Sunday, March 29, 2020

ಯಜ್ಞ - ಸಂಕೇತಾರ್ಥ - ಒಂದು ಸಂಕ್ಷಿಪ್ತ ಲೇಖನ

ಯಜ್ಞ - ಸಂಕೇತಾರ್ಥ - ಒಂದು ಸಂಕ್ಷಿಪ್ತ ಲೇಖನ

ದೀರ್ಘ ಹಾಗೂ ಫಲಪ್ರದವಾದ ಪ್ರಾಪಂಚಿಕ ಜೀವನ ಹಾಗೂ ಅಧ್ಯಾತ್ಮಿಕ ಪರಿಪೂರ್ಣತೆಯನ್ನು ಹೊಂದಲು ಅತ್ಯಂತ ಶಕ್ತಿಶಾಲಿ ಮಾರ್ಗವೇ ಯಜ್ಞ.
ಯಜ್ಞಗಳಲ್ಲಿ ಎರಡು ವಿಧ - ಬಾಹ್ಯ ಯಜ್ಞ ಮತ್ತು ಅಂತರ್ಯಜ್ಞ.
ಉದ್ದೇಶವನ್ನವಲಂಬಿಸಿ ಹಾಗೂ ನಿರ್ದಿಷ್ಟ ಫಲವನ್ನು ಪಡೆಯುವ ಸಲುವಾಗಿ ವೈವಿಧ್ಯಪೂರ್ಣವಾದ ಆಚರಣೆಗಳ ಮೂಲಕ ಆಚರಿಸುವ ಯಜ್ಞವು ಕಾಮ್ಯಯಜ್ಞ.

ಸೃಷ್ಟಿ ಕಾರ್ಯವೂ ಯಜ್ಞ. ವಿಶ್ವದಲ್ಲಿ ಘಟಿಸುವ ಸಮಸ್ತ ಸಕಾರಾತ್ಮಕ ಚಟುವಟಿಕೆಗಳೂ ಸಹ ಯಜ್ಞ ಹಾಗೂ ಇಡೀ ಜೀವನವೇ ಯಜ್ಞ - ಯಜ್ನೋ ವೈ ಶ್ರೇಷ್ಠತಮಂ ಕರ್ಮ - ಆಜೀವಂ ಯಜ್ಞ ತನುತೇ - ಜೀವನಂ ಹಿ ಯಜ್ಞ ಇತಿ.

ಅಧ್ವರ ಎಂದರೆ ಪ್ರಯಾಣ ಹಾಗೂ ಈ ಪದವು ಯಜ್ಞ ಪದಕ್ಕೆ ಸಮಾನಾರ್ಥಕ. ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ನಡುವಿನ ಘರ್ಷಣೆಯೊಂದಿಗೆ ಆಧ್ಯಾತ್ಮಿಕ ಗುರಿಯೆಡೆಗೆ ಪಯಣಿಸುವ ಕ್ರಿಯೆಯನ್ನು ದೃಶ್ಯೀಕರಿಸಿಕೊಳ್ಳುವುದೇ ಯಜ್ಞ.

ಅಂತರ್ಯಜ್ಞದ ಕೇಂದ್ರೀಕರಣವನ್ನು ಯಜುರ್ವೇದದಲ್ಲಿ ಸ್ಪಷ್ಟವಾಗಿ ಕಾಣಬಹುದು:

ಅಗ್ನಿಃ - ಪಶುರಾಸೀತ್ ತೇನಾಯಜಂತ ಸ ಏತಲ್ಲೋಕಮಜಯಧ್ಯಸ್ಮಿನ್ನಗ್ನಿ ಸ ತೆ ಲೋಕೋ ಭವಿಷ್ಯತಿ ತಂ ಜೇಷ್ಯಸಿ ಪಿಬೈತಾ ಆಪಃ
ಇದೇ ರೀತಿಯಾಗಿ ವಾಯು ಹಾಗೂ ಸೂರ್ಯರಿಗೂ.

ಇಲ್ಲಿ ಅಗ್ನಿ, ವಾಯು ಹಾಗೂ ಸೂರ್ಯರನ್ನು ಸ್ಪಷ್ಟವಾಗಿ ಬಲಿಕೊಡುವ ಪಶುಗಳೆಂದು ಸೂಚಿಸಲಾಗಿದೆ. ಇಲ್ಲಿ ಎರಡು ವಿಧವಾದ ಬಲಿಕೊಡುವ ರೀತಿಗಳಿವೆ. ಅವುಗಳೆಂದರೆ - ಪಶುಯಜ್ಞ (ಪಶುಗಳನ್ನು ಬಲಿಕೊಡುವುದು) ಹಾಗೂ ಅಪಶುಯಜ್ಞ (ಪಶುರಹಿತ ಬಲಿಗಳು). ಎರಡನೇ ರೀತಿಗೆ ಉದಾಹರಣೆಯೆಂದರೆ ಅತಿಥಿಯಜ್ಞ, ಸ್ವಾಧ್ಯಾಯಯಜ್ಞ. ಶತಪಥ ಬ್ರಾಹ್ಮಣದಲ್ಲಿ ಐದು ರೀತಿಯ ಯಜ್ಞಗಳ ಬಗ್ಗೆ ವಿವರಗಳಿವೆ. ಅವುಗಳೆಂದರೆ - ಭೂತಯಜ್ಞ, ಮನುಷ್ಯಯಜ್ಞ, ಪಿತೃಯಜ್ಞ, ದೇವಯಜ್ಞ ಹಾಗೂ ಬ್ರಹ್ಮಯಜ್ಞ. ಇಲ್ಲಿ ಸ್ವಾಧ್ಯಾಯಯಜ್ಞ ಅಂದರೆ ವೇದಾಧ್ಯಯನವು ಬ್ರಹ್ಮಯಜ್ಞದ ರೂಪಾಂತರವೆಂದು ವಿವರಿಸಲಾಗಿದೆ.

ಅಥರ್ವವೇದದಲ್ಲಿ ಯಜ್ಞದ ಪ್ರಕ್ರಿಯೆಯಾದ ಬಲಿಗಳ ಬಗ್ಗೆ ಅಂತರಾರ್ಥವನ್ನು ನೋಡಬಹುದು:

ಯಜ್ಞಸ್ಯ ಚಕ್ಷುಃ ಪ್ರಭೃತಿರ್ಮುಖಂ ಚ ವಾಚಾ ಶ್ರೋತ್ರೇಣ ಮನಸಾ ಜುಹೋಮಿ|
ಇಮಂ ಯಜ್ಞಂ ವಿತತಂ ವಿಶ್ವಕರ್ಮಣಾ ದೇವಾ ಯಂತು ಸುಮನಸ್ಯ ಮಾನಾಃ||

ಯಜ್ಞದ ಯಜಮಾನನು ಇಲ್ಲಿ ತಿಳಿಸುವುದೇನೆಂದರೆ, "ನಾನು ಯಜ್ಞವನ್ನು ನನ್ನ ಕಣ್ಣುಗಳು, ಮಾತು, ಕಿವಿಗಳು ಹಾಗೂ ಮನಸ್ಸುಗಳ ಮೂಲಕ ಮಾಡುವೆ." ಈ ನುಡಿಗಳು ಸ್ಪಷ್ಟವಾಗಿ ಅಂತರ್ಯಜ್ಞದ ಬಗೆಗೆ ಸೂಚಿಸುವುದು. ಈ ಯಜ್ಞದ ಮೂಲಕ ಯಜಮಾನನು ತನ್ನ ಇಂದ್ರಿಯ ಸಾಮರ್ಥ್ಯವನ್ನು ಹಾಗೂ ಮಾನಸಿಕ ಶಕ್ತಿಯನ್ನು ಕೋರುತ್ತಾನೆ. ಹೀಗೆ ಯಜ್ಞವನ್ನು ಉತ್ತಮವಾದ ಕಾರ್ಯವೆಂದು ಬಣ್ಣಿಸಲಾಗಿದೆ (ಯಜ್ನೋ ವೈ ಶ್ರೇಷ್ಠತಮಂ ಕರ್ಮ).

ಅಧ್ವರವು ಯಜ್ಞ ಪದಕ್ಕೆ ಸಮಾನಾರ್ಥವಾದದ್ದು. ವೇದ ಋಷಿಗಳು ತಮ್ಮ ಜೀವನದಲ್ಲಿನ ಸಮಸ್ತ ಅನ್ವೇಷಣೆಯನ್ನು ಅಧ್ವರ ಅಥವಾ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವೆಡಗಿನ ಪ್ರಯಾಣವೆಂದು ಪರಿಗಣಿಸಿದ್ದರು. ಯಜ್ಞವನ್ನು ಹೋರಾಟವೆಂದೂ ಪರಿಗಣಿಸಬಹುದು. ಇದು ವಿಶ್ವದಲ್ಲಿನ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ನಡುವಿನ ಭೀಕರ ಹೋರಾಟ.

ಬಹಿರ್ಯಜ್ಞದಲ್ಲಿ ನೀಡುವ ಅರ್ಪಣೆ ಅಥವಾ ಅಹುತಿಗಳಾದ ತುಪ್ಪ ಇತರೆ ಪದಾರ್ಥಗಳು ಕ್ರಿಯೆ, ಸಂತಸ ಮತ್ತು ಅನಂದಗಳ ಸಂಕೇತ. ಯಜ್ಞದ ಫಲವು ಗೋ ಸಂಪತ್ತಿನ ವೃದ್ಧಿ, ಪುತ್ರಕಾಮೇಷ್ಠಿ ಇತರೆ. ಗೋವು ಜ್ಞಾನಜ್ಯೋತಿಯ ಬೆಳಗುವಿಕೆಯಾದರೆ, ಅಶ್ವವು (ಕುದುರೆ) ಶಕ್ತಿ, ಸಾಮರ್ಥ್ಯ ಅಥವಾ ಸಕ್ರಿಯ ಶಕ್ತಿಗಳಾಗಿ ಸಂಕೇತಿಸಲಾಗಿದೆ.

ಅಧ್ವರ್ಯು - ಎಲ್ಲ ಪುರೋಹಿತರಿಗೂ ಮುಂದಾಳು. ಯಜ್ಞದ ಸಂಪೂರ್ಣ ಜವಾಬ್ದಾರಿಯು ಇವನ ಮೇಲೇ ಇರುವುದು.
ಮಾತರಿಶ್ವಾನ್ - ವಾಯು ಅಂತರಂಗ ಯಜ್ಞದಲ್ಲಿ ಅಧ್ವರ್ಯು ಪುರೋಹಿತ.

ಅಧ್ವರ - ಯಜ್ಞ ಪದಕ್ಕೆ ಮತ್ತೊಂದು ಹೆಸರು. ಅಧ್ವರ ಎಂದರೆ ವೇದ ಋಷಿಗಳು (ಅಧ್ವಾನಾಮ್ ರತಿ) ಅಧ್ವರ್ಯುವಿನ ನೇತೃತ್ವದಲ್ಲಿ ಕೊನೆಯ ಗುರಿಯಾದ ಅಮರತ್ತ್ವ ಮತ್ತು ಸತ್ಯ ಹಾಗೂ ಪರಮಾನಂದವನ್ನು ತಲುಪಲು ಕೈಗೊಳ್ಳುವ ದೀರ್ಘ ಯಾತ್ರೆ.

ಉದ್ಗಾತರ್ ಪುರೋಹಿತನು ಸಾಮ ಮಂತ್ರ ಗಾನದಿಂದ ದೇವತೆಗಳನ್ನು ತೃಪ್ತಿಪಡಿಸುವನು. ಅದಿತ್ಯನು ಉದ್ಗಾತರ್ ಆಗಿ ಕಾರ್ಯ ನಿರ್ವಹಿಸುವನು ಮತ್ತು ಅವನ ಗಾಯನವು

(ಉದ್ಗೀತ) ಸುತ್ತಲೂ ಪ್ರತಿಧ್ವನಿಸುತ್ತದೆ.

ನಾಲ್ಕನೇ ಋತ್ವಿಕ್ ಬ್ರಹ್ಮ. ಬ್ರಹ್ಮನು ಯಜ್ಞದ ಸಮಸ್ತ ಆಗುಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುವನು. ಅವನು ಮೌನವಾಗಿರುವನು ಮತ್ತು ಓಂ ಮಂತ್ರವನ್ನು ಸೂಕ್ತ ಸಮಯದಲ್ಲಿ ಸಮ್ಮತಿ ಸೂಚಕವಾಗಿ ಉಚ್ಚರಿಸುವನು. ಬ್ರಹ್ಮನೇ ಮಂತ್ರಗಳ ದೇವತೆ ಹಾಗಾಗಿ ಬ್ರಹ್ಮಣಸ್ಪತಿ.

ಮೂಲ: ಡಾ.ಜಯಂತಿ ಮನೋಹರ ಅವರ "Symbolism of Rig-Veda" ಕೃತಿಯಿಂದ ಸ್ಫೂರ್ತಿಯನ್ನು ಪಡೆಯಲಾಗಿದೆ.
ಕನ್ನಡಕ್ಕೆ : ಗುರುಪ್ರಸಾದ್ ಹಾಲ್ಕುರಿಕ

No comments:

Post a Comment

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ...