ಋಗ್ವೇದದ ದೇವತೆಗಳು
ಯಾ ತೇನೋಚ್ಯತೇ ಸಾ ದೇವತಾ - ಮಂತ್ರಗಳಲ್ಲಿ ಪ್ರತಿಪಾದಿಸಲ್ಪಡುವ ವಿಷಯಗಳೇ ಆಯಾ ಮಂತ್ರಕ್ಕೆ ದೇವತೆಗಳು. ಒಂದು ಮಂತ್ರದಲ್ಲಿ ಅಗ್ನಿಸಂಬಂಧಿತ ವಿಷಯಗಳಿದ್ದರೆ ಆ ಮಂತ್ರಕ್ಕೆ ಅಗ್ನಿಯೇ ದೇವತೆ.
ಒಂದು ಮಂತ್ರಕ್ಕೆ ಅಥವಾ ಅನೇಕ ಮಂತ್ರಗಳಿಂದ ಕೂಡಿದ ಸೂಕ್ತಕ್ಕೆ ಒಂದೇ ದೇವತೆ ಇರಬಹುದು. ಹಾಗೆಯೇ ಒಂದು ಸೂಕ್ತದಲ್ಲಿ ವಿವಿಧ ಮಂತ್ರಗಳಿಗೆ ಬೇರೆ ದೇವತೆಗಳಿರಬಹುದು. ಸಾಧಾರಣವಾಗಿ ಒಂದು ಸೂಕ್ತಕ್ಕೆ ಅಥವಾ ಮಂತ್ರಕ್ಕೆ ಒಂದೇ ದೇವತೆ ಇರುವುದು.
ಋಗ್ವೇದದಲ್ಲಿನ ಪ್ರಮುಖ ದೇವತೆಗಳು - ಅಗ್ನಿ, ಇಂದ್ರ, ವರುಣ, ಅಶ್ವಿನಿ ದೇವತೆಗಳು, ಮರುತ್ತು, ವಾಯು, ಆದಿತ್ಯ, ಸವಿತೃ, ಉಷಾ, ರಾತ್ರಿಃ, ಮಿತ್ರ, ವಿಷ್ಣು, ರುದ್ರ, ಸೋಮ, ಅಪಃ, ಮುಂತಾದವರು. ಅಗ್ನಿ ಹಾಗೂ ಇಂದ್ರ ದೇವತೆಗಳಿಗೆ ಅನೇಕ ಸೂಕ್ತಗಳಿವೆ. ಪ್ರತಿ ಮಂಡಲದ ಸೂಕ್ತಗಳ ಜೋಡಣೆಯಲ್ಲಿ ಮೊದಲು ಅಗ್ನಿ, ನಂತರ ಇಂದ್ರ ದೇವತೆಗಳ ಸೂಕ್ತಗಳಿದ್ದು ನಂತರ ಇತರ ದೇವತೆಗಳ ಸೂಕ್ತಗಳಿರುವುದು. 9ನೇ ಮಂಡಲದಲ್ಲಿ ಮಾತ್ರ ಎಲ್ಲ ಸೂಕ್ತಗಳಿಗೂ ಪವಮಾನಃ ಸೋಮಃ ಎಂಬ ಒಂದೇ ದೇವತೆ. ಋಷಿಗಳೂ, ಛಂದಸ್ಸುಗಳು ಮಾತ್ರ ಬೇರೆ.
ಮಂತ್ರಗಳಲ್ಲಿ ಮೇಲೆ ವಿವರಿಸಿರುವ ದೇವತೆಗಳಲ್ಲದೆ ಅಲ್ಲಲ್ಲಿ ಕೆಲವು ಮಂತ್ರಗಳಲ್ಲಿ ನದಿಗಳು, ಗ್ರಾವಾಣಃ, ಜ್ಞಾನಂ, ಬಾಣ, ಬತ್ತಳಿಕೆ, ಯಜ್ಞವೇದಿ, ಊಲೂಖಲ ಇತ್ಯಾದಿ ನಿರ್ಜಿವ ವಸ್ತುಗಳೂ ದೇವತೆಗಳಾಗಿರುವುದನ್ನು ಕಾಣಬಹುದು. ಇದಲ್ಲದೆ ರಾಜರನ್ನು ಕುರಿತ ದಾನಸ್ತುತಿ, ಇಬ್ಬರು ಪುರುಷರ ಅಥವಾ ದೇವತೆಗಳ ಸಂವಾದವೂ ಅನೇಕ ಮಂತ್ರಗಳಿಗೆ ದೇವತೆಗಳಾಗಿರುವುದು. 10ನೇ ಮಂಡಲದಲ್ಲಿ ಇಂತಹ ಕ್ಷುದ್ರದೇವತೆಗಳಿರುವ ಸೂಕ್ತಗಳನ್ನು ನೋಡಬಹುದು.
ಋಗ್ವೇದ ಕಾಲದಲ್ಲಿ ಜನರು ದೇವತೆಗಳನ್ನು ಈಗಿನ ಕಾಲದಂತೆ ಮನೆಗಳಲ್ಲಿ ಪೂಜಿಸುತ್ತಿರಲಿಲ್ಲ. ಕೇವಲ ಯಜ್ಞ ಯಾಗಾದಿಗಳಲ್ಲಿ ಮಾತ್ರ ಅವರನ್ನು ಆಹ್ವಾನಿಸಿ ಪೂಜಿಸುತ್ತಿದ್ದರು. ಹಾಗಾಗಿ ಋಗ್ವೇದದಲ್ಲಿ ವಿವರಿಸಿರುವ ಕರ್ಮಗಳು ಬಡವರಿಗೆ ಆಚರಿಸಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಕೇವಲ ಶ್ರೀಮಂತರು ಮಾತ್ರ ಆಚರಿಸಲು ಸಾಧ್ಯವಾಗುತ್ತಿತ್ತು. ಯಜ್ಞ ಯಾಗಾದಿಗಳನ್ನು ಮಾಡುವ ಕರ್ತೃವು ಧನಿಕ ಹಾಗೂ ಉದಾರಿಯಾಗಿರಬೇಕು. ಅದಕ್ಕೆ ಬೆಳೆಬಾಳುವ ಅನೇಕ ಪದಾರ್ಥಗಳು ಬೇಕಿದ್ದು ಜೊತೆಗೆ ಅನೇಕ ಋತ್ವಿಕ್ಕುಗಳು ಇರಬೇಕಿತ್ತು. ಕಾಲಕ್ರಮದಲ್ಲಿ ಬಡವರು ಅಥರ್ವವೇದದಲ್ಲಿ ಸೂಚಿಸಿರುವ ಮಾಟ ಮಂತ್ರಗಳಿಗೆ ಮೊರೆಹೋದರು. ಋತ್ವಿಕ್ಕುಗಳಿದೆ ಬದಲಾಗಿ ಅಲ್ಪತೃಪ್ತರಾದ ಮಾಟಗಾರರೇ ಅವರಿಗೆ ಪುರೋಹಿತರಾದರು.
ಋಗ್ವೇದದಲ್ಲಿ ಬಹುಪಾಲು ದೇವತೆಗಳನ್ನು ಪ್ರಾರ್ಥಿಸುವುದು ಸಂಸಾರದಿಂದ ಮುಕ್ತಿ ಅಥವಾ ಸ್ವರ್ಗಾದಿ ಸುಖವನ್ನು ಪಡೆಯುವ ಸಲುವಾಗಲ್ಲ, ಬದಲಿಗೆ ಆಯುಸ್ಸು, ಐಶ್ವರ್ಯ, ವೀರ್ಯ, ಸಂತಾನ ಇತ್ಯಾದಿ ಪ್ರಾಪಂಚಿಕ ಸುಖಗಳನ್ನು ಪಡೆಯುವ ಸಲುವಾಗಿ. ಇಷ್ಟಲ್ಲದೆ, ಶತ್ರುನಾಶ ಅಥವಾ ಜಯ, ಆರೋಗ್ಯ, ಅಪಾರ ಪ್ರಮಾಣದ ಆಹಾರ ಮತ್ತು ಸೋಮರಸಗಳನ್ನು ನೀಡುವಂತೆ ಬೇಡುತ್ತಿದ್ದರು. ಇವೇ ಜೀವನದ ಮುಖ್ಯ ಗುರಿಗಳಂತೆ ಕಾಣುತ್ತಿದ್ದವು. ಈ ರೀತಿಯ ಬೇಡಿಕೆಗಳು ಅವರಿಗೆ ಆ ಕಾಲದಲ್ಲಿ ತಪ್ಪೆಂಬ ಭಾವನೆಯೇ ಮುಡಿದಂತೆ ಕಾಣುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಮಂತ್ರಗಳಲ್ಲಿ ದೇಹದ ನಶ್ವರತೆ, ಮಾಯೆಯಿಂದ ಕೂಡಿದ ಜೀವನ ಇಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದು.
ಋಗ್ವೇದದ ಮಂತ್ರಗಳು ಕರ್ಮಕ್ಕೆ ಮಾತ್ರ ಉಪಯೋಗಗಳೆಂದ ಮಾತ್ರಕ್ಕೆ ಅವು ಯಜುರ್ವೇದ ಮಂತ್ರಗಳಂತೆ ಸಂಪೂರ್ಣವಾಗಿ ಕರ್ಮಕ್ಕೆ ಅಧೀನವಾಗಿಲ್ಲ. ಈ ಮಂತ್ರಗಳಲ್ಲಿ ಸರಳತೆ ಹಾಗೂ ನಿಷ್ಕಪಟತೆ ಎದ್ದು ಕಾಣುತ್ತದೆ. ಹಲವಾರು ಸ್ತೋತ್ರಗಳು ಹೃದಯಾಂತರಾಳದಿಂದ ಬರುತ್ತದೆ ಹಾಗೂ ಅವುಗಳಲ್ಲಿ ಕಪಟತೆ ಇರುವುದಿಲ್ಲ.
ಋಗ್ವೇದದ ಮಂತ್ರಗಳನ್ನು ಉಚ್ಚರಿಸಿ ದೇವತೆಗಳನ್ನು ಪ್ರಾರ್ಥಿಸಿದಾಗ ಅವರು ಸಹಾಯ ಮಾಡುತ್ತಿದ್ದರು. ಅಂದರೆ, ಈ ದೇವತೆಗಳಿಗೆ ಅಕಾರವಿದೆಯೇ? ಇದ್ದಲ್ಲಿ ಎಂತಹುದು? ಸಾಧಾರಣವಾಗಿ ಋಗ್ವೇದದ ದೇವತೆಗಳೆಲ್ಲ ಪ್ರಕೃತಿಯ ಒಂದೊಂದು ಅಂಶವೂ ಆಕಾರವನ್ನು ಧರಿಸಿ ದೇವತೆಗಳಾಗಿ ಪರಿಣಮಿಸಿದೆ. ಉಷಸ್ಸು ವೇದಕಾಲದ ಋಷಿಗಳಿಗೆ ಆಶ್ಚರ್ಯಕರವಾದದ್ದು ಹಾಗೂ ಪೂಜೆಗೆ ಅರ್ಹವಾದದ್ದು. ಇಂತಹ ಪ್ರಕೃತಿಯ ಅಂಶಗಳು ದೇವತೆಗಳಾದವು. ವೇದದ ದೇವತೆಗಳು ಅರ್ಧ ಮನುಷ್ಯಸ್ವಭಾವವುಳ್ಳವರಾಗಿದ್ದು ಉಳಿದರ್ಧ ತಮ್ಮ ಪ್ರಕೃತಿಯ ಮೂಲಭೂತ ಭಾಗವಾಗಿ ಉಳಿದಿದ್ದಾರೆ.
ಶಬ್ದಶಾಸ್ತ್ರಜ್ಞರು ಕೇವಲ ಮೂರು ದೇವತೆಗಳನ್ನು ಮಾತ್ರ ಪರಿಗಣಿಸುತ್ತಾರೆ. ಭೂಮಿಯಲ್ಲಿ ಅಗ್ನಿ, ಆಕಾಶದಲ್ಲಿ ವಾಯು ಅಥವಾ ಇಂದ್ರ ಮತ್ತು ಊರ್ಧ್ವ ಲೋಕಗಳಲ್ಲಿ ಸೂರ್ಯ.
ದೇವತೆಗಳ ವೈಯುಕ್ತಿಕ ಲಕ್ಷಣಗಳನ್ನು ಪರಿಶೀಲಿಸುವ ಮೊದಲು ಕೆಲವು ವಿಷಯಗಳನ್ನು ಗಮನಿಸಬೇಕು. ಋಗ್ವೇದದಲ್ಲಿನ ದೇವತೆಗಳಿಗೂ ನಂತರ ಪುರಾಣಕಾಲದ ದೇವತೆಗಳಿಗೂ ವ್ಯತ್ಯಾಸವಿದೆ. ಈ ವ್ಯತ್ಯಾಸವು ಕಾಲಾನುಕ್ರಮದಲ್ಲಿ ಬಂದಿವೆ. ವೇದಗಳಲ್ಲಿನ ಪ್ರಮುಖ ದೇವತೆಗಳಿಗೆ ಪುರಾಣದಲ್ಲಿ ಸ್ಥಾನವೇ ಇಲ್ಲದಿರುವುದು, ಅಥವಾ ಇದ್ದರೂ ಅದು ಅಪ್ರಸ್ತುತವಾದದ್ದು. ಹಾಗೇ ವೇದದಲ್ಲಿ ಅಪ್ರಸ್ತುತವಾದ ದೇವತೆಗಳು ಪುರಾಣಕಾಲದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವುದು. ಉದಾಹರಣೆಗೆ ವೇದದಲ್ಲಿ ಅಗ್ನಿ, ಇಂದ್ರರು ಪ್ರಮುಖರಾಗಿದ್ದರೆ, ಪುರಾಣಗಳಲ್ಲಿ ಅವರ ಸ್ಥಾನ ಕಡಿಮೆಯದು. ಬ್ರಹ್ಮ, ವಿಷ್ಣು, ಮಹೇಶ್ವರರ ಮುಂದೆ ಇಂದ್ರ, ಅಗ್ನಿಯರು ಯಃಕಶ್ಚಿತ್ ದೇವತೆಗಳು. ಹಾಗೇ ವೇದದಲ್ಲಿ ಅಷ್ಟೇನೂ ಪ್ರಮುಖವಾಗಿ ಪರಿಗಣಿಸದ ವಿಷ್ಣುವಿಗೆ ಪುರಾಣದಲ್ಲಿ ಉನ್ನತ ಮಟ್ಟದ ಗೌರವ. ವೇದಗಳಲ್ಲಿ ಕಂಡು ಬಾರದೇ ಇರುವ ಲಕ್ಷ್ಮಿ, ಪಾರ್ವತಿ, ಕುಬೇರ ಇತ್ಯಾದಿ ದೇವತೆಗಳನ್ನು ಪುರಾಣದಲ್ಲಿ ಪ್ರಮುಖವಾಗಿ ಗಮನಿಸಬಹುದು. ಆದರೆ ವೇದದಲ್ಲಿ ಪ್ರಸಿದ್ಧರಾದ ದೇವತೆಗಳಾದ ಅರ್ಯಮ, ಭಗ, ಪರ್ಜನ್ಯ, ಉಕ್ಷಸ್ ಮುಂತಾದವರುಗಳು ಪುರಾಣದಲ್ಲಿ ಕಂಡುಬರುವುದಿಲ್ಲ.
ಋಗ್ವೇದದಲ್ಲಿ ಅಗ್ನಿ, ಇಂದ್ರರು ಬಹು ಮುಖ್ಯರಾದ ದೇವತೆಗಳು. ಇಂದ್ರನನ್ನು ಕುರಿತು ಅತಿ ಹೆಚ್ಚಿನ ಮಂತ್ರಗಳಿದ್ದರೆ, ಅಗ್ನಿಗೆ ಮಂತ್ರ ಸಂಖ್ಯೆಯಲ್ಲಿ ಎರಡನೇ ಸ್ಥಾನ. ಅಗ್ನಿಯನ್ನು ವೇದದಲ್ಲಿ ದೇವತೆಯನ್ನಾಗಿ, ಮನುಷ್ಯ, ಪ್ರಕೃತಿಯ ಒಂದು ಘಟನೆ ಹಾಗೂ ಪಂಚಭೂತಗಳಲ್ಲಿ ಒಂದಾದ ತೇಜಸ್ಸು ಎಂಬುದಾಗಿ ವರ್ಣಿಸಲಾಗಿದೆ.
ಆಗ್ನಿ
ಅಗ್ನಿಗೆ 3 ರೂಪಗಳಿರುವುದು. ಭೂಮಿಯ ಮೇಲೆ ಬೆಂಕಿ, ವಾಯುಮಂಡಲದಲ್ಲಿ ವಿದ್ಯುತ್, ಸಿಡಿಲು ಹಾಗೂ ಅಂತರಿಕ್ಷದಲ್ಲಿ ಸೂರ್ಯಮಂಡಲ ರೂಪ. ಭೂಮಿಯ ಮೇಲೆ ಅರಣಿಯಿಂದ ಬೆಂಕಿಯನ್ನು ಉತ್ಪತ್ತಿಮಾಡುತ್ತಾರೆ. ಎರಡು ಮೇಘಗಳ ನಡುವೆ ಇಂದ್ರನು ಅಗ್ನಿಯನ್ನು ಸೃಷ್ಟಿಸುತ್ತಾನೆ ಅಥವಾ ನೀರಿನೊಳಗೂ ಉತ್ಪತ್ತಿ ಮಾಡುತ್ತಾನೆ. ಈ ಅಗ್ನಿಗೂ, ಪ್ರತಿ ಗೃಹದಲ್ಲೂ ನಿತ್ಯವೂ ಹೊತ್ತಿಸುವ ಅಗ್ನಿಗೂ ವ್ಯತ್ಯಾಸವೇನೂ ಇಲ್ಲದಿದ್ದರೂ ವೇದದಲ್ಲಿ ಈ ವಿಧದ ಬೆಂಕಿಯ ವಿಷಯ ಪ್ರಸ್ತಾಪವಾಗಿಲ್ಲ. ವೇದಗಳಲ್ಲಿ ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ಹಾಗೂ ಪಂಚಭೌತಿಕ ಅಗ್ನಿಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ.
ಅಗ್ನಿ ಮಾಡುವ ಕೆಲಸಗಳಲ್ಲಿ ಪ್ರಮುಖವಾದದ್ದು ಕತ್ತಲನ್ನು ಓಡಿಸುವುದು ಹಾಗೂ ಬೆಳಕನ್ನು ನೀಡುವುದು. ಸೂರ್ಯೋದಯವಾದ ಕೂಡಲೇ ಅಗ್ನಿಯನ್ನು ಪ್ರಜ್ವಲಿಸಿ ದೈನಂದಿನ ಕರ್ಮಗಳನ್ನು ಮಾಡಬೇಕು. ಅಂದರೆ ಅಗ್ನಿಯಿಂದಲೇ ದಿನವು ಪ್ರಾರಂಭವಾಗುವುದು. ಅವನೇ ಪುರೋಹಿತರಲ್ಲಿ ಜ್ಯೇಷ್ಠನು. ತುಪ್ಪವನ್ನು ಹೋಮಮಾಡಿದ ಕೂಡಲೇ ಅಗ್ನಿಯು ಉರಿಯ ಅಕಾರನಾಗಿ ಮೇಲೇಳುತ್ತಾನೆ. ಅವನ ದಂತಪಂಕ್ತಿಯು ಶುಭ್ರವಾಗಿದ್ದು ಶಿರವು ತೇಜೋರೂಪವಾಗಿದೆ. ಅವನೇ ಮನೆಗೂ ಹಾಗೂ ಎಲ್ಲರಿಗೂ ಯಜಮಾನ ಹಾಗೂ ಕುಲಪುರೋಹಿತ ಹಾಗೂ ಪರಮ ಜ್ಞಾನಿ. ದೇವತೆಗಳಿಗೂ ಮನುಷ್ಯರಿಗೂ ಮಧ್ಯವರ್ತಿಯಾಗಿ ಯಜ್ಞದ ಹವಿಸ್ಸನ್ನು ದೇವತೆಗಳಿಗೆ ತಲಪಿಸುತ್ತಾನೆ. ಯಜ್ಞ ಕರ್ತೃವು ಇತರ ದೇವತೆಗಳನ್ನು ಕರೆತರುವಂತೆ ಅಗ್ನಿಯನ್ನು ಪ್ರಾರ್ಥಿಸುವರು. ಹೀಗೆ ಅಗ್ನಿಯು, ಪಂಚಭೌತಿಕ, ಯಾಜ್ಞಿಕ ಮತ್ತು ದೈವಿಕ ರೂಪಗಳಲ್ಲಿ ಕಾರ್ಯ ನಿರ್ವಹಿಸುವನು. ಈ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರೂ ಅವನು ಸಂಪೂರ್ಣವಾಗಿ ಮನುಷ್ಯನಲ್ಲ ಹಾಗೂ ತನ್ನ ಸ್ವಾಭಾವಿಕ ರೂಪವನ್ನು ತ್ಯಜಿಸಿಲ್ಲ.
ಇಂದ್ರ
ಅಗ್ನಿಯ ನಂತರದ ದೇವತೆಯೆಂದರೆ ಇಂದ್ರ. ಇಂದ್ರನ ಪರವಾದ ಮಂತ್ರಗಳು ಅಗ್ನಿಯ ಪರವಾದ ಮಂತ್ರಗಳಿಗಿಂತ ಹೆಚ್ಚು. ಋಗ್ವೇದದಲ್ಲಿ ಶೇಕಡಾ 25ರಷ್ಟು ಇಂದ್ರನ ಪರವಾಗಿದೆ. ಇಂದ್ರನಿಗೆ ಅನ್ವಯಿಸದೇ ಇರುವ ಗುಣವೇ ಇಲ್ಲ.
ಇಂದ್ರನು ಸ್ವರ್ಗದಿಂದಲೋ, ಭೂಮಿಯಿಂದಲೋ ಹುಟ್ಟಿದನು. ಹುಟ್ಟಿದಕೂಡಲೇ ಸೋಮಪಾನ ಮಾಡಿದನು. ಇವನು ಬಹು ಪುರಾತನ ದೇವತೆ, ಯುವಕ, ಬಲಿಷ್ಠ, ಪರಾಕ್ರಮಿ, ಸ್ಫುರದ್ರೂಪಿ, ಹಿರಣ್ಯಬಾಹುವುಳ್ಳವನು, ಹರಿತಾಶ್ವ (ಹಸಿರು ಕುದುರೆಗಳಿಂದ ಕುಡಿದ ಚಿನ್ನದ ರಥವುಳ್ಳವನು). ಇವನ ಆಯುಧ ವಜ್ರ. ಸೋಮಪಾನದಲ್ಲಿ ಇವನನ್ನು ಮೀರಿಸುವವರ್ಯಾರೂ ಇಲ್ಲ.
ವಿಷ್ಣುವಿನೊಂದಿಗೆ ಇಂದ್ರನು ಅನೇಕ ರಾಕ್ಷಸರನ್ನು ಸಂಹಾರಮಾಡಿದನು. ಇಂದ್ರನ ಅನೇಕ ಗುಣಗಳಲ್ಲಿ ಪ್ರಮುಖವಾದ ಮೂರು ಗುಣಗಳೆಂದರೆ -
1. ಅವನ ಬಲ, ಶಕ್ತಿಗೆ ಅಧಿದೇವತೆ ಮತ್ತು ಬಾಹ್ಯಪ್ರಪಂಚದ ಮೇಲೆ ಅಧಿಕಾರವುಳ್ಳವನು. ಸಾಧಾರಣವಾಗಿ ಧಾರ್ಮಿಕವಾಗಲಿ ಅಥವಾ ನೈತಿಕವಾಗಲಿ ಇವನಿಗೆ ಶ್ರೇಷ್ಠ ಸ್ಥಾನವಿಲ್ಲ.
2. ಇಂದ್ರನು ಯುದ್ಧಪ್ರೇಮಿ ಹಾಗೂ ಯೋಧರೆಲ್ಲರಿಗೂ ಆದರ್ಶ. ಯುದ್ಧದ ಸಮಯದಲ್ಲಿ ಇವನನ್ನು ಪ್ರಾರ್ಥಿಸಿ ಇವನ ಮೂಲಕ ಜಯವನ್ನು ಪಡೆಯುವರು.
3. ವೃತ್ತಾಸುರ ವಧೆ -
ಇಂದ್ರಸ್ಯ ನು ವೀರ್ಯಾಣಿ ಪ್ರ ವೋಚಂ ಯಾನಿ ಚಕಾರ ಪ್ರಥಮಾನ ವಜ್ರೀ|
ಅಹನ್ನಹಿಮನ್ವಪಸ್ತರ್ದ ಪ್ರ ವಕ್ಷಣಾ ಅಭಿನತ್ಪರ್ವತಾನಾಂ (ಋಗ್ವೇದ-1-32-1)
ವೃತ್ರಾಸುರನೆಂಬ ದೈತ್ಯನು ಪರ್ವತಗಳಿಂದ ಹರಿಯುವ ನದಿಗಳನ್ನೂ ಅಂತರಿಕ್ಷದಿಂದ ಬರುವ ನೀರನ್ನೂ ತಡೆಹಿಡಿದಿದ್ದನು. ಇಂದ್ರನು ವಜ್ರಾಯುಧದಿಂದ ಅವನನ್ನು ಕೊಂದು ನೀರು ಹರಿಯುವಂತೆ ಮಾಡಿದನು.
ಈ ವೃತ್ರಾಸುರನು ಯಾರು? ಇವನು ತಡೆದಿದ್ದ ನೀರು ಯಾವುದು? ಇಂದ್ರನು ಬಿಡುಗಡೆ ಮಾಡಿದ ನೀರು ಯಾವುದು? ಈ ಪ್ರಶ್ನೆಗಳಿಗೆ ನಿರುಕ್ತದಲ್ಲಿ ಹಲವಾರು ವ್ಯಾಖ್ಯಾನಗಳಿವೆ.
ಮೊದಲನೆಯದು - ವೃತ್ರ ಎಂಬುದು ಒಂದು ದುರ್ದೇವತೆ. ಇದು ಮೇಘಗಳಲ್ಲಿ ನೀರನ್ನು ಬಿಡದಂತೆ ತಡೆದುಬಿಟ್ಟಿತು. ಮೇಘರಾಜ ಇಂದ್ರನು ಚಂಡಮಾರುತದ ಮೂಲಕ ಈ ಮೋಡಗಳನ್ನು ಛೇದಿಸಿ ಮಳೆ ಸುರಿಯುವಂತೆ ಮಾಡಿದನು. ಈ ಚಂಡಮಾರುತವೆಂಬ ವಾದ(Storm Theory)ವನ್ನು ಒಪ್ಪಿಕೊಂಡರೆ, ಪರ್ವತ ಎಂದರೆ ಮೋಡ ಎಂದು ತಿಳಿಯಬೇಕಾಗುತ್ತದೆ. ಈ ಅರ್ಥವು ಅನೇಕ ಕಡೆ ಕಂಡುಬಂದಿದೆ.
ಯ ಈಂಖಯಂತಿ ಪರ್ವತಾನ್ ತಿರಃ ಸಮುದ್ರಮರ್ಣವಂ (i. 19-7)
ಮುಂದುವರೆದು ಮೇಘರಾಜನು (ಇಂದ್ರನು) ವೃತ್ರಾಸುರನನ್ನು ಕೊಂದಮೇಲೆ ಜಲರಾಶಿಯನ್ನು ಬಿಡುಗಡೆಮಾಡಿದನು, ಸೂರ್ಯನನ್ನು ಸೃಷ್ಟಿಸಿದನು ಮತ್ತು ಗೋವುಗಳನ್ನು ಪತ್ತೆಮಾಡಿದನು.
ಎರಡನೆಯದು - ಸೂರ್ಯೋದಯವೆಂಬ ವಾದ (Dawn Theory). ಇದರ ಪ್ರಕಾರ ಇಂದ್ರನೇ ಸೂರ್ಯ. ಕತ್ತಲನ್ನು ನಾಶಪಡಿಸಿ ಬೆಳಕನ್ನು ಪ್ರಪಂಚದಲ್ಲೆಲ್ಲಾ ಹರಡುತ್ತಾನೆ. "ಗೋ" ಅಂದರೆ ಕಿರಣ ಎಂತಲೂ ಅರ್ಥ. ಆದರೆ ಈ ವಾದದಲ್ಲಿ ಸೂರ್ಯನು ನಾಶಪಡಿಸುವುದು ರಾತ್ರಿಯ ಕತ್ತಲನ್ನೇ ಅಥವಾ ಮೇಘಗಳಿಂದ ಉಂಟಾದ ಕತ್ತಲೆಯೇ ಎಂಬುದ ಅಸ್ಪಷ್ಟವಾಗಿದೆ. ಹಾಗೂ ಇಂದ್ರನು ಮಳೆಯ ದೇವತೆಯಾದರೆ ಪರ್ಜನ್ಯ ದೇವತೆಯ ಕೆಲಸವೇನು?
ಮೂರನೆಯದು - Hildebrandt ವಾದ. ಇದರ ಪ್ರಕಾರ ನೀರನ್ನು ತಡೆದಿರುವ ರಾಕ್ಷಸನು ಚಳಿಗಾಲವೆಂಬುದು. ಇವನು ಚಳಿಗಾಲದಲ್ಲಿ ನೀರನ್ನು ಘನೀಭೂತಮಾಡಿ ತಡೆಯುವನು. ಇಂದ್ರನು ಸೂರ್ಯನ ಪರವಾಗಿ ಬಂದು ನೀರನ್ನು ಹರಿಯುವಂತೆ ಮಾಡುವನು. ಆದರೆ ಈ ವಾದವು ಉಷ್ಣಪ್ರದೇಶಕ್ಕೆ ಸರಿಹೊಂದುವುದಿಲ್ಲ.
ಯಃ ಶಂಬರಂ ಪರ್ವತೇಷು ಕ್ಷಿಯಂತಂ ಚತ್ವಾರಿಂಶ್ಯಾಂ ಶರದ್ಯನ್ವವಿಂದತ್ |
ಓಜಾಯಮಾನಂ ಯೋ ಅಹಿಂ ಜಘಾನ ದಾನುಂ ಶಯಾನಂ ಸಜನಾಸ ಇಂದ್ರಃ || (ii. 12-11)
ಇಂದ್ರನು ಪರ್ವತಗಳಲ್ಲಿ ಅಡಗಿದ್ದ ರಾಕ್ಷಸನನ್ನು 40ನೇ ವರ್ಷದಲ್ಲಿ ಕೊಂದನು ಎಂದಿದೆ. ಇದು ಯಾವ ಕಾಲದಿಂದ 40ನೇ ವರ್ಷ? ಇದಕ್ಕೆ ಪುರಾಣದಲ್ಲಿ ಒಂದು ಕಥೆಯುಂಟು - ಇಂದ್ರನು 100 ಅಶ್ವಮೇಧಯಾಗಗಳನ್ನು ಮಾಡಿ ಇಂದ್ರಪದವಿಯನ್ನು ಪಡೆದನು. ಅದೇ ಸಂದರ್ಭದಲ್ಲಿ ಪರ್ವತಗಳ ಹಾವಳಿ ಹೆಚ್ಚಾಯಿತು. ಆ ಕಾಲದಲ್ಲಿ ಪರ್ವತಗಳಿಗೆಲ್ಲಾ ರೆಕ್ಕೆಗಳಿದ್ದವು. ಅವು ಮನಸ್ಸುಬಂದಲ್ಲಿ ಹಾರಿಹೋಗಿ ಕುಳಿತು ಹಾವಳಿಯನ್ನುಂಟುಮಾಡುತ್ತಿದ್ದವು. ಆಗ ಇಂದ್ರನು ವಜ್ರಾಯುಧದಿಂದ ರೆಕ್ಕೆಗಳನ್ನು ಕತ್ತರಿಸಿದನು. ಈ ಘಟನೆಯು ಇಂದ್ರನು ಇಂದ್ರಪದವಿಯನ್ನು ಪಡೆದ 40ನೆ ವರ್ಷದಲ್ಲಿಯೇ ನಡೆದ ಸಂಗತಿ ಎಂದು ಪುರಾಣದಲ್ಲಿ ವಿವರಿಸಿದೆ. ಈ ಮಂತ್ರದಲ್ಲಿರುವ 40ನೆಯ ವರ್ಷವು ಇದಕ್ಕೆ ಸಂಬಂಧಿಸಿರಬಹುದು.
ಬಾಲಗಂಗಾಧರ ತಿಲಕರು ತಮ್ಮ "Arctic Home" (ಧ್ರುವಪ್ರದೇಶನಿವಾಸಸ್ಥಾನ) ಕೃತಿಯಲ್ಲಿ ಈ ಸಂದರ್ಭಕ್ಕೆ ಬೇರೆ ಅಭಿಪ್ರಾಯವನ್ನು ನೀಡಿದ್ದಾರೆ. ಈ ಇಂದ್ರಾಸುರರ ಯುದ್ಧವು ಕತ್ತಲೆ-ಬೆಳಕುಗಳ ಯುದ್ಧಕ್ಕೆ ಸಂಬಂಧಿಸಿದುದು. ಧ್ರುವಪ್ರದೇಶದಲ್ಲಿ ದೀರ್ಘಕಾಲ ಕತ್ತಲಿರುತ್ತದೆ ಹಾಗೂ ಸಂಧ್ಯಾಕಾಲವೂ ದೀರ್ಘವಾಗಿರುತ್ತದೆ. ಮಂತ್ರದಲ್ಲಿ ಹೇಳಲ್ಪಟ್ಟಿರುವ ಜಲ ಎಂಬುದು ಮೊಡದಿಂದ ಅಥವಾ ನದಿಗಳಲ್ಲಿ ಹರಿಯುವ ನೀರಲ್ಲ. ಇದು ಪ್ರಪಂಚವನ್ನು ಎಲ್ಲೆಡೆಯೂ ಆವರಿಸಿರುವ ನೀರು.
ಪುರಾಣಗಳಲ್ಲಿ - ನಮ್ಮ ಈ ಭೂಗೋಳವು ಒಂದು ಜಲಗೊಳದಿಂದ ಆವೃತವಾಗಿದೆ. ಇದರ ಸುತ್ತಲೂ ವಾಯು, ವಾಯುವಿನ ಸುತ್ತಲೂ ಆಕಾಶ ಎಂದು ಹೇಳಿದೆ. ಜಲವೆಂದರೆ ಭೂಮಿಯನ್ನು ಆವರಿಸಿರುವ ಈ ಜಲಗೋಳ ಪ್ರಪಂಚದಲ್ಲಿ ಕತ್ತಲು-ಬೆಳಕು ಎನ್ನುವುದು ಸೂರ್ಯ-ಚಂದ್ರರ ಚಲನೆಯಿಂದಾಗುತ್ತದೆ. ತಿಲಕರ ಪ್ರಕಾರ ಈ ಸೂರ್ಯ-ಚಂದ್ರರ ಚಲನೆಗಳು ಈ ಜಲರಾಶಿಯ ಚಲನೆಯನ್ನಾಶ್ರಯಿಸಿವೆ. ಈ ಜಲರಾಶಿಯ ಚಲನೆಯು ಈ ರಾಕ್ಷಸನಿಂದ ತಡೆಯಲ್ಪಟ್ಟಿತ್ತು. ಎಂದರೆ, ಇವನ ದೌರ್ಜನ್ಯದಿಂದ ಪ್ರಪಂಚಕ್ಕೆ ಆದ ಹಾನಿಯನ್ನು ಊಹಿಸಲಸಾಧ್ಯ. ಇಂದ್ರನು ಈ ರಾಕ್ಷಸನನ್ನು ಸಂಹಾರಮಾಡಿ ಜಲರಾಶಿಯು ಚಲಿಸುವಂತೆ ಮಾಡಿ ಪ್ರಪಂಚಕ್ಕೆ ಮಹದುಪಕಾರವನ್ನು ಮಾಡಿದನು. ಹೀಗಾಗಿ ಇಂದ್ರನ ಸಾಹಸಗಳಲ್ಲೆಲ್ಲಾ ಇದನ್ನೇ ಅತಿ ಮುಖ್ಯವೆನ್ನುವರು.
ಸೋಮ -
ಋಗ್ವೇದದಲ್ಲಿ ಅಗ್ನಿ, ಇಂದ್ರರುಗಳನ್ನು ಬಿಟ್ಟರೆ ಸೋಮನೇ ಹೆಚ್ಚು ಪ್ರಸಿದ್ಧ ದೇವತೆ. 9ನೇ ಮಂಡಲವು ಸಂಪೂರ್ಣವಾಗಿ ಈ ದೇವತೆಗೆ ಮೀಸಲಾಗಿದೆ. ಇಂದ್ರನನ್ನೂ ಅಗ್ನಿಯನ್ನೂ ಆಹ್ವಾನಿಸುವಾಗ ಸೋಮಪಾನಕ್ಕೆ ಬರಬೇಕೆಂದು ಕವಿಯು ಪ್ರಾರ್ಥಿಸುತ್ತಾನೆ. ಈ ಸೋಮಲತೆಯು ಮೊದಲು ಸ್ವರ್ಗದಲ್ಲಿತ್ತೆಂದೂ ಬಳಿಕ ಭೂಮಿಗೆ ಬಂದಿತೆಂದು ವರ್ಣಿಸಲಾಗಿದೆ. ಭೂಮಿಯಲ್ಲಿ ಇದು ಪರ್ವತಶಿಖರಗಳಲ್ಲಿ ದೊರಕುವುದು. ಇದನ್ನು ತಂದು ಕಲ್ಲುಗಳಿಂದ ಜಜ್ಜಿದಾಗ ಅದರಿಂದ ರಸ ಹೊರಬರುವುದು. ಈ ರಸವನ್ನೇ ಅಮೃತವೆಂದು ಬಣ್ಣಿಸಿರುವರು. ಈ ಸೋಮದ ವ್ಯಾಧಿಹರ ಗುಣವು, ಅಮರತ್ವವನ್ನು ನೀಡುವ ಗುಣವನ್ನು ಋಗ್ವೇದದಲ್ಲಿ ವರ್ಣಿಸಲಾಗಿದೆ. ಸೋಮಸಂಬಂಧದ ಯಾಗಗಳು ಅನೇಕ ಹಾಗೂ ಮುಖ್ಯವಾದದ್ದು.
ಋಗ್ವೇದದ 10ನೇ ಮಂಡಲದ ಕೆಲವು ಸೂಕ್ತಗಳಲ್ಲಿ, ಕೃಷ್ಣಯಜುರ್ವೇದ ಹಾಗೂ ಅಥರ್ವವೇದದಲ್ಲಿಯೂ ಸೋಮನೆಂದರೆ ಔಷಧಿಗಳಿಗೆ ಸ್ವಾಮಿಯಾದ ಚಂದ್ರನೆಂದು ವರ್ಣಿಸಲಾಗಿದೆ. 9ನೇ ಮಂಡಲದಲ್ಲಿ ಇದರ ಬಗ್ಗೆ ವಿಸ್ತಾರವಾಗಿ ವಿವರಣೆಯಿರುವುದು.
ವಿಷ್ಣು
ಋಗ್ವೇದದಲ್ಲಿ ವಿಷ್ಣು ಪರವಾದ ಮಂತ್ರಗಳು ತೀರಾ ಕಡಿಮೆ. ವಿಷ್ಣುವನ್ನು ಇತರೆ ದೇವತೆಗಳೊಂದಿಗೆ ಸ್ತುತಿಸಿರುವರು. ಇಂದ್ರಾವಿಷ್ಣು, ಅಗ್ನಾವಿಷ್ಣು ಇತ್ಯಾದಿ. ಪುರಾಣಗಳಲ್ಲಿ ಸರ್ವೋತ್ತಮವಾದ ಸ್ಥಾನವನ್ನು ಕೊಟ್ಟಿದ್ದರೆ, ವೇದಗಳಲ್ಲಿ ಈ ದೇವತೆಗೆ ಸಾಧಾರಣ ಸ್ಥಾನವನ್ನು ನೀಡಲಾಗಿದೆ.
ವಿಷ್ಣುವಿಗೆ "ಶಿಪಿವಿಷ್ಟ" ಎಂಬ ಹೆಸರು ಇದೆ. ಇದರ ಅರ್ಥವೆಂದರೆ "ಅಪ್ರತಿಪನ್ನ ರಶ್ಮಿಃ" - ತಿರೋಹಿತವಾದ ಪ್ರಕಾಶವುಳ್ಳವನು. ಮತ್ತೊಂದು "ಹೆಚ್ಚು ಪ್ರಕಾಶವುಳ್ಳವನು" ಎಂದು.
ವಿಷ್ಣುವಿಗೆ ಇನ್ನೂ ಅನೇಕ ಮಹಿಮೆಗಳನ್ನು ಹೇಳುವರು. ಸ್ವರ್ಗ ಮತ್ತು ಭೂಲೋಕಗಳನ್ನು ಸೃಷ್ಟಿಮಾಡಿದನು. ಭೂತ ಭವಿಷ್ಯತ್ಕಾಲದಲ್ಲಿ ಯಾರಿಗೂ ವಿಷ್ಣುವಿನ ಗುಣಗಳನ್ನು ತಿಳಿಯಲಸಾಧ್ಯ. ಅವನ ಗುಣಗಳಿಗೂ ಸಾಮರ್ಥ್ಯಕ್ಕೂ ಮಿತಿಯೇ ಇಲ್ಲ. ಅವನು ಸರ್ವಾಂತರ್ಯಾಮಿ.
ಉಷಸ್ಸು
ಋಗ್ವೇದದಲ್ಲಿ ಈ ದೇವತೆಯನ್ನುದ್ದೇಶಿಸಿರುವ ಮಂತ್ರಗಳಷ್ಟು ಉತ್ಕೃಷ್ಟವಾದ ಮತ್ತು ಸುಂದರವಾದ ಮಂತ್ರಗಳು ಎಲ್ಲಿಯೂ ಇಲ್ಲ. ಋಗ್ವೇದದಲ್ಲಿ 20 ಸೂಕ್ತಗಳು ಈ ದೇವತೆಯನ್ನುದ್ದೇಶಿಸಿರುವುದು. ಅವುಗಳಲ್ಲಿ 7ನೇ ಮಂಡಲದಲ್ಲಿ 75ರಿಂದ 81ನೇ ಸೂಕ್ತಗಳು ಈ ದೇವತೆಯ ಪರವಾಗಿದೆ. "ಈ ಸ್ಫುರದ್ರೂಪಿಯಾದ ದೇವತೆಯು ಆಕಾಶಕ್ಕೆ ಪುನಃ ಜೀವಕಳೆಯನ್ನು ಕೊಟ್ಟು ದಿಗಂತದವರೆಗೂ ವ್ಯಾಪಿಸುತ್ತಾಳೆ." (ಋಗ್ವೇದ iii.61-4)
ಉಷಸ್ಸು ಆಕಾಶದ (ದ್ಯೌ) ಮಗಳು ಹಾಗೂ ರಾತ್ರಿಯ ಸೋದರಿ. ಸೂರ್ಯನು ಇವಳ ಪ್ರಿಯನು. ಇವಳು ಪ್ರಪಂಚದ ಅಧಿದೇವತೆ. ಬೆಲೆಬಾಳುವ ವಸ್ತುಗಳನ್ನು ಧರಿಸಿಕೊಂಡು ಹಸನ್ಮುಖಳಾಗಿ ಪ್ರೇಕ್ಷಕರ ಕಣ್ಮನಗಳಿಗೆ ಅನಂದವನ್ನುಂಟುಮಾಡುತ್ತಾಳೆ. ಅಂಧಕಾರವನ್ನು ಪರಿಹಾರಮಾಡಿ, ಎಲ್ಲರನ್ನೂ ಎಚ್ಚರಿಸಿ ತಮ್ಮ ಕೆಲಸಗಳಲ್ಲಿ ತೊಡಗುವಂತೆ ಮಾಡುತ್ತಾಳೆ. ಪುನಃ ಪುನಃ ಜನಿಸುತ್ತಾಳೆ. ಆದ್ದರಿಂದಲೇ ಆಕೆ ನಿತ್ಯ ಯೌವನೆ. ಆದರೆ ಪುರಾತನಳು, ನಿತ್ಯಳು. ಈಕೆಯೇ ಎಲ್ಲ ಜೀವಿಗಳ ಉಸಿರು.
ಋಗ್ವೇದದಲ್ಲಿ ವರ್ಣಿಸಿರುವ ಇತರೆ ಅಷ್ಟೇನೂ ಮಹತ್ವವಿಲ್ಲದ ದೇವತೆಗಳೆಂದರೆ - ವರುಣ, ಆಶ್ವಿನಿದೇವತೆಗಳು, ಸೂರ್ಯ, ಮಿತ್ರ, ಪುಷನ್, ವಿಷ್ಣು, ಉಷಸ್ಸು. ಈ ದೇವತೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್ ಅವರ "ಋಗ್ವೇದ ಸಂಹಿತಾ" ಕೃತಿಯಲ್ಲಿ ನೋಡಿ.
ಮೂಲ : ಋಗ್ವೇದ ಸಂಹಿತಾ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್.
No comments:
Post a Comment