾಗೂ ಕಾರ್ಯವಿಧಾನಗಳ ಬಗ್ಗೆ ವಿವರಿಸುವುದಾದರೂ, ಅವುಗಳಲ್ಲಿ ಯಜ್ಞಕ್ಕೆ ಸಂಬಂಧಿಸಿದ ವಿವಿಧ ಅರ್ಥಗಳನ್ನು ಕಾಣಬಹುದು. ಶತಪಥ ಬ್ರಾಹ್ಮಣದಲ್ಲಿ - "ಪ್ರಜಾಪತಿಯೇ ಯಜ್ಞ, ಏಷ ವೈ ಪ್ರತ್ಯಕ್ಷಂ ಯಜ್ಞೋಯತ್ ಪ್ರಜಾಪತಿಃ| (4-3-4-3) ಮತ್ತು "ಯಜ್ಞವೇ ವಿಷ್ಣು ಹಾಗೂ ಆದಿತ್ಯ., ಯಜ್ನೋ ವೈ ವಿಷ್ಣುಃ| ಸ ಯಃ ಯಾಜ್ನೋsಸೌ ಆದಿತ್ಯಃ| (14-1-1-16), "ಯಜ್ಞವನ್ನು ಆಚರಿಸುವುದು ಉತ್ತಮ ಕಾರ್ಯ", ಯಜ್ನೋ ವೈ ಶ್ರೇಷ್ಠತಮಂ ಕರ್ಮ (1-7-3-5). ಒಟ್ಟಿನಲ್ಲಿ ಹೇಳುವುದಾದರೆ ಎಲ್ಲ ಉತ್ತಮ ಕಾರ್ಯಗಳನ್ನೂ ಯಜ್ಞವನ್ನಾಗಿ ಪರಿಗಣಿಸಬಹುದು.

ಪುರುಷಸೂಕ್ತದಲ್ಲಿನ ಆಲೋಚನೆಗಳು ಶತಪಥ ಬ್ರಾಹ್ಮಣ ಗ್ರಂಥದಲ್ಲೂ ಪ್ರತಿಧ್ವನಿಸಿದ್ದು ಅದರಲ್ಲಿ ಯಜ್ಞದಿಂದ ಉಂಟಾಗಿರುವ ಸಮಸ್ತ ಸೃಷ್ಟಿ ಕ್ರಿಯೆಗಳನ್ನು ಸವಿವರವಾಗಿ ವರ್ಣಿಸಲಾಗಿದೆ. ಇವುಗಳನ್ನು ತೈತ್ತಿರೀಯ ಬ್ರಾಹ್ಮಣದಲ್ಲೂ ಕಾಣಬಹುದು :

ವಿಶ್ವ ಸೃಜಾಗಂ ಸಹಸ್ರವತ್ಸರಮ್| ಏತೇನ ವೈ ವಿಶ್ವಸೃಜ ಇದಂ ವಿಶ್ವಮಸೃಜತ್ ಯದ್ವಿಶ್ವಮಸೃಜಂತ| ತಸ್ಮಾದ್ವಿಶ್ವಸೃಜಹ| ವಿಶ್ವಮೇನಾನುಪ್ರಜಾಯತೆ| ಬ್ರಾಹ್ಮಣಸ್ಸಾಯುಜ್ಯoಗಸಾಲೋಕತಾಂ ಯಾಂತಿ||

ಇದೇ ಪಠ್ಯವು (ಹನ್ನೊಂದನೇ ಕಾಂಡದ) ಐದು ವಿಧದ ಯಜ್ಞಗಳ ಬಗ್ಗೆ - ಅಂದರೆ - ಭೂತಯಜ್ಞ, ಮನುಷ್ಯಯಜ್ಞ, ಪಿತೃಯಜ್ಞ, ದೇವಯಜ್ಞ ಹಾಗೂ ಬ್ರಹ್ಮಯಜ್ಞಗಳ ಬಗ್ಗೆಯೂ ವಿವರಿಸುತ್ತದೆ. ಇಲ್ಲಿ ಸ್ವಾಧ್ಯಾಯಯಜ್ಞ ಅಂದರೆ ವೇದಾಧ್ಯಯನದ ಬಗ್ಗೆ ಬ್ರಹ್ಮಯಜ್ಞದ ರೂಪಾಂತರವೆಂಬುದಾಗಿ ವರ್ಣಿಸಲಾಗಿದೆ. ಅಂದರೆ ವೇದಾಧ್ಯಯನವು ಬ್ರಹ್ಮಯಜ್ಞವೇ ಆಗುವುದು:

"ಋಗ್ವೇದದ ಅಧ್ಯಯನವು ಹಾಲನ್ನು ಅರ್ಪಿಸಿದಂತೆ; ಯಜುರ್ವೇದದ ಅಧ್ಯಯನ ಮಾಡುವುದು ಆಜ್ಯವನ್ನು ಸಮರ್ಪಿಸಿದಂತೆ; ಸಾಮವೇದವನ್ನು ಅಧ್ಯಯನ ಮಾಡುವುದು ಸೋಮರಸವನ್ನು ಅರ್ಪಿಸಿದಂತೆ; ಅಥರ್ವಾಂಗೀರಸದ ಅಧ್ಯಯನವು ಮೇದಸ್ಸನ್ನು ಅರ್ಪಿಸಿದಂತೆ"(1-1-5-7).

ತೈತ್ತಿರಿಯ ಸಂಹಿತೆಯಲ್ಲಿನ ಬ್ರಾಹ್ಮಣ ಉದ್ಧೃತದಲ್ಲಿನ ಮತ್ತೊಂದು ಸಾಂಕೇತಿಕ ಹೇಳಿಕೆಯು ಇಂದ್ರನು ವೃತ್ರಾಸುರನನ್ನು ಸಂಹಾರಮಾಡಿದ ಘಟನೆಯನ್ನು ವಿವರಿಸುವುದೇನೆಂದರೆ - "ಯಜ್ಞವೇ ಸಿಡಿಲು - ವಜ್ರ, ಮಾನವನ ಶತ್ರುವೇ ರೋಷ, ಉದ್ವೇಗ - ಕ್ಷುದ್. ಹಸಿವನ್ನು ಮಾನವನು ಒಪ್ಪಿಕೊಳ್ಳದಿದ್ದಾಗ, ಅವನು ಶತ್ರುವನ್ನು ತಿನ್ನದೇ ಸಿಡಿಲಿನಂತೆ ನೇರವಾಗಿ ಹೊಡೆಯುವನು". (ತೈತ್ತೀರಿಯ ಸಂಹಿತೆ 1-6-7-4):

ವಜ್ರೋ ವೈ ಯಜ್ಞಃ ಕ್ಷುತ್ ಖಲು ಮನುಷ್ಯಸ್ಯ ಭ್ರಾತೃವ್ಯೋ ಯದನಾಶ್ವಾನುಪವಸತಿ ವಜ್ರೇಣೈವ ಸಾಕ್ಷಾತ್ ಕ್ಷುದಂ ಭ್ರಾತೃವ್ಯ ಹಂತಿ| ಯಜಮಾನೋ ವೈ ಪುರೊಡಶಃ ಪಶವ ಏತೇ ಆಹುತೀ ಪದಭಿತಃ ಪುರೋಡಶಮೇತೇ ಆಹುತಿ| (ತೈತ್ತಿರೀಯ ಸಂಹಿತೆ).
ವೃತ್ರವು ಹಸಿವೆಂಬುದಾಗಿ ತೈತ್ತಿರೀಯದಲ್ಲಿ ಸ್ಪಷ್ಟವಾಗಿ ಸಂಕೇತಿಸಲಾಗಿದೆ. (2-4-12-6).
ಮತ್ತು 1.5.2.3ರ ಮಂತ್ರದಲ್ಲಿ ಅರ್ಪಿಸಬೇಕಾದ ಪುರೋಡಶಾ ಉಂಡೆಯೇ ಸ್ವತಃ ಯಜಮಾನನು - ಅವನೇ ಪಶು - ಬಲಿ." ಪ್ರಜಾಪತಿಯು ತನ್ನದೇ ಅಂಗ - 'ವಪ' ವನ್ನು ಅರ್ಪಿಸುವನು - ಪ್ರಜಾಪತಿರಾತ್ಮಾನೋ ವಪಾಮುದಕ್ಖಿದತ್ - ತೈ. ಸಂ
ಸರ್ವೆಭ್ಯೋ ವಾ ಏಷ ದೇವತೇಭ್ಯ ಆತ್ಮಾನಾಂ ಆಲಭತೇ ಯೋ ದೀಕ್ಷತೆ | ಅಗ್ನಿಃ ಸರ್ವಾ ದೇವತಾಃ | ಸ ಯದಗ್ನಿಷ್ಠೋಮಿಯಂ ಪಶುಮಾಲಭತೆ ಸರ್ವೆಭ್ಯ ಏವ ದೇವತೇಭ್ಯಃ ಯಜಮಾನಃ ಆತ್ಮಾನಂ ನಿಷ್ಕ್ರಣಿತೆ |

ಮತ್ತೊಂದು ಮಂತ್ರ(1-2 - 1.4)ದಲ್ಲಿ, "ಯಜಮಾನನು ತನ್ನೆಲ್ಲವನ್ನೂ ದೇವತೆಗಳಿಗೆ ಅರ್ಪಿಸುವನು. ಎಲ್ಲ ದೇವತೆಗಳೂ ಅಗ್ನಿಯೆ. ಅವನು ಅಗ್ನಿಸ್ತೋಮೀಯ ವಿಧಿಯಲ್ಲಿ ತನ್ನನ್ನೇ ಪಶುವನ್ನಾಗಿ ಅರ್ಪಿಸಿಕೊಳ್ಳುವನು ಮತ್ತು ದೇವತೆಗಳು ಅವನನ್ನು (ಯಜಮಾನ) ಪರಿಪೂರ್ಣನನ್ನಾಗಿ ಮಾಡುವರು."

ತೈತ್ತಿರಿಯ ಬ್ರಾಹ್ಮಣದಲ್ಲಿನ ಎಂಟನೇ ಪ್ರಪಾಠಕದಲ್ಲಿನ ಎರಡನೇ ಕಾಂಡದಲ್ಲಿ ಋಗ್ವೇದದಲ್ಲಿನ (10-129) ನಾಸದೀಯ ಸೂಕ್ತದ ಸಂಪೂರ್ಣ ಪಾಠವು ಕಂಡುಬರುವುದು. ಹೀಗೆ ಈ ರೀತಿಯ ಪಾಠಗಳು ಬೇರೆ ಬೇರೆ ಕಡೆಗಳಲ್ಲಿ ಕಂಡುಬಂದರೂ, ಅವುಗಳ ಪ್ರಧಾನ ಉದ್ದೇಶವು ಯಜ್ಞದಲ್ಲಿನ ವಿವಿಧ ಪ್ರಕ್ರಿಯೆಗಳ ಬಗೆಗಿನ ವಿಧಿ ವಿಧಾನಗಳನ್ನು ವಿವರಿಸುವುದೇ ಆಗಿರುವುದು.

ಬ್ರಾಹ್ಮಣ ಗ್ರಂಥಗಳಲ್ಲಿ ಯಜ್ಞಕಾರ್ಯದಲ್ಲಿ ವಿವಿಧ ದೇವತೆಗಳನ್ನು ಆಹ್ವಾನಿಸುವುದಕ್ಕೆ ಸಂಬಂಧಿಸಿದ ಮಂತ್ರಗಳು-ವಿನಿಯೋಗಗಳ ಉಪಯೋಗಗಳ ಬಗ್ಗೆ ವಿಧಿಗಳು ಹಾಗೂ ಅದರೊಂದಿಗೆ ಅಧ್ಯಾತ್ಮಿಕ ವಿಷಯಗಳನ್ನು ಒಳಗೊಂಡಿರುವುದು. ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅಥವಾ ನಿರ್ದಿಷ್ಟ ಫಲವನ್ನು ಹೊಂದಲು ನಿರ್ದಿಷ್ಟ ಮಂತ್ರಗಳನ್ನು ನಿಗದಿಪಡಿಸಲಾಗಿದೆ.

ಬ್ರಾಹ್ಮಣ ಗ್ರಂಥದ ಕರ್ತೃಗಳಾದ ಋಷಿ ಮತ್ತು ಅಚಾರ್ಯರುಗಳಿಗೆ ಪ್ರಪಂಚದಲ್ಲಿ ಆರೋಗ್ಯಯುತ ಜೀವನಕ್ಕಾಗಿ ದೈವೀ ಶಕ್ತಿಯನ್ನು ಆಹ್ವಾನಿಸುವ ಪ್ರಾಮುಖ್ಯತೆಯ ಅರಿವಿತ್ತು. ಅಲ್ಲದೇ ಅವರಿಗೆ ಬಾಹ್ಯ ಹಾಗೂ ಅಂತರ್ಯಜ್ಞಗಳಲ್ಲಿ ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಭಾವಗಳನ್ನು ಈ ದೇವತೆಗಳು ಉಂಟುಮಾಡುವುದರ ಬಗ್ಗೆಯೂ ಅರಿವಿತ್ತು. ಆದರೆ, ಪ್ರಾಪಂಚಿಕ ಪ್ರಯೋಜನಗಳನ್ನು ಪಡೆಯುವುದರಲ್ಲಿ ಅಸಕ್ತಿಯುಳ್ಳ ಜನಗಳು ಯಜ್ಞದಲ್ಲಿನ ಬಾಹ್ಯ ಕ್ರಿಯೆಗಳಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡತೊಡಗಿದರು. ಆದರೆ, ಆರಣ್ಯಕ ಮತ್ತು ಉಪನಿಷತ್ತುಗಳ ಕಾಲದಲ್ಲಿ, ಕಾಲಕ್ರಮೇಣ, ಆಧ್ಯಾತ್ಮಿಕ ಅನ್ವೇಷಣೆಗಳಿಗೆ ಪುನಃ ಪ್ರಾಮುಖ್ಯತೆ ಬಂದಿತು.

ಆರಣ್ಯಕ ಗ್ರಂಥಗಳು
ಆರಣ್ಯಕ ಗ್ರಂಥಗಳು ಬ್ರಾಹ್ಮಣ ಗ್ರಂಥ ಮತ್ತು ಉಪನಿಷತ್ತುಗಳನ್ನು ಸೇರಿಸುವ ಸೇತುವೆ ಆಗಿರುವುದು. ಈ ಗ್ರಂಥಗಳು ಪ್ರಮುಖವಾಗಿ ಗೃಹಸ್ಥ ಕರ್ತವ್ಯಗಳಿಂದ ನಿವೃತ್ತಿಗೊಂಡ ಹಾಗೂ ಶಾಂತಿಯನ್ನು ಅರಸುತ್ತಾ ಅರಣ್ಯದಲ್ಲಿ ವಾಸಿಸಲು ಇಚ್ಛಿಸುವ ಜನಗಳೆಡೆಗೆ ಆಧಾರಿತವಾಗಿದೆ. ಈ ಗ್ರಂಥಗಳಲ್ಲೂ ಯಜ್ಞ ವಿಧಾನಗಳ ಬಗ್ಗೆ ವಿವರಣೆಗಳು ಕಂಡುಬರುವುದು. ಆದರೆ, ಅವುಗಳಲ್ಲಿ ಹೆಚ್ಚಾಗಿ ಸಾಂಕೇತಿಕತೆಗೆ, ವಿಶೇಷವಾಗಿ ಅಂತರ್ಯಜ್ಞದ ಸಾಂಕೇತಿಕತೆಯೆಡೆಗೆ ಒತ್ತು ಕಂಡುಬರುವುದು.

ವಿಶಿಷ್ಟವಾಗಿ ಆರಣ್ಯಕ ಗ್ರಂಥಗಳು ಬ್ರಾಹ್ಮಣ ಗ್ರಂಥಗಳ ಉಪಾಂತ ಅಧ್ಯಾಯಗಳಾಗಿವೆ. ಕೆಲವು ಸಮಯದಲ್ಲಿ ಅವುಗಳು ಬೇರೆಯದೇ ಆದ ಗ್ರಂಥಗಳಾಗಿಯೂ ಕಂಡುಬರುವುದು. ಉದಾಹರಣೆಗೆ : ಋಗ್ವೇದಕ್ಕೆ ಬೇರೆಯದೇ ಆದ ಆರಣ್ಯಕವಿರುವುದು - ಅದೇ ಐತರೇಯ ಆರಣ್ಯಕ ಹಾಗೂ ಇದು ಋಗ್ವೇದದ ಐತರೇಯ ಬ್ರಾಹ್ಮಣ ಗ್ರಂಥದೊಂದಿಗೆ ಸಂಯೋಜಿತವಾಗಿದೆ. ಆರಣ್ಯಕಗಳನ್ನು ಬ್ರಾಹ್ಮಣ ಗ್ರಂಥಗಳ ಕಡೆಯ ಅಧ್ಯಾಯಗಳನ್ನಾಗಿಯೂ ಪರಿಗಣಿಸಲಾಗಿದೆ. ಶುಕ್ಲ ಯಜುರ್ವೇದದ ಶತಪಥ ಬ್ರಾಹ್ಮಣ ಹಾಗೂ ಸಾಮವೇದದ ಛಾಂದೋಗ್ಯ ಬ್ರಾಹ್ಮಣಗಳಲ್ಲೂ ಆರಣ್ಯಕಗಳು ಕಡೆಯಲ್ಲಿ ಕಂಡುಬರುವುದು. ಅವುಗಳಲ್ಲಿ ನಿಗೂಢವಾದ ಆಲೋಚನೆಗಳು ಹಾಗೂ ಧಾರ್ಮಿಕ ಸಿದ್ಧಾಂತಗಳು ಮತ್ತು ತಾತ್ವಿಕ ಚರ್ಚೆಗಳು ಕಂಡುಬರುವುದು. ಇದಕ್ಕೆ ಉದಾಹರಣೆಯೆಂದರೆ - ಋಗ್ವೇದಕ್ಕೆ ಸಂಬಂಧಿಸಿದ ಐತರೇಯ ಆರಣ್ಯಕ ಮತ್ತು ಕೃಷ್ಣ ಯಜುರ್ವೇದಕ್ಕೆ ಸಂಬಂಧಿಸಿದ ತೈತ್ತಿರೀಯ ಆರಣ್ಯಕಗಳು.

ಆರಣ್ಯಕಗಳಲ್ಲಿನ ಕೆಲವು ಉದ್ಧೃತಭಾಗಗಳನ್ನು ಈ ಕೆಳಗೆ ಗಮನಿಸೋಣ:

"ತಸೈವಮ್ ವಿದುಷೋ ಯಜ್ಞಸ್ಯಾತ್ಮಾ ಯಜಮಾನ; ಶ್ರದ್ಧಾ ಪತ್ನಿ ಶರೀರಮಿದ್ಧ್ಮಮ್"
ಯಾರಿಗೆ ಇದು ಅರಿವಾಗುವುದೋ ಅವರಿಗೆ, ಯಜ್ಞದ ಯಜಮಾನ ಅವರೆ, ನಂಬಿಕೆಯೇ ಪತ್ನಿ ಮತ್ತು ಶರೀರವೇ ಇಂಧನ" ಇವುಗಳು ಆರಣ್ಯಕ ಗ್ರಂಥಗಳಲ್ಲಿ ಅನೇಕ ಕಡೆಗಳಲ್ಲಿ ಕಂಡುಬರುವುದು. ಉಪನಿಷತ್ತುಗಳೊಂದಿಗೆ ಸಂಯೋಜಿತಗೊಂಡ ಆರಣ್ಯಕಗಳನ್ನು ಆರಣ್ಯಕೋಪನಿಷತ್ತ್ ಎಂದು ಕರೆಯಲಾಗುವುದು - ಉದಾ: ಶುಕ್ಲ ಯಜುರ್ವೇದಕ್ಕೆ ಸಂಬಂಧಿಸಿದ ಬೃಹದಾರಣ್ಯಕೋಪನಿಷತ್. ವೇದಾಂತ ಸಂಪ್ರದಾಯಗಳು ಆರಣ್ಯಕ ಹಾಗೂ ಉಪನಿಷತ್ತುಗಳು ಜೋಡಿಸಿ ಅವುಗಳನ್ನು ಜ್ಞಾನಕಾಂಡ ಎಂದು ಮತ್ತು ವೇದ ಸಂಹಿತೆಗಳು ಹಾಗೂ ಬ್ರಾಹ್ಮಣಗಳನ್ನು ಜೋಡಿಸಿ ಕರ್ಮಕಾಂಡ ಎಂದು ಕರೆಯುತ್ತಾರೆ. ಋಗ್ವೇದ ಸಂಹಿತೆಗಳಲ್ಲಿ ಗಹನವಾದ ನಿಗೂಢ ಜ್ಞಾನಗಳು ಸಾಂಕೇತಿಕತೆಯ ಪರದೆಯ ಹಿಂದೆ ಅಡಗಿದ್ದು ಅವುಗಳನ್ನು ಆರಣ್ಯಕ ಹಾಗೂ ಉಪನಿಷತ್ತುಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.

ಪ್ರೇರಣೆ : ಡಾ.ಜಯಂತಿ ಮನೋಹರ ಅವರ ಕೃತಿ : Symbolism of Rig-Veda
ಕನ್ನಡಕ್ಕೆ : ಗುರುಪ್ರಸಾದ್ ಹಾಲ್ಕುರಿಕೆ







No comments:

Post a Comment

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ...