ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತ - ಭಾಗ - 2
ವೈಃ
ನಚಿಕೇತನು ಯಮನ ನಿವಾಸಕ್ಕೆ ಬಂದನು ಹಾಗೂ ವಾಗ್ದೇವತೆಯ ಹಿತೋಪದೇಶದಂತೆ ಯಮನೊಂದಿಗೆ ನಡೆದುಕೊಂಡನು.
ಯಮನು ಪಶ್ಚಾತ್ತಾಪದಿಂದ ನಚಿಕೇತನಿಗೆ ಹೀಗಂದನು - ನೀನು ನನ್ನ ಮನೆಯಲ್ಲಿ ಮೂರು ದಿನ ಉಪವಾಸವಿದ್ದೆ ಎಂದು ತಿಳಿಯಿತು. ಅತಿಥಿಯು ಉಪವಾಸವಿದ್ದರೆ ಯಜಮಾನನಿಗೆ ಶ್ರೇಯಸ್ಸು ಉಂಟಾಗುವುದಿಲ್ಲ. ಆದ್ದರಿಂದ ಉಪವಾಸದಿಂದಿದ್ದ ಮೂರುದಿನಗಳಿಗಾಗಿ ನಿನಗೆ ಬೇಕಾದ ಮೂರು ವರಗಳನ್ನು ಕೇಳುವಂಥವನಾಗು, ಅವುಗಳನ್ನು ಕೊಡುವೆನು ಎಂದನು.
ನಚಿಕೇತನು ಕೇಳಿದ ಮೊದಲ ವರ - ನಾನು ಮೃತ್ಯುವಶನಾಗದೆ (ಸಾಯದೆ) ಈಗಿರುವಂತೆಯೇ ನನ್ನ ತಂದೆಯ ಬಳಿಗೆ ಹೋಗಬೇಕು ಹಾಗೂ ನನ್ನ ತಂದೆಯು ನನ್ನನ್ನು ಪ್ರೀತಿಯಿಂದ ಆದರಿಸಬೇಕು ಹಾಗೂ ಅವರ ಚಿಂತೆಯು ನಾಶವಾಗಿ ಶಾಂತಚಿತ್ತರಾಗಿರಬೇಕು.
ಎರಡನೇ ವರ - ಶ್ರೌತಸ್ಮಾರ್ತಕರ್ಮಗಳು ಅಕ್ಷಯವಾದ ಫಲಗಳನ್ನು ಕೊಡುವ ವಿಧಾನವನ್ನು ಹೇಳಬೇಕು.. (ಮತ್ತೊಂದು ರೀತಿಯಲ್ಲಿ ಹೇಳುವುದಾದರೆ - ಸ್ವರ್ಗಸಾಧನವಾದ ಅಗ್ನಿಯನ್ನು ಉಪಾಸನೆ ಮಾಡುವ ಕ್ರಮವನ್ನೂ, ಜ್ಞಾನವನ್ನೂ ಕರುಣಿಸು). ಇದಕ್ಕೆ ನಡೆಸಬೇಕಾದ ಯಜ್ಞವು ನಾಚಿಕೇತಮಗ್ನಿಮ್ ಎಂದು ಕರೆಯಲ್ಪಟ್ಟಿತು.
ಮೂರನೇ ವರ - ಪುರುಷನು ತಾನು ಮಾಡುವ ಕರ್ಮಾದಿಗಳಿಂದ ಅನೇಕ ಜನ್ಮಗಳನ್ನು ಪಡೆದು ಅನೇಕ ಬಾರಿ ಮೃತ್ಯುವಶನಾಗುವನು. ಆದ್ದರಿಂದ ಸಂಸಾರದಿಂದ ಮುಕ್ತನಾಗಲು ಮೃತ್ಯುವನ್ನು ಜಯಿಸುವ ಉಪಾಯವನ್ನು ಹೇಳು. (ಮತ್ತೊಂದು ರೀತಿಯಲ್ಲಿ ಹೇಳುವುದಾದರೆ - ಮನುಷ್ಯನು ಮರಣ ಹೊಂದಿದ ಮೇಲೆ ಅವನ ಆತ್ಮವು ಇರುವುದೆಂದು ಕೆಲವರೂ, ಇರುವುದಿಲ್ಲವೆಂದು ಮತ್ತೆ ಕೆಲವರು ಹೇಳುವರು. ಈ ವಿಷಯದಲ್ಲಿ ನಿಶ್ಚಯ ಜ್ಞಾನವನ್ನು ನನಗೆ ವಿಷದವಾಗಿ ತಿಳಿಸು.)
ಯಮನು ಮೊದಲೆರಡು ವರಗಳನ್ನು ನೀಡಿ ಮೂರನೇ ವರವನ್ನು ನೀಡುವ ಮೊದಲು ನಚಿಕೇತನ ಮನೋಬಲವನ್ನು ಪರೀಕ್ಷಿಸಲು ಪ್ರಾರಂಭಿಸಿದನು. ಈ ನಿಟ್ಟಿನಲ್ಲಿ ನಚಿಕೇತ-ಯಮರಾಜರ ನಡುವಿನ ಸಂಭಾಷಣೆಯ ಸಾರಾಂಶವನ್ನು ಈ ಕೆಳಗೆ ನೋಡೋಣ:
ಯಮ : ಹೇ ನಚಿಕೇತನೆ! ಪೂರ್ವದಲ್ಲಿ ದೇವತೆಗಳೂ ಸಹ ಈ ವಿಷಯದಲ್ಲಿ ಬೇಕಾದಷ್ಟು ಚರ್ಚೆ ಮಾಡಿರುವರು. ಇದನ್ನು ಸುಲಭವಾಗಿ ಅರಿಯುವುದು ಅಸಾಧ್ಯ. ಇದು ಅತ್ಯಂತ ಸೂಕ್ಷ್ಮ ವಿಚಾರ. ನೀನು ಹಟವನ್ನು ಮಾಡಬೇಡ, ನನ್ನನ್ನು ನಿರ್ಬಂಧಿಸಬೇಡ.
ನಚಿಕೇತ : ನಾನು ಕೇಳುವ ವಿಷಯವು ದೇವತೆಗಳಿಗೂ ತಿಳಿಯದೆಂದೂ, ಅವರೂ ದೀರ್ಘ ಚರ್ಚೆ ಮಾಡಿರುವರೆಂದು ನೀನೇ ಹೇಳಿರುವೆ. ಅಂದರೆ ಇದು ನಿನ್ನನ್ನು ಬಿಟ್ಟು ಬೇರಾರಿಗೂ ಅರಿಯದು ಎಂದಾಯಿತು. ಅದನ್ನು ವಿವರಿಸಲು ನಿನಗೆ ಮಾತ್ರ ಸಾಧ್ಯ. ದಯವಿಟ್ಟು ಅದನ್ನು ನನಗೆ ಅನುಗ್ರಹಿಸು.
ಯಮ : ಹೇ ನಚಿಕೇತನೇ! ನೂರು ವರ್ಷ ಜೀವಿಸಿರುವ ಪುತ್ರಪೌತ್ರಾದಿಗಳನ್ನು, ಪಶುಸಂಪತ್ತು, ಧನಕನಕ ವಸ್ತುವಾಹನಗಳನ್ನು, ಯಥೇಶ್ಚವಾದ ಆಯಸ್ಸನ್ನು ಕೇಳು ಕೊಡುವೆ. ಆದರೆ ಮರಣದ ವಿಷಯದಲ್ಲಿ ಮಾತ್ರ ಪ್ರಶ್ನಿಸಬೇಡ.
ನಚಿಕೇತ : ಹೇ ಯಮನೆ! ನೀನು ಕೊಡಬೇಕೆಂದಿರುವ ಎಲ್ಲವೂ ಕ್ಷಣಿಕ, ನಶ್ವರ. ನಮ್ಮ ಜೀವನವೂ ನಶ್ವರ. ಮರಣಾನಂತರ ನೀನು ಕೊಡುವ ಸಕಲ ಸಂಪತ್ತುಗಳಿಂದ ಏನು ಪ್ರಯೋಜನ? ಎಲ್ಲವೂ ಮತ್ತೆ ನಿನಗೇ ಸೇರುವುದು. ನಿನ್ನ ಅನುಗ್ರಹ ಇರುವವರೆಗೂ ನನ್ನ ಆಯುಷ್ಯಕ್ಕೆ ಯಾವ ತೊಂದರೆಯೂ ಇಲ್ಲ. ಜರಾಮರಣರಹಿತರಾದ ದೇವತೆಗಳಿರುವ ಲೋಕಕ್ಕೆ ಬಂದು ಮನುಷ್ಯನಾದವನು ಕ್ಷಣಿಕ ಸುಖವನ್ನು ಬೇಡುವುದೇ? ಹೇ ಯಮನೇ! ಯಾವ ತತ್ತ್ವದ ವಿಷಯದಲ್ಲಿ ದೀರ್ಘ ಚರ್ಚೆ ನಡೆದಿರುವುದೋ, ಯಾವುದು ಪರಲೋಕದಲ್ಲಿ ಮಹತ್ತ್ವವುಳ್ಳದ್ದೋ, ಯಾವುದು ಗೂಢವಾಗಿರುವುದೋ ಅಂತಹ ವರವನ್ನು ಬಿಟ್ಟು ನಾನು ಬೇರೆ ವರವನ್ನು ಅಪೇಕ್ಷಿಸುವುದಿಲ್ಲ.
ಯಮ : ಹೇ ನಚಿಕೇತನೆ! ನೀನು ಇಷ್ಟು ಕೇಳಿದಮೇಲೆ ಹೇಳುವೆನು ಕೇಳು. ಲೋಕದಲ್ಲಿ ಶ್ರೇಯಸ್ಸು ಮತ್ತು ಪ್ರೇಯಸ್ಸು ಎಂದು ಎರಡು ಮಾರ್ಗಗಳಿವೆ. ಇವೆರಡೂ ಬೇರೆ ಬೇರೆ, ಹಾಗೇ ಫಲಗಳೂ ಬೇರೆ. ಪ್ರೇಯಸ್ಸಿನಲ್ಲಿ (ಐಹಿಕ ಸುಖಗಳಲ್ಲಿ) ನಿರತನಾದವನು ಕರ್ಮಪ್ರವೃತ್ತನಾಗುವನು. ಅವನ ಪುರುಷಾರ್ಥವು ನಾಶವಾಗುವುದು. ಶ್ರೇಯಸ್ಸಿನ ಮಾರ್ಗವನ್ನು ಅನುಸರಿಸುವವನಿಗೆ ಸಮಸ್ತ ಕಲ್ಯಾಣ ಉಂಟಾಗುವುದು. ಹೀಗಾಗಿ ಬುದ್ಧಿವಂತನು ಶ್ರೇಯಸ್ಸಿನ ಮಾರ್ಗವನ್ನೇ ಅಪೇಕ್ಷಿಸುವನು. ಆದರೆ ಅನೇಕ ಜನರು ಇಹಲೋಕದ ಸುಖಗಳಿಗೆ ಮನಸೋತು ಪ್ರೇಯಸ್ಸನ್ನು ಬಯಸುವರು. ಅವರು ವಿವೇಚನಾರಹಿತರು. ಹೀಗಾಗಿ ಅಂತಹ ಜನಗಳು ಪುನಃ ಪುನಃ ಜನ್ಮವೆತ್ತಿ ಆಯಾ ಜನ್ಮಗಳಲ್ಲಿ ನನಗೆ (ಮೃತ್ಯುವಿಗೆ) ವಶರಾಗುವರು. ಯಾವ ಜ್ಞಾನವು ಅಂದರೆ ಆತ್ಮಜ್ಞಾನವು ಸರ್ವಶ್ರೇಷ್ಠವೆನಿಸುವುದೋ ಅಂತಹ ಆತ್ಮಜ್ಞಾನವನ್ನು (ಬ್ರಹ್ಮಜ್ಞಾನ) ಕೇಳಿ ತಿಳಿದುಕೊಳ್ಳುವ ಸುಸಂಧಿಯು ಅನೇಕರಿಗೆ ದೊರೆಯಲಾರದು. ಅಂತಹ ಜ್ಞಾನವನ್ನು ಉಪದೇಶಿಸುವ ಗುರುವು ಸಿಗುವುದೂ ದುರ್ಲಭ. ಒಂದು ವೇಳೆ ಗುರುವು ಸಿಕ್ಕಿದರೂ ಅದರಲ್ಲಿ ಆಸಕ್ತಿ ಹುಟ್ಟಿ ಆತ್ಮಜ್ಞಾನವನ್ನು ತಿಳಿದುಕೊಳ್ಳುವ ಇಚ್ಛೆ ಉಂಟಾಗುವುದೂ ಕೂಡ ತೀರ ಆಶ್ಚರ್ಯವೇ. ಈ ಆತ್ಮಜ್ಞಾನದಲ್ಲಿ ಅನೇಕ ಭಿನ್ನಾಭಿಪ್ರಾಯವಿರುವುದರಿಂದ ಸಾಮಾನ್ಯ ಮನುಷ್ಯನು ಇದನ್ನು ಹೇಳಿದರೆ ಅದು ಚೆನ್ನಾಗಿ ತಿಳಿಯುವುದಿಲ್ಲ. ಸರಿಯಾದ ಆತ್ಮಜ್ಞಾನಿಯೇ ಇದನ್ನು ಉಪದೇಶಿಸಬೇಕು. ಹಾಗಾದಾಗ ಅವನು ಎಲ್ಲವನ್ನೂ ತಿಳಿದು ಸರ್ವಜ್ಞನಾಗುವನು. ಈ ಆತ್ಮಜ್ಞಾನವು ಕೇವಲ ತರ್ಕ ಅಥವಾ ಊಹೆಯಿಂದ ತಿಳಿದುಕೊಳ್ಳಲಾಗುವುದಿಲ್ಲ, ಜ್ಞಾನಿಯಾದ ಗುರುವಿನಿಂದಲೇ ತಿಳಿದಿಕೊಳ್ಳಬೇಕು. ಅನಿತ್ಯ ವಸ್ತುಗಳ ಸಹಾಯದಿಂದ ಬ್ರಹ್ಮಜ್ಞಾನವು ಪ್ರಾಪ್ತವಾಗದು. ವಿವೇಕಿಯು ಸಾಕ್ಷಾತ್ಕರಿಸಲು ಕಷ್ಟಸಾಧ್ಯವಾದರೂ ಹೃದಯ ಗುಹೆ ಸ್ಥಿರವಾದುದೂ ಶಾಶ್ವತವೂ, ತೇಜಸ್ಸಿನಿಂದ ಬೆಳಗುತ್ತಿರುವ ಆತ್ಮನನ್ನು ಯೋಗದಿಂದ ಲಭ್ಯವಾಗುವ ಜ್ಞಾನದಿಂದ ಸಾಕ್ಷಾತ್ಕರಿಸಿ ಸುಖ-ದುಃಖಗಳನ್ನು ದಾಟುವನು. ಇಂತಹ ಅನಂದಸ್ಥಾನದ ಬಾಗಿಲು ನಿನಗೆ ತೆರೆದಿರುವುದು ಎಂದು ತಿಳಿಯುವೆನು.
ನಚಿಕೇತ : ಯಾವ ವಸ್ತುವು ಧರ್ಮ ಮತ್ತು ಅಧರ್ಮಗಳಿಂದ ಭಿನ್ನವೂ, ಕಾರ್ಯಕಾರಣಗಳಿಂದ ಬೇರೆಯಾದುದೂ, ಭೂತಭವಿಷ್ಯತ್ತುಗಳಿಂದಲೂ ಬೇರೆಯಾದುದೂ ಇರುವುದೆಂದು ನೀನು ಅರಿತಿರುವೆಯೋ ಅದನ್ನು ನನಗೆ ವಿವರಿಸು.
ಯಮ : ಸಕಲ ವೇದಗಳು ಯಾವ ಪರಮಪದವನ್ನು ಹೋಗಳುವವೋ, ಯಾವ ಪರಮಪದ ಪ್ರಾಪ್ತಿಗಾಗಿ ವಿವೇಕಶಾಲಿಗಳು ಬ್ರಹ್ಮಚರ್ಯವನ್ನು ಪಾಲಿಸುತ್ತಾ ಕಠಿಣತಪಸ್ಸನ್ನು ಮಾಡುವರೋ ಅಂತಹ ಪರಮಗತಿಯ ವಿಷಯವನ್ನು ನಾನು ಸಂಕ್ಷೇಪವಾಗಿ ಹೇಳುವೆನು. ಅದೇ ಓಂ ಪ್ರಣವ, ಇದೇ ಅಕ್ಷರಬ್ರಹ್ಮ. ಇದು ಅವಿನಾಶಿ. ಇದರ ಜ್ಞಾನವನ್ನು ಪಡೆದವನು ಅವನು ಇಚ್ಛಿಸುವ ಪರಮಪದವನ್ನು ಪಡೆಯುವನು. ಇದೇ ಸರ್ವಶ್ರೇಷ್ಠ ಸಾಧನ. ಈ ಸಾಧನವನ್ನು ಅರಿತವನು ಬ್ರಹ್ಮ ಲೋಕದಲ್ಲಿಯೂ ಗೌರವಿಸಲ್ಪಡುವನು. ಜ್ಞಾನಮಯವಾದ ಆತ್ಮನಿಗೆ ಜನ್ಮಮೃತ್ಯುಗಳಿಲ್ಲ. ಇದು ಮತ್ತೊಂದು ವಸ್ತುವಿನಿಂದ ಜನಿಸಿಲ್ಲ. ಅದು ಉತ್ಪನ್ನರಹಿತ, ನಿತ್ಯ, ಶಾಶ್ವತ ಹಾಗೂ ಸನಾತನ. ಆದ್ದರಿಂದ ಶರೀರವು ಮೃತವಾದರೂ ಅದರಲ್ಲಿ ನೆಲಸಿರುವ ಆತ್ಮಕ್ಕೆ ನಾಶವಿಲ್ಲ. ನಾನು ಕೊಲ್ಲುವೆನು, ಕೊಲ್ಲಲ್ಪಡುವೆನು ಎನ್ನುವ ಪುರುಷರು ಅಜ್ಞಾನಿಗಳು. ಏಕೆಂದರೆ ಆತ್ಮನು ಕೊಲ್ಲುವುದೂ ಹಾಗೂ ಕೊಲ್ಲಲ್ಪಡುವುದೂ ಇಲ್ಲ. ಹೃದಯಗಹ್ವರದಲ್ಲಿ ಇರುವ ಆತ್ಮವು ಅಣುವಿಗಿಂತ ಅಣುವಾಗಿರುವುದು ಹಾಗೂ ಸೂಕ್ಷ್ಮಕ್ಕಿಂತ ಸೂಕ್ಷ್ಮವಾದದ್ದು. ಇದು ಸರ್ವವ್ಯಾಪಿಯಾದ್ದರಿಂದ ಮಹತ್ತಾದ ವಸ್ತುವಿಗಿಂತ ಮಹತ್ತಾದದ್ದು. ಕಾಮರಹಿತನಾದವನಿಗೆ ಮಾತ್ರ ಆತ್ಮದರ್ಶನವಾಗುವುದು. ಒಂದೇ ಸ್ಥಳದಲ್ಲಿದ್ದರೂ, ಮಲಗಿದ್ದರೂ ಆತ್ಮವು ದೂರಹೋಗಬಲ್ಲುದು. ಇಂತಹ ಸರ್ವವ್ಯಾಪಿ, ಸರ್ವಶ್ರೇಷ್ಠ ಆತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡವನು ಶೋಕರಹಿತನು. ಇದನ್ನು ಪ್ರವಚನದಿಂದಾಗಲಿ, ಬುದ್ಧಿಯಿಂದಾಗಲಿ, ಇತರರು ಹೇಳಿದ್ದನ್ನು ಕೇಳುವುದರಿಂದಾಗಲಿ ಪಡೆಯಲಾಗುವುದಿಲ್ಲ.
ಪುರುಷನ ಹೃದಯಗುಹೆಯಲ್ಲಿ ನೆಲಸಿ ಕರ್ಮಫಲಗಳನ್ನು ಅನುಭವಿಸುತ್ತ ಜೀವಾತ್ಮ-ಪರಮಾತ್ಮಗಳೆಂಬ ಎರಡು ಆತ್ಮಗಳು ನೆರಳು-ಬೆಳಕುಗಳಂತೆ ಸದಾ ಇರುವುದೆಂದು ಬ್ರಹ್ಮಜ್ಞಾನಿಗಳು ಹೇಳುವರು. ಯಜ್ಞಾದಿ ಕರ್ಮಗಳನ್ನು ಮಾಡಿ ಬ್ರಹ್ಮೋಪಾಸನೆ ಮಾಡುವ ಭಕ್ತನಿಗೆ ಸಂಸಾರ ಸಾಗರವನ್ನು ದಾಟಿಸುವ ಸೇತುವೆಯಂತಿರುವ ನಚಿಕೇತನೆಂಬ ಅಗ್ನಿಯನ್ನೂ, ಸಂಸಾರಸಾಗರವನ್ನು ದಾಟಲು ಬಯಸುವವರಿಗೆ ಅದನ್ನು ದಾಟಿಸುವ ಪರಬ್ರಹ್ಮನನ್ನೂ ನಾವು ಬಲ್ಲೆವು. ಈ ಶರೀರವೇ ಒಂದು ರಥ. ಆತ್ಮನು ಅದರ ರಥಿಕ, ಬುದ್ದಿಯೇ ಸಾರಥಿ, ಅಶ್ವವನ್ನು ಹತೋಟಿಯಲ್ಲಿಡುವ ಕಡಿವಾಣವೇ ಮನಸ್ಸು, ಇಂದ್ರಿಯಗಳೇ ಅಶ್ವಗಳು. ಇಂದ್ರಿಯಗಳಿಗೆ ಸಂಬಂಧಿಸಿದ ವಿಷಯಸುಖಗಳೇ ಮಾರ್ಗ. ಇಂದ್ರಿಯ, ಮನಸ್ಸುಗಳಿಂದ ಮುಕ್ತನಾದ ಆತ್ಮವು ಸುಖ-ದುಃಖಗಳನ್ನು ಅನುಭವಿಸುವುದೆಂದು ಜ್ಞಾನಿಗಳು ಹೇಳುವರು. ಮನಸ್ಸು ಸದಾ ಚಂಚಲವಾಗಿರುವುದರಿಂದ ಅಜ್ಞಾನಿಯ ಇಂದ್ರಿಯಗಳು, ದುಷ್ಟಕುದುರೆಗಳು ಸಾರಥಿಯ ವಶವಾಗದಿರುವಂತೆ ಸ್ವೆಚ್ಛಾಚಾರಿಗಳಾಗಿ ಅವನ ವಶದಲ್ಲಿರುವುದಿಲ್ಲ. ಆದರೆ ಜ್ಞಾನಿಯ ಇಂದ್ರಿಯಗಳು ಪಳಗಿದ ಕುದುರೆಗಳು ಸಾರಥಿಯ ವಶದಲ್ಲಿರುವಂತೆ ಅವನ ವಶದಲ್ಲಿರುವುದು. ಯಾವ ಜ್ಞಾನಿಯು ತನ್ನ ಜ್ಞಾನವನ್ನೇ ಸಾರಥಿಯನ್ನಾಗಿ ಮಾಡಿಕೊಂಡು ಮನಸ್ಸನ್ನು ಸಂಯಮದಲ್ಲಿಟ್ಟುಕೊಳ್ಳುವನೋ ಅವನು ಸರ್ವವ್ಯಾಪಿಯಾದ ಪರಮಪದವನ್ನು ಪಡೆಯುವನು. ಆ ಶ್ರೇಷ್ಠ ಸ್ಥಾನವೇ (ಮುಕ್ತಿಯು) ವಿಷ್ಣುವಿನ ಪರಮ ಪದ.
ಇಂದ್ರಿಯಗಳಿಗಿಂತ ಸೂಕ್ಷ್ಮವಾದ ವಸ್ತುಗಳು ಅಥವಾ ತನ್ಮಾತ್ರೆಗಳು ಪಂಚಭೂತಗಳ ಸೂಕ್ಷ್ಮಸ್ವರೂಪಗಳು. ಈ ತನ್ಮಾತ್ರೆಯನ್ನು ದಾಟಿದರೆ ಮನಸ್ಸು, ಅದರಾಚೆಗೆ ಬುದ್ಧಿ, ಅನಂತರ ಮಹದಾತ್ಮ, ನಂತರ ಅದರಾಚೆಗೆ ಶ್ರೇಷ್ಠವಾದ ಅವ್ಯಕ್ತ, ಅದನ್ನೂ ದಾಟಿದರೆ ಪರಬ್ರಹ್ಮ (ಪರಮಪುರುಷ) ಇರುವುದು. ಇದೇ ಅಂತಿಮ ಪರಮಪದ.
ಶ್ರೇಷ್ಠನಾದ ಪರಮಪುರುಷನೇ ಎಲ್ಲ ಜೀವಿಗಳಲ್ಲಿ ಗೂಢವಾಗಿ ನೆಲಸಿರುವ ಆತ್ಮನು. ಅವನನ್ನು ವೀಕ್ಷಿಸಲು ಯೋಗಿಗಳಿಗೂ ಹಾಗೂ ತಪಸ್ವಿಗಳಿಗೂ ಮಾತ್ರ ಸಾಧ್ಯವಾಗುವುದು. ಜ್ಞಾನಿಯಾದ ಪುರುಷನು ತನ್ನ ವಾಕ್ಷ್ಯಕ್ತಿಯನ್ನು ಅದಕ್ಕಿಂತ ಸೂಕ್ಷ್ಮವಾದ ಮನಸ್ಸಿನಲ್ಲಿ ಲೀನಮಾಡಬೇಕು. ಅನಂತರ ಮನಸ್ಸನ್ನು ಅದಕ್ಕಿಂತ ಸೂಕ್ಷ್ಮವಾದ ಜ್ಞಾನಮಯ ಅಥವಾ ಚೇತನಾಮಯ ಆತ್ಮನಲ್ಲಿ ಲೀನಮಾಡಬೇಕು. ಬಳಿಕ ಚೇತನಾಮಯ ಆತ್ಮವನ್ನು ಮಹದಾತ್ಮನಲ್ಲಿಯೂ, ಮಹದಾತ್ಮನನ್ನು ಶಾಂತಾತ್ಮನಲ್ಲಿಯೂ ಲೀನಮಾಡಬೇಕು. ಆದ್ದರಿಂದ ನಿಮಗಿಂತ ಶ್ರೇಷ್ಠರಾದ ಜ್ಞಾನಿಗಳ ಬಳಿಗೆ ಹೋಗಿ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳಿ. ಈ ಕಾರ್ಯವು ಹರಿತವಾದ ಕತ್ತಿಯ ಅಲುಗಿನ ಮೇಲೆ ನಡೆಯುವಷ್ಟೇ ಕಷ್ಟವಾದದ್ದು. ಈ ಆತ್ಮವು ಶಬ್ದ, ರೂಪ, ರಸ, ಗಂಧ, ಸ್ಪರ್ಶರಹಿತ ಹಾಗೂ ಅವ್ಯಯವಾದದ್ದು. ಅದು ಅನಾದಿ, ಅನಂತವಾದದ್ದು. ಈ ಮಹತ್ತತ್ತ್ವದಿಂದಾಚೆಗೆ ಅಂದರೆ ಇದಕ್ಕಿಂತಲೂ ಸೂಕ್ಷ್ಮವಾಗಿ ಅದರ ಉತ್ಪತ್ತಿಗೂ ಕಾರಣವಾಗಿರುವ ಸತ್ಯಸ್ವರೂಪವಾದ ಆತ್ಮತತ್ತ್ವವನ್ನು ಅರಿತವನಿಗೆ ಮೃತ್ಯು ಭಯವಿಲ್ಲ.
ಮೃತ್ಯುದೇವನು ನಚಿಕೇತನಿಗೆ ಹೇಳಿದ ಈ ಉಪಾಖ್ಯಾನವನ್ನು ಹೇಳುವವನೂ, ಕೇಳುವವನೂ ಬ್ರಹ್ಮಲೋಕದಲ್ಲಿ ಗೌರವಿಸಲ್ಪಟ್ಟು ಪೂಜ್ಯನಾಗುತ್ತಾನೆ. ಇದನ್ನು ಯಾರು ಬ್ರಾಹ್ಮಣರ ಸಭೆಯಲ್ಲಿ, ಶ್ರಾದ್ಧಕಾಲದಲ್ಲಿ ಯಾವ ಪುರುಷನು ಇತರರಿಗೆ ಶ್ರವಣ ಮಾಡಿಸುವನೋ ಆ ಪುರುಷನು ಮಾಡುವ ಕರ್ಮವು ಫಲಪ್ರದವಾಗುವುದು.
ಮುಂದುವರೆದು ಯಮನು ನಚಿಕೇತನಿಗೆ ಹೀಗೆ ವಿವರಿಸಿದನು ;
ಸ್ವಯಂಭುವಾದ ಪರಮಾತ್ಮನು ತನ್ನ ಶಕ್ತಿಗಳನ್ನು ಬಹಿರ್ಮುಖವಾಗಿ ಹರಿಯಬಿಟ್ಟನು. ಆದ್ದರಿಂದ ಇಂದ್ರಿಯಗಳು ಬಾಹ್ಯವಸ್ತುಗಳನ್ನು ಮಾತ್ರ ನೋಡಬಲ್ಲವು. ಅವುಗಳಿಗೆ ಸೂಕ್ಷ್ಮಸ್ವರೂಪದ ಅಂತರಾತ್ಮವು ಗೋಚರಿಸುವುದಿಲ್ಲ. ವಿವೇಕಿಯು ಅಮೃತತ್ವವನ್ನು ಬಯಸಿದಲ್ಲಿ ಅವನು ಅಂತರ್ಮುಖನಾಗಿ ಅಂತರಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವನು.
ಮುಂದುವರೆದು ಆತ್ಮನ ಕಾರ್ಯ ಮತ್ತು ಗುಣಗಳನ್ನು ಈ ರೀತಿಯಾಗಿ ಯಮನು ವಿವರಿಸಿರುವನು :
ರೂಪ, ರಸ, ಗಂಧ, ಶಬ್ದ ಹಾಗೂ ಸ್ಪರ್ಶವೆಂಬ ಪಂಚಸುಖಗಳಿಂದ ಉಂಟಾಗುವ ಸುಖದ ಜ್ಞಾನವು ಆತ್ಮನಿಂದ ಆಗುವುದು. ಜಾಗೃತ್-ಸ್ವಪ್ನ ಸ್ಥಿತಿಗಳಲ್ಲಿ ಆಗುವ ವ್ಯಾಪಾರಗಳು ಯಾವುದರ ಬಲದಿಂದ ಜರುಗುತ್ತವೆಯೋ ಅಂತಹ ಸರ್ವವ್ಯಾಪಿಯಾದ ಆತ್ಮನನ್ನು ಸಾಕ್ಷಾತ್ಕರಿಸಿಕೊಂಡಮೇಲೆ ವಿವೇಕಿಯಾದವನು ಶೋಕರಹಿತನಾಗುವನು. ದೇಹಸಂಬಂಧಿಯಾದ ಜೀವನ ಸಮೀಪದಲ್ಲಿದ್ದು ಫಲವನ್ನು ಅನುಭವಿಸುವ ಮತ್ತು ಭೂತ ಭವಿಷ್ಯತ್ತುಗಳಿಗೆ ಒಡೆಯನಾದ ಆತ್ಮನನ್ನು ಅರಿತವನು ಭಯರಹಿತನಾಗುವನು. ಯಾವುದು ತಪಸ್ಸಿಗಿಂತ ಮೊದಲೇ ಅಂದರೆ ಅನಾದಿಕಾಲದಿಂದಲೂ ಇದ್ದಿತೋ, ಯಾವುದು ಉದಕ ಮತ್ತು ತತ್ತ್ವಗಳ ಸೃಷ್ಟಿಗಿಂತಲೂ ಪೂರ್ವದಲ್ಲಿ ಇದ್ದಿತೋ, ಯಾವುದು ಯಾರಿಗೂ ಅರಿಯದಂತೆ ಹೃದಯ ಗುಹೆಯೊಳಗೆ ಪ್ರವೇಶಿಸಿ ಪಂಚಭೂತಗಳೊಡನೆ (ಶರೀರದ ನಾನಾ ಅಂಗಗಳೊಡನೆ ಸಂಪರ್ಕದಿಂದ) ಇರುವುದನ್ನು ಜ್ಞಾನಿಗಳು ತಿಳಿಯುವರೋ ಅದೇ ಆತ್ಮ. ಸಕಲ ದೇವತಾತ್ಮಳಾದ ಅದಿತಿ ದೇವಿಯು ಯಾವ ಆತ್ಮದಿಂದ ಉತ್ಪನ್ನಳಾದಳೋ, ಯಾವುದು ಜೀವಿಯ ಶರೀರದಲ್ಲಿ ಪಂಚಭೂತಗಳೊಡನೆ ಸಂಪರ್ಕದಿಂದ ಗೂಢವಾಗಿ ನೆಲಸಿರುವುದೋ ಅದೇ ಆತ್ಮ. ಸ್ತ್ರೀಯರ ಗರ್ಭದಲ್ಲಿರುವಂತೆ ಎರಡು ಅರಣಿಗಳ ಮಧ್ಯದಲ್ಲಿರುವವನೂ, ಯಜ್ಞಾದಿಗಳಲ್ಲಿ ಯಜಮಾನನು ಅರ್ಪಿಸುವ ಹವಿಸ್ಸನ್ನು ದೇವತೆಗಳ ಬಳಿಗೆ ಒಯ್ಯುವವನೂ, ನಿತ್ಯವೂ ಎಚ್ಚರಿಕೆಯಿಂದ ಪೂಜ್ಯನಾದವನೂ ಆದ ಯಾವ ಅಗ್ನಿ ಇರುವನೋ ಅವನೇ ಈ ಆತ್ಮ. ಆತ್ಮನಿಂದಲೇ ಸೂರ್ಯನು ಉದಯಿಸುವನು ಹಾಗೂ ಆತ್ಮನಲ್ಲಿಯೇ ಸೂರ್ಯನು ಅಸ್ತಂಗತನಾಗುವನು. ಸಕಲ ದೇವತೆಗಳೂ ಆತ್ಮನಲ್ಲಿಯೇ ಜನಿಸಿ ಅವನಲ್ಲಿಯೇ ಲೀನವಾಗುವರು. ಇಂತಹ ಶಕ್ತಿ ಸಾಮರ್ಥ್ಯಗಳು ಇರುವುದು ಕೇವಲ ಆತ್ಮನಲ್ಲಿ ಮಾತ್ರ. ಆತ್ಮನಲ್ಲಿ ನಾನಾವಿಧದ ಭೇದಗಳಿರುವುದೆಂದು ತಿಳಿಯುವವನು ಅಜ್ಞಾನದಿಂದ ಮೋಹಿತನಾದವನು ಹಾಗೂ ಇವನು ಪುನರ್ಜನ್ಮಗಳಲ್ಲಿ ಸಿಲುಕುವನು. ಇಲ್ಲಿ ನಾನಾತ್ವ ಎಂದರೇನು ಎಂಬುದನ್ನು ಅರಿಯೋಣ - ಪ್ರಪಂಚದಲ್ಲಿ ನಾನಾವಿಧವಾದ ಅನೇಕ ಜೀವರಾಶಿಗಳಿರುವುದು. ಅವುಗಳಲ್ಲೆಲ್ಲಾ ಒಂದೇ ಅದ ಆತ್ಮವು ಅಂತರಾತ್ಮನಾಗಿ (ಹೃದಯ ಗುಹೆಯೊಳಗೆ) ಗೂಢವಾಗಿ ನೆಲಸಿರುವನು. ಆದ್ದರಿಂದ ಈ ವಿಧವಾದ ಜೀವಿಗಳು, ಅವುಗಳಲ್ಲಿರುವ ಆತ್ಮವೂ ಬೇರೆ ಎಂಬುದಾಗಿ ನಾನಾತ್ವವನ್ನು ಆರೋಪಿಸುವವನು ಮರಣಕ್ಕೆ ಪದೇ ಪದೇ ಈಡಾಗುವನು. ಅನೇಕ ಜೀವಿಗಳಿದ್ದರೂ ಅವುಗಳಲ್ಲಿರುವ ಆತ್ಮ ಒಂದೇ ಹೊರತು ಬೇರೆ ಬೇರೆಯಲ್ಲ. ಹೀಗೆ ಅನೇಕ ಜೀವಿಗಳಲ್ಲಿ ಏಕಕಾಲದಲ್ಲಿ ನೆಲೆಸಿರುವುದು ಆತ್ಮನ ವೈಶಿಷ್ಟ್ಯ. ಮನುಷ್ಯನ ಹೃದಯ ಮಧ್ಯದಲ್ಲಿ (ಅಂತಃಕರಣ) ಆತ್ಮನನ್ನು ಪುರುಷ ಎನ್ನುವರು.
ಎಲೈ ಗೌತಮನೇ! (ಗೌತಮ ವಂಶದಲ್ಲಿ ಜನಿಸಿದ ನಚಿಕೇತನೆ), ಶುದ್ಧೋದಕದಲ್ಲಿ ಬೇರೆ ಶುದ್ಧವಾದ ನೀರನ್ನು ಬೆರೆಸಿದರೆ ಅವೆರಡೂ ಒಂದಾಗಿ ಯಾವ ವ್ಯತ್ಯಾಸವೂ ಇಲ್ಲದಂತೆ ಏಕರೂಪವಾಗಿರುವುದೋ ಅದರಂತೆ ಬ್ರಹ್ಮಜ್ಞಾನಿಯ ಆತ್ಮವು ಬ್ರಹ್ಮ ರೂಪವಾದ ಆತ್ಮನಲ್ಲಿ ಲೀನವಾಗುವುದು.
ಮುಂದುವರೆದು ಯಮನು ಹೀಗೆ ವಿವರಿಸಿದನು :-
ಶರೀರವನ್ನು ಒಂದು ಪಟ್ಟಣವೆನ್ನುವರು. ಇದಕ್ಕೆ 11 ದ್ವಾರಗಳಿರುವುದು - ಶಿರಸ್ಸು(ಬ್ರಹ್ಮರಂಧ್ರ), ನಾಭಿ, 2 ಕಣ್ಣುಗಳು, 2 ಕಿವಿಗಳು, 2 ನಾಸಿಕದ್ವಾರ, 2 ಅಧೋರಂಧ್ರಗಳು (ಜಲ, ಮಲದ್ವಾರ), ಮುಖ. ಇಂತಹ ಪಟ್ಟಣದಲ್ಲಿ ಶುದ್ಧಚೈತನ್ಯಾತ್ಮನು ನೆಲೆಸಿರುವನು. ಹಂಸವತೀ ಋಕ್ಕೆಂದು ಪ್ರಸಿದ್ಧವಾದ ಹಂಸಃ ಶುಚಿಷತ್ ಎಂಬ ಮಂತ್ರವಿರುವುದು. ಈ ಮಂತ್ರಕ್ಕೆ ಸೂರ್ಯನು ದೇವತೆಯಾಗಿದ್ದರೂ, ಇಲ್ಲಿ ಅದಿತ್ಯರೂಪದಿಂದ ಜಗತ್ತನ್ನು ಬೆಳಗುತ್ತಿರುವ ಆತ್ಮನೇ ಸೂರ್ಯ ಎಂದು ಅರ್ಥೈಸಲಾಗಿದೆ. ಈ ಆತ್ಮವು ಆಕಾಶದಲ್ಲಿ ಸೂರ್ಯರೂಪ, ಅಂತರಿಕ್ಷದಲ್ಲಿ ವಾಯು, ಯಜ್ಞವೇದಿಯಲ್ಲಿ ಅಗ್ನಿರೂಪದಿಂದಲೂ, ಯಜಮಾನನ ಮನೆಯಲ್ಲಿ ಅತಿಥಿರೂಪದಿಂದಲೂ ವಾಸಿಸುತ್ತಿರುವುದು. ಆತ್ಮವು ಶರೀರದಲ್ಲಿರುವ ಪ್ರಾಣವಾಯುವನ್ನು ಮೇಲಕ್ಕೆತ್ತುವುದು ಹಾಗೂ ಅಪಾನವಾಯುವನ್ನು ಕೆಳಕ್ಕೆ ದೂಡುವುದು. ದೇಹವನ್ನು ಬಿಟ್ಟು ಹೊರಟುಹೋಗುವ ದೇಹಿಯು ಈ ಶರೀರವನ್ನು ತ್ಯಜಿಸಿದ ಮೇಲೆ ಅಲ್ಲಿ ಏನು ಉಳಿಯುವುದು? ಅಂದರೆ ಮನುಷ್ಯನು ಮೃತನಾಗಿ ಶರೀರವನ್ನು ತ್ಯಜಿಸಿ ಹೋದಮೇಲೆ ಆ ಮೃತಶರೀರದಲ್ಲಿ ಆತ್ಮನು ವಾಸಿಸುವುದಿಲ್ಲ. ಮನುಷ್ಯರು ಜೀವಿಸುತ್ತಿರುವುದು ಪ್ರಾಣವಾಯುಶಕೆಯಿಯಿಂದಲೂ ಅಲ್ಲ, ಅಪಾನವಾಯುವಿನ ಬಲದಿಂದಲೂ ಅಲ್ಲ. ಇವೆರಡೂ ಯಾವ ಆತ್ಮನ ಆಶ್ರಯದಲ್ಲಿರುವುದೋ ಅದರ ಬಲದಿಂದ ಜನರು ಬದುಕಿರುವರು. ಅಂದರೆ ಆತ್ಮನು ಶರೀರದಲ್ಲಿರುವವರೆಗೂ ಮನುಷ್ಯನು ಜೀವಿಸಿರುವನು. ಆತ್ಮನು ಶರೀರವನ್ನು ತ್ಯಜಿಸಿದ ಕೂಡಲೇ ಮೃತಶರೀರದಲ್ಲಿ ಪ್ರಾಣಾಪಾನವಾಯುಗಳೂ, ಚೈತನ್ಯವೂ ಇರುವುದಿಲ್ಲ.
ಹೇ ನಚಿಕೇತನೆ! ಸನಾತನವಾದ ಬ್ರಹ್ಮರಹಸ್ಯವನ್ನು ಹೇಳುವೆ ಕೇಳು. ವಿವೇಕಿಯಾದ ಪುರುಷನು ಬ್ರಹ್ಮಜ್ಞಾನವನ್ನು ಪಡೆಯುವುದರಿಂದ ಸಂಸಾರದಿಂದ ಬಿಡುಗಡೆ ಹೊಂದಿ ಮರಣಾನಂತರ ಪರಮಪದವನ್ನು ಸೇರುವನು. ಅಲ್ಲಿಂದ ಮುಂದಕ್ಕೆ ಅವನಿಗೆ ಪುನರ್ಜನ್ಮವಿರುವುದಿಲ್ಲ. ಬ್ರಹ್ಮಜ್ಞಾನವಿಲ್ಲದ ವ್ಯಕ್ತಿಗೆ ಅವನ ಕರ್ಮಾಫಲಾನುಸಾರ ಮರಣಾನಂತರ ಪುನರ್ಜನ್ಮವನ್ನು ನಾನಾ ಶರೀರಗಳಲ್ಲಿ ಪಡೆಯುವನು. ಕೆಲವರು ಜಡರೂಪವನ್ನು ಹೊಂದುವರು. ಜೀವಿಯು ನಿದ್ರೆಯಲ್ಲಿರುವಾಗಲೂ ಆತ್ಮನು ಎಚ್ಚರವಾಗಿದ್ದು ಅವರ ಕಾಮನೆಗಳಿಗನುಸಾರವಾಗಿ ಆಶೋತ್ತರಗಳನ್ನು ನಿರ್ಮಿಸುತ್ತಿರುವನು. ಆತ್ಮನೇ ಪರಿಶುದ್ಧನೂ, ಪವಿತ್ರನೂ, ನಿತ್ಯನೂ ಆದ ಬ್ರಹ್ಮನು. ನದಿಯ ನೀರನ್ನು ನಾನಾ ಪಾತ್ರೆಗಳಲ್ಲಿ ತುಂಬಿದರೆ ಆ ನೀರು ಆಯಾ ಪಾತ್ರೆಗಳ ಆಕಾರ, ರೂಪಗಳಿಗೆ ಅನುಸಾರವಾಗಿ ನಾನಾ ರೂಪಗಳನ್ನು ಧರಿಸುವುದು. ಹಾಗೇ ಒಂದೇ ಅದ ಆತ್ಮವು ಅನೇಕ ಜೀವಿಗಳ ಶರೀರಗಳಲ್ಲಿ ಅವುಗಳ ಆಕಾರ, ರೂಪಗಳಿಗನುಸಾರವಾಗಿ ಒಳಗೂ ಹೊರಗೂ ವ್ಯಾಪಿಸಿರುವುದು. ಜೀವಿಗಳಲ್ಲಿರುವ ಆತ್ಮನಿಗೆ ಸುಖದುಃಖಗಳಿಲ್ಲವೇ ಎಂದರೆ, ಇಲ್ಲ. ಅದು ಕೇವಲ ಶರೀರಕ್ಕೆ ಮಾತ್ರ. ಅನಿತ್ಯ ವಸ್ತುಗಳಲ್ಲಿ ನಿತ್ಯನೂ, ಎಲ್ಲ ಚೇತನಗಳಲ್ಲಿದ್ದರೂ ಒಬ್ಬನೇ ಆದ ಚೈತನ್ಯನೂ, ಎಲ್ಲರ ಆಶೋತ್ತರಗಳನ್ನು ಪೂರೈಸುವವನೂ ಆದ ಪರಮಾತ್ಮನು ತಮ್ಮ ಆತ್ಮನಲ್ಲಿಯೇ ಇರುವನೆಂಬುದನ್ನು ಯಾರು ಅರಿಯುವರೋ ಅವರು ಶಾಶ್ವತ ಸುಖವನ್ನು ಅನುಭವಿಸುವರು. ಪರಮಪದವೆಂಬ ಸ್ಥಾನದಲ್ಲಿ (ನಿರ್ವಿಕಾರವಾದ ಆತ್ಮನಲ್ಲಿ ಅಥವಾ ಮುಕ್ತಿಯಲ್ಲಿ) ಈ ಲೋಕದಲ್ಲಿರುವಂತೆ ಸೂರ್ಯನು ಪ್ರಕಾಶಿಸುವುದಿಲ್ಲ, ಚಂದ್ರ, ನಕ್ಷತ್ರಗಳ ಬೆಳಕೂ ಇರುವುದಿಲ್ಲ, ಮಿಂಚಿನ ಪ್ರಕಾಶವೂ ಇರುವುದಿಲ್ಲ. ಹೀಗಿರುವಾಗ ಅಗ್ನಿಯ ಪಾಡೇನು? ಅಗ್ನಿಯೂ ಇರುವುದಿಲ್ಲ. ಅಂದರೆ ಪರಮಪದದಲ್ಲಿ ಸದಾ ಕತ್ತಲು ಅವರಿಸಿರುವುದೇ? ಇಲ್ಲ. ಆತ್ಮವು ಸ್ವಯಂಪ್ರಕಾಶಿಸುವ ಗುಣವುಳ್ಳದ್ದು. ಅದು ಪ್ರಕಾಶಿಸಿದ ನಂತರವೇ ಉಳಿದೆಲ್ಲವೂ ಪ್ರಕಾಶಿಸುವುದು. ಕೇವಲ ಅದರ ಬೆಳಕಿನಿಂದ ಸಮಸ್ತವೂ ಬೆಳಗುವುದು.
ಇದೇ ಪರಮಪದದ ವರ್ಣನೆಯನ್ನು ಮತ್ತೊಂದು ರೀತಿ ವರ್ಣಿಸಿದರೆ - ಜನನ-ಮರಣ ಪ್ರವಾಹವೇ ಸನಾತನವಾದ ಅಶ್ವತ್ಥವೃಕ್ಷವು. ಇದರ ಬೇರುಗಳು ಉರ್ಧ್ವಮುಖವಾಗಿ ಹರಡಿಕೊಂಡಿರುವುದು. ಕೊಂಬೆಗಳು ಅಧೋಮುಖವಾಗಿರುವವು. ಈ ವೃಕ್ಷದ ಮೂಲವೇ ಶುದ್ಧವಸ್ತುವಾದ ಬ್ರಹ್ಮ. ಅಂದರೆ ಬ್ರಹ್ಮನಿಂದಲೇ ಸಂಸಾರ ಹಾಗೂ ಬಾಹ್ಯಪ್ರಪಂಚವು ಉದ್ಭವಿಸಿರುವುದು. ಸರ್ವಲೋಕಗಳೂ ಅದರ ಆಶ್ರಯದಲ್ಲೇ ಇರುವುದು. ಅದರ ಆಚೆಗೆ ಯಾರೂ ಹೋಗಲಾರರು. ಅದೇ ಅಂತಿಮ ಸ್ಥಾನವಾದ್ದರಿಂದ ಅದರ ಮುಂದಕ್ಕೆ ಅಥವಾ ಆಚೆಗೆ ಏನೂ ಇಲ್ಲ.
ನಮ್ಮ ದೃಷ್ಟಿಗೆ ಗೋಚರವಾಗುವ ಈ ವಿಶ್ವವೂ ಪ್ರಾಣದಲ್ಲಿಯೇ ಅಂದರೆ ಪ್ರಾಣದಲ್ಲಿ ಚೈತನ್ಯರೂಪವೂ, ಸರ್ವವ್ಯಾಪಿಯಾದ ಬ್ರಹ್ಮದಲ್ಲಿಯೇ ಚಲಿಸುವುದು. ವಿಶ್ವಕ್ಕೆ ಕಾರಣೀಭೂತವಾದ ಈ ಬ್ರಹ್ಮದ ಅನಂತ ಸ್ವರೂಪವನ್ನು ಯೋಚಿಸುವುದಕ್ಕೂ ಆಗದು. ಇದು ಮನುಷ್ಯನ ಬುದ್ಧಿಗೆ ನಿಲುಕದು. ಆದರೂ ಯೋಗ ಸಾಧನೆಗಳಿಂದ ಆತ್ಮಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳಿಗೆ ಇದು ಅರಿವಾಗಿ ಅಮೃತರಾಗುವರು. ವಿಶ್ವದ ಉತ್ಪತ್ತಿಸ್ಥಿತಿಲಯಗಳಿಗೆ ಕಾರಣೀಭೂತವಾದ ಪರಮಾತ್ಮನ ಆಜ್ಞೆಯಿಂದಲೇ ಆಗ್ನಿಯು ಸುಫ್ಯೂವುದು, ಸೂರ್ಯ-ಚಂದ್ರರು, ಇಂದ್ರ, ವಾಯುವು ಹಾಗೂ ಮೃತ್ಯುವೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವರು.
ಈ ಶರೀರವು ಪತನವಾಗುವುದಕ್ಕೆ ಮೊದಲೇ ಆತ್ಮಜ್ಞಾನವಾದರೆ ಉತ್ತಮ, ಇಲ್ಲದಿದ್ದಲ್ಲಿ ಪುನರ್ಜನ್ಮವೆತ್ತ ಬೇಕಾಗುವುದು. ಆತ್ಮಜ್ಞಾನಿಗೆ ಬ್ರಹ್ಮಸಾಕ್ಷಾತ್ಕಾರವು ಕನ್ನಡಿಯಲ್ಲಿನ ಮುಖದಂತೆ ಸ್ಪಷ್ಟವಾಗಿ ಕಾಣಿಸುವುದು.
ಮನುಷ್ಯನ ಅಂತಃಕರಣದಲ್ಲಿ ಕಾಮನೆಗಳು ಇಲ್ಲವಾದಲ್ಲಿ ಅವನು ಜೀವನ್ಮುಕ್ತನಾಗಿ ಬ್ರಹ್ಮಾನಂದವನ್ನು ಅನುಭವಿಸುವನು. ಮನಸ್ಸಿನಲ್ಲಿ ಮನೆಮಾಡಿಕೊಂಡಿರುವ ಮಿಥ್ಯಾಬಂಧನಗಳು ನಶಿಸಿದಾಗ ಮನುಷ್ಯನು ಮುಕ್ತಿಯನ್ನು ಪಡೆಯುವನು.
ಮನುಷ್ಯನ ಶರೀರದಲ್ಲಿ 101 ನಾಡಿಗಳಿರುವುದು. ಅವುಗಳಲ್ಲಿ ಸುಷುಮ್ನಾ ನಾಡಿಯು ಶಿರಸ್ಸಿನ ತುದಿಯಲ್ಲಿ ಬ್ರಹ್ಮರಂಧ್ರದವರೆಗೂ ಹೋಗಿರುವುದು. ಈ ನಾಡಿಯಲ್ಲಿ ಪ್ರಾಣವಾಯುವನ್ನು ಚಲಿಸುವಂತೆ ಮಾಡಿ ಬ್ರಹ್ಮರಂಧ್ರದ ಮೂಲಕ ಪ್ರಾಣವು ಹೋದಲ್ಲಿ ಆ ಮನುಷ್ಯನಿಗೆ ಮುಕ್ತಿಯು ದೊರೆಯುವುದು. ಬೇರಾವುದೇ ರಂಧ್ರಗಳ ಮೂಲಕ ಪ್ರಾಣವು ಹೋದಲ್ಲಿ ಅವನಿಗೆ ಪುನರ್ಜನ್ಮ ಖಚಿತ.
ಅಂಗುಷ್ಠ ಪ್ರಮಾಣದಲ್ಲಿ ಪುರುಷನು ಅಂದರೆ ಅಂತರಾತ್ಮನು ಹೃದಯದಲ್ಲಿರುವನು. ಇದನ್ನು ಅರಿಯಬೇಕಾದರೆ ಸಿಪ್ಪೆಯನ್ನು ಸುಲಿದು ಒಳಗಿರುವ ವಸ್ತುವನ್ನು ತೆಗೆಯುವಂತೆ ಆತ್ಮಜ್ಞಾನದಿಂದ ಬೇರ್ಪಡಿಸಬೇಕು. ಅದೇ ದಿವ್ಯ ತೇಜಸ್ಸಿನಿಂದ ಬೆಳಗುತ್ತಿರುವ ಅಮೃತ ವಸ್ತು.
ಮೃತ್ಯುವು ಅಥವಾ ಯಮನು ಉಪದೇಶಿಸಿದ ಸಂಪೂರ್ಣ ಯೋಗ ವಿಧಾನವನ್ನು ಹಾಗೂ ಬ್ರಹ್ಮವಿದ್ಯೆಯನ್ನರಿತುಕೊಂಡು ನಚಿಕೇತನು ಬ್ರಹ್ಮ ಪದವನ್ನು ಪಡೆದನು.
ಇಲ್ಲಿಗೆ ಕಠೋಪನಿಷತ್ತಿನ ಸೂಕ್ಷ್ಮವಿವರಣೆ ಮುಗಿಯಿತು.
ಮೂಲ : ಋಗ್ವೇದ ಸಂಹಿತೆ - ಭಾಗ - 27
….ಮುಂದುವರೆಯುವುದು