ಭಾಗ - 3 - ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತದ ಏಳು ಮಂತ್ರಗಳ ಭಾವಾರ್ಥ ಹಾಗೂ
ವಿಶೇಷ ವಿಷಯಗಳು
ಜಿಜ್ಞಾಸು ನಚಿಕೇತನು ಯಮ ನಿವಾಸಕ್ಕೆ ಸೂಕ್ಷ್ಮರೂಪದಲ್ಲಿ ಪಯಣಿಸಿ ಅಲ್ಲಿಂದ ಮರಳಿ ಬರುವ ವಿಷಯವೆಲ್ಲ ಕಠೋಪನಿಷತ್ತಿನಲ್ಲಿರುವುದು ಸರ್ವರಿಗೂ ತಿಳಿದಿರುವುದು. ಬೇರೆ ಯಾವ ಉಪನಿಷತ್ತಿನಲ್ಲೂ ಇದರ ಬಗ್ಗೆ ಉಲ್ಲೇಖವಿಲ್ಲ. ಆದರೆ ಋಗ್ವೇದದಲ್ಲಿನ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತವು ಆ ರೀತಿಯ ಕಲ್ಪನೆಯನ್ನು ಸಾಂಕೇತಿಕ ಭಾಷೆಯಲ್ಲಿ ಸೂಚಿಸುವುದು.
7 ಮಂತ್ರಗಳ ಈ ಸೂಕ್ತವು ನಚಿಕೇತನ ಯಮಲೋಕ ಯಾತ್ರೆಯ ಮೇಲೆ ಸ್ವಲ್ಪ ಬೆಳಕನ್ನು ಚೆಲ್ಲುವುದು. ಋಗ್ವೇದದಲ್ಲಿ ಯಮ ಒಬ್ಬ ಆದಿತ್ಯ. ಅಥವಾ ಕಠೋಪನಿಷತ್ತಿನಲ್ಲಿರುವಂತೆ ಅವನು ವಿವಸ್ವಾನನ ಪುತ್ರ. ಋಷಿಯಾದ ಕುಮಾರನು ತನ್ನ ಆತ್ಮೋನ್ನತಿಯ, ಆಧ್ಯಾತ್ಮಿಕ ಸಿದ್ಧಿಯ, ಎಲ್ಲೆ ಮೀರಿದ ರಹಸ್ಯಜ್ಞಾನದಿಂದ, ಭೌತಿಕ ಜೀವನದ ಪಂಚಭೌತಿಕ ಶರೀರಸ್ಥವಾದ, ಭೌತ ಪ್ರಜ್ಞಾಸ್ತರವನ್ನು ಅತಿಕ್ರಮಿಸಿ, ಪ್ರಗತಿಹೊಂದಿ, ತನ್ನ ಆಧ್ಯಾತ್ಮಿಕ ಸೂಕ್ಷ್ಮಶರೀರದಲ್ಲಿ ಉನ್ನತ ಪ್ರಜ್ಞೆಯ ವಿಶಾಲ ಊರ್ಧ್ವಲೋಕಗಳತ್ತ ಪಯಣಿಸಿ, ಸರ್ವಭೂತಪತಿಯನ್ನು ದರ್ಶಿಸುತ್ತಾನೆ.
ಭಾಷ್ಯಕಾರರ ಪ್ರಕಾರ ಈ ಸೂಕ್ತಕ್ಕೆ ಎರಡು ವಿಧವಾಗಿ ಅರ್ಥವಿವರಣೆ ಮಾಡಬಹುದು. ಅದರ ಪ್ರಕಾರ ಯಮನ ಪರವಾಗಿ ಒಂದು ಅರ್ಥ ಹಾಗೂ ಆದಿತ್ಯನ ಪರವಾಗಿ ಇನ್ನೊಂದು ಅರ್ಥ. ಅವುಗಳನ್ನೇ ಇಲ್ಲಿ ನೀಡಲಾಗಿದೆ.
ಯಸ್ಮ್ನಿನ್ನಿತಿ ಸಪ್ತರ್ಚo ಸಪ್ತಮಂ ಸೂಕ್ತo ಯಮಗೋತ್ರಸ್ಯ ಕುಮಾರಸ್ಯಾರ್ಷo |
ಅನುಷ್ಟುಭಂ ಯಮದೇವತ್ಯಂ |
ತಥಾ ಚಾನುಕ್ರಾಂತಂ
ಯಸ್ಮಿನ್ಕುಮಾರೋ ಯಮಾಯನೋ ಯಾಮಮಾನುಷ್ಟುಭಂ ಶ್ಚಿತಿ ||
ಮಂಡಲ - 10; ಅನುವಾಕ - 11; ಸೂಕ್ತ - 135;ಅಷ್ಟಕ - 8; ಅಧ್ಯಾಯ - 7; ವರ್ಗ - 23.
ಸೂಕ್ತದಲ್ಲಿರುವ ಋಕ್ಸಂಖ್ಯೆ - 7;
ಋಷಿ - ಕುಮಾರೋ ಯಮಾಯನಃ
ದೇವತೆ - ಯಮ; ಛಂದಸ್ಸು - ಅನುಷ್ಟುಪ್
ಯಸ್ಮಿನ್ವೃಕ್ಷೇ ಸುಪಾಲಾಶೇ ದೇವೈಃ ಸಂಪಿಬತೇ ಯಮಃ|
ಅತ್ರಾ ನೋ ವಿಶ್ಪತಿಃ ಪಿತಾ ಪುರಾಣಾನ್ ಅನು ವೇನತಿ || 1 ||
ಯಮನ ಪರವಾದ ಅರ್ಥ:-
ಉತ್ತಮವಾದ ಎಲೆಗಳಿಂದ ದಟ್ಟವಾಗಿ ನಿಬಿಡವಾದ ವೃಕ್ಷದ ನೆರಳು ಯಾವರೀತಿ ವಿಶ್ರಾಂತಿಗೆ ಸುಖಕರವಾಗಿರುವುದೋ ಅದರಂತೆ ಸುಖಕರವಾದ ಯಮನ ಆಸ್ಥಾನದಲ್ಲಿ (ಯಮಾಲಯದಲ್ಲಿ) ವಿವಸ್ವಂತನ ಮಗನಾದ ಯಮನು ತನ್ನ ಪರಿಜನರೊಡನೆ ಸುಖವಾಗಿ ವಾಸಮಾಡುತ್ತಾನೆ. ಇಂತಹ ಈ ಯಮಲೋಕದಲ್ಲಿ ಬಹುಕಾಲದಿಂದ ವಾಸಮಾಡುತ್ತಿರುವ ಪಿತೃಗಳ ಸಮೀಪದಲ್ಲಿಯೇ ನಾನೂ (ನಚಿಕೇತನು) ವಾಸಮಾಡಬೇಕೆಂದು ಜನರಲ್ಲಿ ಶ್ರೇಷ್ಠವಾದ ನನ್ನ ತಂದೆಯು ಅಪೇಕ್ಷಿಸುತ್ತಾನೆ.
ಅದಿತ್ಯಪರವಾದ ಅರ್ಥ
ಉತ್ತಮವಾದ ಎಲೆಗಳಿಂದ ನಿಬಿಡವಾದ ವೃಕ್ಷದ ನೆರಳಿನಂತೆ ಸುಖಕರವಾದ ಸ್ವರ್ಗದಲ್ಲಿ (ಅಂತರಿಕ್ಷದಲ್ಲಿ) ಪ್ರಕಾಶಮಾನವಾದ ತನ್ನ ಕಿರಣಗಳಿಂದ ಆದಿತ್ಯನು ಬೆಳಗುತ್ತಿರುವನು. ಪ್ರಜೆಗಳಿಗೆ ವೃಷ್ಟಿಪ್ರಕಾಶನಾದಿಗಳನ್ನು ಕೊಟ್ಟು ಸಲಹುವವನೂ ಸರ್ವರಿಗೂ ಪ್ರಾಣಭೂತನೂ ಆದ ಆ ಆದಿತ್ಯನು ಹಿಂದಿನ ಸ್ತೋತೃಜನರನ್ನೂ ನಮ್ಮನ್ನೂ ಅನುಗ್ರಹಿಸಬೇಕೆಂದು ಬಯಸುತ್ತಾನೆ.
ಪುರಾಣಾನ್ ಅನುವೇನಂತಂ ಚರಂತಂ ಪಾಪಯಾಮುಯಾ|
ಅಸೂಯನ್ನ ಭ್ಯ ಚಾಕಾಶಂ ತಸ್ಮಾ ಅಸ್ಪೃಹಯಂ ಪುನಃ || 2 ||
ಯಮನ ಪರವಾದ ಅರ್ಥ
(ನಚಿಕೇತನ ವಾಕ್ಯ) ಪುರಾತನರಾದ ಪಿತೃಗಳನ್ನು ನಾನು ಅನುಸರಿಸಿ ಹೋಗಲೆಂದು ಬಯಸುತ್ತಿರುವ, ದುರ್ಬುದ್ಧಿಯುಕ್ತನಾದ ವಾಜಾಶ್ರವಸ್ಸೆಂಬ ನನ್ನ ತಂದೆಯನ್ನು ಮೊದಲು ನಾನು ನನ್ನ ಮನಸ್ಸಿನ ಉದ್ವೇಗದಿಂದ ನೋಡಿದೆನು. ಅನಂತರ ತಂದೆಯ ಆಜ್ಞೆಯನ್ನು ಪಾಲಿಸಬೇಕೆಂಬ ಕರ್ತವ್ಯದಿಂದ ಮೃತ್ಯುವಿನ ಬಳಿಗೆ ಹೋಗಲು ಇಚ್ಛಿಸಿದೆನು.
ಈ ಋಕ್ಕಿನಲ್ಲಿರುವ ವಾಕ್ಯವನ್ನು ನಚಿಕೇತನು ಆಡಿರುವನು- ನನ್ನ ತಂದೆ ವಾಜಾಶ್ರವಸ್ಸನು ದುರ್ಬುದ್ಧಿಯಿಂದ ಪಿತೃಗಳ ಬಳಿ ವಾಸಿಸೆಂದು ಬಯಸಿರುವನು. ಇದನ್ನು ಕೇಳಿ ಮೊದಲು ನನ್ನ ಮನಸ್ಸಿಗೆ ಬಹಳ ಕೋಪ ಹಾಗೂ ವ್ಯಥೆಯುಂಟಾಯಿತು. ತಂದೆಯಾದವನೇ ತನ್ನ ಮಗನನ್ನು ಮೃತ್ಯುವಿನ ಸಮೀಪಕ್ಕೆ ಕಳುಹಿಸುವುದುಂಟೆ? ಇದೇಕೆ ಇವನಿಗೆ ಈ ದುರ್ಬುದ್ಧಿ ಉಂಟಾಯಿತು ಎಂಬ ಆಕ್ರೋಶವು ನನ್ನ ಮನಸ್ಸಿನಲ್ಲಿ ಉಂಟಾಯಿತು. ಅನಂತರ ಹಾಗೇ ಯೋಚಿಸುವಲ್ಲಿ ತಂದೆಯ ಆಜ್ಞೆಯನ್ನು ಪಾಲಿಸುವುದೇ ಪುತ್ರನ ಕರ್ತವ್ಯವೆಂದು ತಿಳಿದು ಮೃತ್ಯುವಿನ ಬಳಿ ಹೋಗುವೆನೆಂದು ಮನಸ್ಸಿನಲ್ಲಿ ನಿರ್ಧರಿಸಿದೆನು ಎಂಬುದಾಗಿ ಈ ಮಂತ್ರದ ಮುಖ್ಯ ಅಭಿಪ್ರಾಯ.
ಆದಿತ್ಯಪರವಾದ ಅರ್ಥ
(ಋಷಿಕುಮಾರನ ವಾಕ್ಯ) ಪುರಾತನರಾದ ಸ್ತೋತೃಜನರನ್ನು (ಪೂರ್ವಕಾಲದ ಋಷಿಗಳನ್ನು ಅಥವಾ ಪಿತೃಗಳನ್ನು) ಅಪೇಕ್ಷಿಸುತ್ತಿರುವವನೂ ಉದಯಾಸ್ತಮಾನಗಳ ಮಧ್ಯಕಾಲದಲ್ಲಿ ಅಂತರಿಕ್ಷದಲ್ಲಿ ಸಂಚರಿಸುತ್ತಿರುವವನೂ ಆದ ಆದಿತ್ಯನನ್ನು ಸ್ತೋತ್ರಮಾಡಲು ಅಸಮರ್ಥನಾದ ಇಲ್ಲವೇ ಮನಸ್ಸಿಲ್ಲದ ನೀಚಬುದ್ಧಿಯಿಂದ ಮೊದಲಿಗೆ ಅಸೂಯೆಯಿಂದ ಕೂಡಿದವನಾಗಿ ನೋಡಿದೆನು. ಆದಿತ್ಯನ ಮಹಾತ್ಮೆಯನ್ನು ತಿಳಿದನಂತರ ಈಗ ಆದಿತ್ಯನನ್ನು ಸ್ತುತಿಗಳಿಂದಲೂ ಪರಿಚರಣ ಕರ್ಮಗಳಿಂದಲೂ ಪಡೆಯಲು ಇಚ್ಛಿಸಿದೆನು.
(ಕುಮಾರ ಋಷಿಯ ವಾಕ್ಯ) - ತನ್ನನ್ನು ಹಿಂದಿನಿಂದಲೂ ಸ್ತೋತ್ರ ಮಾಡುತ್ತಿರುವ ಪುರಾತನ ಋಷಿಗಳನ್ನು ಅಥವಾ ಪಿತೃಗಳನ್ನು ಅನುಗ್ರಹಿಸಬೇಕೆಂದು ಅಪೇಕ್ಷಿಸುತ್ತಿರುವವನೂ ಉದಯಕಾಲದಿಂದ ಅಸ್ತಮಕಾಲದವರೆಗೂ ಅಂತರಿಕ್ಷದಲ್ಲಿ ಸಂಚರಿಸುತ್ತಿರುವವನೂ ಆದ ಆದಿತ್ಯನನ್ನು ನಾನು ಸ್ತೋತ್ರಮಾಡಲು ಕೈಲಾಗದೆ ದುರ್ಬುದ್ಧಿಯಿಂದಲೂ ಅಸೂಯೆಯಿಂದಲೂ ಯುಕ್ತನಾಗಿ ಈ ಸೂರ್ಯನೇನು ಮಹಾ? ಪ್ರಪಂಚದಲ್ಲಿ ಕಂಡುಬರುವ ವಸ್ತುಗಳಲ್ಲಿ ಇವನೂ ಒಂದು ಎಂಬ ಭಾವನೆಯಿಂದ ನೋಡಿದೆನು. ಅನಂತರ ಈ ಆದಿತ್ಯನ ಮಹಾತ್ಮೆಯನ್ನು
ತಿಳಿದ ಬಳಿಕ ನನ್ನ ಆ ಕೆಟ್ಟ ಬುದ್ಧಿಯನ್ನು ಬಿಟ್ಟು ಆದಿತ್ಯನನ್ನು ಸ್ತೋತ್ರಗಳಿಂದಲೂ ಪರಿಚರಣ ಕರ್ಮಗಳಿಂದಲೂ ಪ್ರಸನ್ನನಾಗುವಂತೆ ಮಾಡಿಕೊಳ್ಳಲು ಬಯಸಿದೆನು.
ಈ ಮೇಲಿನ ವಾಕ್ಯಗಳನ್ನು ಕುಮಾರನೆಂಬ ಋಷಿಯು ಹೇಳಿದ್ದಾನೆ. ಅದಿತ್ಯನ ಮಹಾತ್ಮೆಯು ಮೊದಲು ತನಗೆ ಗೊತ್ತಿಲ್ಲವಾದ್ದರಿಂದ ಅವನನ್ನು ಅಲಕ್ಷ್ಯದಿಂದಲೂ ದುರ್ಬುದ್ಧಿಯಿಂದಲೂ ನೋಡಿದೆನೆಂದೂ ಅನಂತರ ಜ್ಞಾನೋದಯವಾದ ಮೇಲೆ ಆದಿತ್ಯನ ಮಹಿಮೆಯ ಅರಿವುಂಟಾಗಿ ಅವನನ್ನು ಸ್ತುತಿಸಿ ಅವನ ಅನುಗ್ರಹವನ್ನು ಪಡೆಯಬೇಕೆಂದು ಇಚ್ಛಿಸಿದೆನು ಎಂದು ಹೇಳಿಕೊಂಡಿದ್ದಾನೆ.
ಯಂ ಕುಮಾರ ನವಂ ರಥಮಚಕ್ರಂ ಮನಸಾಕೃ ಣೋ |
ಏಕೇಷಂ ವಿಶ್ವತಃ ಪ್ರಾಂಚಮಪಶ್ಯನ್ನಧಿ ತಿಷ್ಠಸಿ||3||
ಯಮನಪರವಾದ ಅರ್ಥ
ಎಲೈ ನಚಿಕೇತನೇ! ಹೊಸದಾದ ಅಂದರೆ ಇದುವರೆಗೂ ನೋಡದಿರುವುದೂ ಚಕ್ರವಿಲ್ಲದ್ದೂ, ಒಂದೇ ಅಚ್ಚಿನ ಮರವುಳ್ಳದ್ದೂ ಆದರೂ, ಸಮಸ್ತ ಪ್ರದೇಶಗಳಲ್ಲೂ ಚೆನ್ನಾಗಿ ಸಂಚರಿಸಬಲ್ಲದ್ದೂ ಆದ ಯಾವ ರಥವನ್ನು ಹತ್ತಿ ನನ್ನ ಬಳಿಗೆ ಬರಬೇಕೆಂದು ಮನಸ್ಸಿನಲ್ಲಿ ನಿಶ್ಚಯಮಾಡಿದಿಯೋ (ಅಂತಹ ರಥವನ್ನು) ವಿವೇಚನಾಶಕ್ತಿರಹಿತನಾಗಿ ಹತ್ತಿ ಕುಳಿತಿದ್ದೀಯೆ.
(ಯಮನ ವಾಕ್ಯ) ಎಲೈ ನಚಿಕೇತನೇ! ನೀನು ನನ್ನ ಬಳಿಗೆ ಬರಬೇಕೆಂದು ಮನಸ್ಸಿನಲ್ಲಿ ಆಲೋಚಿಸಿ ಅದಕ್ಕಾಗಿ ನಿನ್ನ ಮನಸ್ಸಿನಲ್ಲೇ ಒಂದು ಹೊಸ ರಥವನ್ನು ಕಲ್ಪನೆ ಮಾಡಿಕೊಂಡಿದ್ದೆ. ಆ ರಥದ ಸ್ವರೂಪವು ಬಹು ವಿಚಿತ್ರವಾದದ್ದು. ಅದು ಯಾರೂ ಎಂದೂ ನೋಡಿರದೆ ಹೊಸದಾಗಿರಬೇಕು. ಅದಕ್ಕೆ ಚಕ್ರಗಳಿಲ್ಲ, ಒಂದೇ ಅಚ್ಚಿನ ಮರ. ಆದರೂ ಅದು ಎಲ್ಲೆಡೆ ಸಂಚರಿಸುವಂತಿರಬೇಕು. ಇಂತಹ ರಥವನ್ನು ನಿನ್ನ ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಂಡು ಹತ್ತಿ ಕುಳಿತಿರುವೆ. ಎಂದರೆ ನನ್ನ (ಮೃತ್ಯು) ಬಳಿಗೆ ಬರುವುದು ಯುಕ್ತವೇ ಅಲ್ಲವೇ ಎಂದು ಯೋಚಿಸದೆ ಸುಮ್ಮನೆ ಹೊರಡಲೇಬೇಕೆಂಬ ಸ್ಥಿರಮನಸ್ಸಿನಿಂದ ಆ ರಥವನ್ನು ಹತ್ತಿ ಕುಳಿತಿರುವೆ ಎಂದರೆ ನನ್ನ ಬಳಿಗೆ ಬರಬೇಕೆಂದು ಮನಸ್ಸಿನಲ್ಲಿ ನಿಶ್ಚಯಮಾಡಿರುವೆ.
ಆದಿತ್ಯಪರವಾದ ಅರ್ಥ
ತನ್ನನ್ನು ಸ್ತೋತ್ರಮಾಡುತ್ತಿರುವ ಋಷಿಕುಮಾರನನ್ನು ಸಂಬೋಧಿಸಿ ಅದಿತ್ಯನು ಅವನಿಗೆ ಪ್ರತ್ಯಕ್ಷನಾಗಿ ದೇಹ ಮತ್ತು ಆತ್ಮಗಳಿಗಿರುವ ಭೇದಭಾವವನ್ನು ತಿಳಿಸಿ ವಿವೇಕ ಜ್ಞಾನವನ್ನು ಬೋಧಿಸುವನು.
ಆದಿತ್ಯನು ಈ ರೀತಿ ಹೇಳುವನು - ಎಲೈ ಋಷಿಕುಮಾರಾನೇ, ಈ ದೇಹವೇ ಒಂದು ರಥದಂತಿರುವುದು, ಇದಕ್ಕೆ ಚಕ್ರವಿಲ್ಲ. ಒಂದೇ ಅಚ್ಚಿನ ಮರವಿರುವುದು ಎಂದರೆ ರಥಕ್ಕೆ ಅಚ್ಚಿನಮರವು ಆಧಾರವಾಗಿರುವಂತೆ ಶರೀರಕ್ಕೆ ಪ್ರಾಣವೇ ಆಧಾರವಾಗಿರುವುದು. ಈ ಶರೀರವು ಪಾದಗಳ ಸಹಾಯದಿಂದ ಎಲ್ಲೆಡೆ ಸಂಚರಿಸಬಲ್ಲದು. ಇದು ನಿನಗೆ ಹೇಗೆ ಪ್ರಾಪ್ತಿಯಾಯಿತೆಂಬುದನ್ನು ಹೇಳುವೆನು ಕೇಳು - ಮನಸ್ಸಿನಲ್ಲಿ ಹುಟ್ಟುವ ಸಂಕಲ್ಪದಿಂದ ಕಾರ್ಯವನ್ನು ಮಾಡಬೇಕೆಂಬ ಕಾಮವು ಉಂಟಾಗುವುದು. ಹೀಗೆ ಅಪೇಕ್ಷೆಯುಂಟಾದರೆ ಪಾಪ-ಪುಣ್ಯ ಕರ್ಮಗಳು ಮಾಡಲ್ಪಡುವುವು. ಈ ವಿಧದ ಕರ್ಮಗಳನ್ನು ಅನುಭೋಗಿಸುವುದಕ್ಕಾಗಿ ಶರೀರವು ಪ್ರಾಪ್ತವಾಗುವುದು. ಈ ರೀತಿಯ ಮನಸ್ಸಂಕಲ್ಪದಿಂದಾಗಿಯೇ ಪ್ರಾಣಿಗೆ ಶರೀರ ಪ್ರಾಪ್ತವಾಗುವುದು. ಈ ಶರೀರವನ್ನು ನಿನ್ನ ಮನಸ್ಸಿನ ಸಂಕಲ್ಪದಿಂದಲೇ ನಿರ್ಮಿಸಿಕೊಂಡಿರುವೆ. ಹಾಗೂ ಪರಬ್ರಹ್ಮನಾದ ನನ್ನ ಸ್ವರೂಪವನ್ನು ತಿಳಿಯದೆ ಆ ದೇಹವೆಂಬ ರಥದಲ್ಲಿಯೇ ಕುಳಿತಿರುವೆ. ಎಂದರೆ, ಬ್ರಹ್ಮಜ್ಞಾನವನ್ನು ಪಡೆಯದೆ ಮುಕ್ತಿಯನ್ನೂ ಪಡೆಯದೆ ಶರೀರದಲ್ಲೇ ನೆಲಸಿದ್ದು ಸಂಸಾರ ಸಾಗರದಲ್ಲಿ ಬಳಲುತ್ತಿರುವೆ ಎಂದು ಆದಿತ್ಯನು ಋಷಿಕುಮಾರನಿಗೆ ದೇಹಾತ್ಮಕ ವಿವೇಕವನ್ನು ಉಪದೇಶಿಸಿರುವರು.
ಯಂ ಕುಮಾರ ಪ್ರಾವರ್ತಯೋ ರಥಂ ವಿಪ್ರೇಭ್ಯಸ್ಪರಿ|
ತಂ ಸಾಮಾನು ಪ್ರಾವರ್ತತ ಸಮಿತೋ ನಾವ್ಯಾಹಿತಂ||4||
ಯಮನ ಪರವಾದ ಅರ್ಥ
ಹೇ ನಚಿಕೇತನೇ! ನನ್ನ ಬಳಿಗೆ ಬರುವುದಕ್ಕಾಗಿ ನೀನು ಹತ್ತಿ ಕುಳಿತು ಭೂಲೋಕದಲ್ಲಿರುವ ಮೇಧಾವಿ ಜನರ ಮೇಲ್ಭಾಗದಲ್ಲಿ ಅಂದರೆ ಅಂತರಿಕ್ಷದ ಮೂಲಕ ನನ್ನ ಬಳಿ ಬಂದೆಯೋ ಅಂತಹ ರಥವನ್ನು ಹಾಗೂ ನಿನ್ನ ತಂದೆಯಿಂದ ನಿನಗೆ ಮಾಡಿದ ಹಿತೋಪದೇಶವೂ ಅದರೊಂದಿಗೆ ನಿನ್ನನ್ನು ಯಮನ ಸಮೀಪಕ್ಕೆ ಹೋಗಿ ಮಾತನಾಡು ಎಂಬ ಸಾಂತ್ವನ ವಚನವೂ ನಿನ್ನನ್ನು ಅನುಸರಿಸಿ ಬಂದಿತು.
ಎಲೈ ನಚಿಕೇತ ಕುಮಾರನೇ, ನನ್ನ ಬಳಿಗೆ ಬರುವುದಕ್ಕಾಗಿ ನೀನು ರಥವನ್ನು ಹತ್ತಿ ಅದರ ಸಹಾಯದಿಂದ ಭೂಮಿಯ ಮೇಲಿರುವ ಬುದ್ಧಿವಂತ ಜನರ ಮೇಲೆ ಅಂತರಿಕ್ಷದಲ್ಲಿ ಹಾದು ಬಂದು ನನ್ನ ಸಮೀಪಕ್ಕೆ ಬಂದಿರುವೆ. ಆ ಕಾಲದಲ್ಲಿ ನಿನ್ನ ತಂದೆಯು ಮಾಡಿದ ಹಿತೋಪದೇಶರೂಪದ ಸಾಂತ್ವನವಚನವೂ ಆ ರಥದ ಜೊತೆಯಲ್ಲಿಯೇ ನಿನ್ನನ್ನು ಅನುಸರಿಸಿ ಬಂದಿತು. ಅಂದರೆ ತಂದೆಯ ಹಿತೋಪದೇಶವು ನಿನ್ನ ಜ್ಞಾಪಕದಲ್ಲಿತ್ತು.
ಸಾಧಾರಣವಾಗಿ ಪಿತೃಲೋಕವೂ (ಯಮಲೋಕ), ಸ್ವರ್ಗಲೋಕವೂ ಎತ್ತರವಾದ ಪ್ರದೇಶದಲ್ಲಿರುವುದೆಂದು ಅಭಿಪ್ರಾಯ. ಹಾಗಾಗಿ ಅಲ್ಲಿರುವ ಯಮಾಲಯಕ್ಕೆ ಹೋಗಲು ಭೂಮಿಯ ಮೇಲಿರುವ ಮನುಷ್ಯರು ಮೇಲೆ ಹಾದು ಹೋಗಬೇಕು. ವಿಪ್ರ ಶಬ್ದಕ್ಕೆ ಮೇಧಾವಿಗಳು, ಬುದ್ಧಿವಂತರು ಎಂಬ ಅರ್ಥವಿರುವುದು. ಮನುಷ್ಯನು ಎಷ್ಟೇ ಬುದ್ಧಿವಂತನಾದರೂ ಯಾವ ಸಾಧನದ ಸಹಾಯವೂ ಇಲ್ಲದೆ ಅಂತರಿಕ್ಧಕ್ಕೆ ಹೋಗಲು ಅಸಾಧ್ಯ. ಆದ್ದರಿಂದಲೇ ಜನರು ಬುದ್ಧಿವಂತರಾಗಿದ್ದರೂ ಅವರು ಭೂಮಿಯ ಮೇಲೇ ಇರುವರು. ನಚಿಕೇತನು ಯಮಾಲಯಕ್ಕೆ ಹೋಗುವಾಗ ಭೂಮಿಯ ಮೇಲಿರುವ ಪರ್ವತಗಳು, ಜೀವಿಗಳನ್ನು ಕೆಳಗೇ ಬಿಟ್ಟು ತಾನು ಮಾತ್ರ ಮೇಲೆ ಹೋದನೆಂಬುದನ್ನು ವಿವರಿಸಲು ಇಲ್ಲಿ ವಿಪ್ರೇಭ್ಯ ಪರಿ ಎಂಬ ಪದಗಳನ್ನು ಋಷಿಯು ಬಳಸಿರುವರು.
ಅದಿತ್ಯಪರವಾದ ಅರ್ಥ
ಎಲೈ ಋಷಿಕುಮಾರನೇ! ನೀನು ಶರೀರವೆಂಬ ರಥದಲ್ಲಿ ಕುಳಿತು (ಎಂದರೆ ಶರೀರಧಾರಿಯಾದ ಮಾನವನಾಗಿ) ಮೇಧಾವಿಗಳ ಮಧ್ಯದಲ್ಲಿ ಸಂಸಾರಕರ್ಮಗಳಲ್ಲಿ ತೊಡಗಿರುವೆ ಹಾಗೂ ವೇದವಾಕ್ಯಗಳಲ್ಲಿ ಅಡಕವಾಗಿರುವುದೂ ಋಕ್ಸಾಮಮಂತ್ರಗಳಿಂದ ನೆರವೇರಿಸಲ್ಪಡುವುದೂ ಅದ ಯಜ್ಞಕರ್ಮಾದಿಗಳನ್ನು ಮಾಡುತ್ತಿರುವೆ. ಈ ಕರ್ಮಗಳನ್ನು ಮಾಡಿದ ಬಳಿಕ ಅದರ ಫಲವಾಗಿ ಸತ್ಯಜ್ಞಾನಾದಿಸ್ವರೂಪನೂ, ನಿರ್ಲಿಪ್ತನೂ ಆದ ಪರಮಾತ್ಮನನ್ನು ನಿನ್ನ ಶುದ್ಧ ಬುದ್ಧಿಯಿಂದ ಸಾಕ್ಧಾತ್ಕರಿಸಿಕೊಂಡು ಪರಮಾತ್ಮನನ್ನು ಸೇರುವೆ ಎಂಬ ಅಭಿಪ್ರಾಯವು.
ಈ ಮಂತ್ರದ ಪೂರ್ವಾರ್ಧದಲ್ಲಿ ಶರೀರಧಾರಿಯಾದ ಮಾನವನು ಸಂಸಾರದಲ್ಲಿ ಪ್ರವೃತ್ತನಾಗುವುದನ್ನೂ ಉತ್ತರಾರ್ಧದಲ್ಲಿ ಸಂಸಾರದಿಂದ ಮುಕ್ತನಾಗಿ ನಿವೃತ್ತಿ ಮಾರ್ಗದಿಂದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡು ಸದ್ಗತಿಯನ್ನು ಪಡೆಯುವುದನ್ನು ವಿವರಿಸಲಾಗಿದೆ.
ಕಃ ಕುಮಾರಮಜನಯದ್ರಥo ಕೋ ನಿರವರ್ತಯತ್|
ಕಃ ಸ್ವಿತ್ತದದ್ಯ ನೋ ಬ್ರುಯಾದನುದೇಯೀ ಯಥಾಭವತ್||5||
ಯಮನ ಪರವಾದ ಅರ್ಥ
ಯಾವ ಪುರುಷನು ಕುಮಾರನನ್ನು (ಯಮನ ಬಳಿಗೆ ಕಳುಹಿಸುವುದಕ್ಕಾಗಿ) ಉತ್ಪತ್ತಿಮಾಡುತ್ತಾನೋ, ಯಾವ ಪುರುಷನು (ಬಾಲಕನನ್ನು ಯಮನ ಸಮೀಪಕ್ಕೆ ಕಳುಹಿಸುವುದಕ್ಕಾಗಿ) ರಥವನ್ನು ಸಿದ್ಧಗೊಳಿಸುವನೋ, ಯಾವ ರೀತಿ ಕುಮಾರನು ಯಮನಿಗೆ ಒಪ್ಪಿಸಲ್ಪಡುವವನಾಗುತ್ತಾನೆಯೋ (ಅನಂತರ ಅಲ್ಲಿಂದ ಹಿಂದಕ್ಕೆ ಬರಲು) ಅನುಗುಣವಾದ ಉಪಾಯವನ್ನು ಈಗ ನಮಗೆ ಯಾವ ಪುರುಷನು ಹೇಳುತ್ತಾನೆ?
ಪ್ರಪಂಚ ವ್ಯವಹಾರದಲ್ಲಿ ಮೃತ್ಯುವಿನ ವಶಕ್ಕೆ ಒಪ್ಪಿಸುವುದಕ್ಕಾಗಿ ಯಾವ ಪುರುಷನು ತಾನೆ ಪುತ್ರನನ್ನು ಉತ್ಪತ್ತಿಮಾಡುವನು? ತಾನು ಪಡೆದ ಪುತ್ರನನ್ನು ರಥದಲ್ಲಿ ಕುಳ್ಳಿರಿಸಿ ಯಮನ ಸಮೀಪಕ್ಕೆ ಹೋಗುವಂತೆ ಯಾವ ಪುರುಷನು ತಾನೆ ಕಳಿಸುವನು? ಹಾಗೂ ಯಮನ ಬಳಿಗೆ ಕಳಿಸಿದ ನಂತರ ತನ್ನ ಪುತ್ರನನ್ನು ಹಿಂದಕ್ಕೆ ಬರುವ ಉಪಾಯವನ್ನು ಯಾವ ಪುರುಷನು ಹೇಳಿಕೊಡುವನು?
ತಾನೇ ಹಡೆದ ತನ್ನ ಸ್ವಂತ ಪುತ್ರನನ್ನು ಮೃತ್ಯುವಿನ ವಶಕ್ಕೆ ಒಪ್ಪಿಸುವ ತಂದೆಯು ಪ್ರಪಂಚದಲ್ಲಿ ಇರುವರೆ? ಮತ್ತು ತಂದೆಯೇ ಸ್ವತಃ ಮಗನನ್ನು ಯಮನ ಬಳಿಗೆ ಹೋಗೆಂದು ಹೇಳಿ, ಅವನು ಹೋಗುವುದಕ್ಕೆ ರಥವನ್ನು ಸಿದ್ಧಮಾಡಿಕೊಟ್ಟು ಅಲ್ಲಿಂದ ಮತ್ತೆ ಹಿಂತಿರುಗುವ ಉಪಾಯವನ್ನು ಹೇಳಿಕೊಟ್ಟು ಮಗನನ್ನು ಯಮನ ಬಳಿಗೆ ಕಳಿಸುವ ತಂದೆಯೂ ಪ್ರಪಂಚದಲ್ಲಿರುವನೆ? ಒಂದು ವೇಳೆ ಇದ್ದಲ್ಲಿ ಅವನು ಶುದ್ಧ ಮೂರ್ಖನು.
ಆದಿತ್ಯ ಪರವಾದ ಅರ್ಥ
ಕುಮಾರನೆಂಬ ಋಷಿಯು ತಾನು ಪರಮಾತ್ಮನ ಅಂಶವೇ ಎಂದೂ ಪರಮಾತ್ಮನಿಗೂ ತನಗೂ ತಾದಾತ್ಮ್ಯ ಇರುವುದೆಂದೂ ಪರಮಾತ್ಮನನ್ನು ಬಿಟ್ಟು ಅನ್ಯ ವಸ್ತುವು ಇಲ್ಲವೆಂದೂ ಎಲ್ಲವೂ ಪರಮಾತ್ಮನ ಸ್ವತ್ತೇ ಆಗಿರುವುದೆಂದೂ ತಿಳಿದು ಈ ಮಂತ್ರಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಖಂಡಿಸುವನು.
ಕುಮಾರನೆಂಬ ನನ್ನನ್ನು ಯಾವ ತಂದೆಯು ಉತ್ಪತ್ತಿ ಮಾಡಿದನು? ಪ್ರಪಂಚವೂ ಅದರಲ್ಲಿರುವ ಸಮಸ್ತ ಜೀವಿಗಳೂ ಪರಮಾತ್ಮನ ಸ್ವರೂಪವೇ ಆಗಿದ್ದು ಅವನನ್ನು ಬಿಟ್ಟು ಬೇರೆ ವಸ್ತುವೇ ಇಲ್ಲದಿರುವಾಗ ಪುತ್ರನಾರು? ತಂದೆ ಯಾರು? ತಂದೆಯು ಪುತ್ರನನ್ನು ಉತ್ಪತ್ತಿಮಾಡುವುದೆಂದರೇನು? ಇವೆಲ್ಲವೂ ಬರೀ ಭ್ರಾಂತಿ. ನಮ್ಮ ಶರೀರವೇ ಒಂದು ರಥ. ಅದರಲ್ಲಿ ಪರಮಾತ್ಮನ ಅಂಶವಾದ ನಾನು (ಋಷಿಕುಮಾರನು) ನೆಲೆಸಿರುವೆನು. ಇದನ್ನು ಈ ರೀತಿ ಇರುವಂತೆ ಮಾಡಿದವರು ಯಾರು? ಪರಮಾತ್ಮನೇ ಹೊರತು ಬೇರೆ ಅಲ್ಲ. ಪ್ರಪಂಚದಲ್ಲಿ ಆತ್ಮನನ್ನು (ಪರಮಾತ್ಮ) ಬಿಟ್ಟು ಬೇರೆ ಇರುವುದೆಂದು ಯಾರು ಹೇಳುತ್ತಾರೆ? ಹಾಗೆ ಹೇಳುವವನು ಮೂರ್ಖನು ಮತ್ತು ಅವನ ಮಾತು ಶುದ್ಧ ಸುಳ್ಳು. ಏಕೆಂದರೆ ಆತ್ಮವನ್ನು (ಪರಮಾತ್ಮ) ಬಿಟ್ಟು ಬೇರೇನೂ ಇಲ್ಲವೆಂದು ಮುಖ್ಯವಾದ ಅಭಿಪ್ರಾಯ.
ಈ ಮಂತ್ರದಲ್ಲಿ ಬರುವ ಅನುದೇಯಿ ಪದಕ್ಕೆ ಐರೋಪ್ಯ ಪಂಡಿತರು ಅಂತ್ಯಸಂಸ್ಕಾರದಲ್ಲಿ ಮಾಡುವ ದಾನ ಎಂಬುದಾಗಿ ಅನುವಾದಿಸಿರುವರು. ಇದು ಅಸ್ಪಷ್ಟತೆಯಿಂದ ಕೂಡಿರುವುದು. ಈ ರೀತಿಯ ಅನುವಾದವು ಸೂಕ್ತದ ವಸ್ತುವು ಮೃತಶರೀರದ (ಕುಮಾರ) ಅಂತ್ಯಸಂಸ್ಕಾರ ಕುರಿತದ್ದು ಎಂಬ ಊಹೆಯ ಆಧಾರಿತವಾದದ್ದು.
ಕಪಾಲಿ ಶಾಸ್ತ್ರಿಗಳ ವಿವರಣೆಯ ಪ್ರಕಾರ ಅನುದೇಯಿ ಪದದ ನಿಖರವಾದ ಅರ್ಥ - "ಯುಕ್ತ ಕ್ರಮದಲ್ಲಿ ಕೊಡಲ್ಪಡಬೇಕಾದದ್ದು" (ಅನುಕ್ರಮೇಣ ದಾತವ್ಯಂ) ಎಂದಾಗುತ್ತದೆ. ಋಷಿಯು (ನಚಿಕೇತನು), ತನ್ನ ಊರ್ಧ್ವಗಮನದಲ್ಲಿ, ಸುವ್ಯವಸ್ಥಿತ ರೀತಿಯಲ್ಲಿ ತನ್ನನ್ನು ಶ್ರೇಷ್ಠತರ ವ್ಯಕ್ತಿಗೆ ಸಮರ್ಪಿಸಿಕೊಳ್ಳುತ್ತಾನೆ. ನಂತರ ಅವನು ಯುಕ್ತ ಸ್ಥಾನದಲ್ಲಿ ಪುನಃ ಸ್ಥಾಪಿಸಲ್ಪಡುತ್ತಾನೆ. ಭೂಮಿಯ ಸ್ತರದಿಂದ ಉನ್ನತ ಸ್ತರಕ್ಕೆ ಹೋಗುವಾಗ ಸ್ವಾಭಾವಿಕವಾಗಿ ಅವನ ಮುಂಭಾಗವು ಮೊದಲಿಗೆ ಪಾರ್ಥಿವ ಪ್ರಜ್ಞಾಸ್ತರಕ್ಕಿಂತ ಮೇಲೆದ್ದು ಬರುತ್ತದೆ, ಅನಂತರ ಮೇಲಿರುವ ವಿಶ್ವದ ನೆಲೆಗಟ್ಟು ಅವನೆದುರಿಗೆ ವಿಸ್ತಾರವಾಗಿ ಹರಡಿಕೊಂಡಿದ್ದು ಗೋಚರಿಸುವುದು. ಅನಂತರ ಅವನು ಪಿತೃವಿನತ್ತ ಚಲಿಸುವಾಗ ಅವನು ಚಲಿಸುವ ಮಾರ್ಗವು ಅವನ ಹಿಂಭಾಗದಲ್ಲಿ ಸ್ಪಷ್ಟವಾಗಿರುವುದು.
ಇದೇ ಅನುದೇಯಿ ಪದವು ಮುಂದಿನ ಮಂತ್ರದಲ್ಲೂ ಬರುತ್ತದೆ.
ಯಥಾಭವದನುದೇಯಿ ತತೋ ಆಗ್ರಮಜಾಯತ|
ಪುರಸ್ತಾದ್ಬುದ್ನ ಆತತಃ ಪಶ್ಚಾನ್ನಿರಯಣಂ ಕೃತಂ||6||
ಯಮನ ಪರವಾದ ಅರ್ಥ
ತಂದೆಯಾದ ವಾಜಾಶ್ರವಸ್ಸು ತನ್ನ ಮಗನಾದ ನಚಿಕೇತನಿಗೆ ಯಮನ ಮನೆಗೆ ಹೋಗು ಎಂದು ಹೇಳುವುದಕ್ಕೆ ಮೊದಲೇ ನಚಿಕೇತನು ಯಮನ ಮನೆಯಿಂದ ಮರಳಿ ಬರುವ ಉಪಾಯವು ಅವನ ಮನಸ್ಸಿನಲ್ಲಿ ಹೊಳೆಯಿತು. ಆದ್ದರಿಂದ ಯಮನ ಮನೆಗೆ ಹೋಗು ಎಂದು ಹೇಳುವುದಕ್ಕೆ ಮೊದಲೇ ತಂದೆಯು ಮಗನ ಪುನರಾಗಮನದ ಉಪಾಯವನ್ನು ನಿಶ್ಚಯಿಸಿದ್ದನು.
ತಂದೆಯು ಮಗನಾದ ನಚಿಕೇತನನ್ನು ಯಮನ ಮನೆಗೆ ಹೋಗು ಎಂದು ಹೇಳಿದನಷ್ಟೆ. ಆದರೆ ಹಾಗೆ ಹೇಳುವುದಕ್ಕೆ ಮೊದಲೇ ಅವನು ಅಲ್ಲಿಂದ ಹಿಂದಕ್ಕೆ ಹೇಗೆ ತನ್ನ ಬಳಿಗೆ ಬರಬೇಕೆಂಬ ವಿಷಯದಲ್ಲಿ ಉಪಾಯವನ್ನು ಯೋಚಿಸಿಯೇ ಹಾಗೆ ಹೇಳಿದನು. ಕೋಪದ ಭರದಲ್ಲಿ ಯಮನ ಮನೆಗೆ ಹೋಗು ಎಂದು ಹೇಳಿದರೂ ಅನಂತರ ಕೋಪವನ್ನು ತ್ಯಜಿಸಿ ಸಮಾಧಾನವಾದ ಮನಸ್ಸಿನಿಂದ ತನ್ನ ಪುತ್ರನು ಯಮನ ಮನೆಯಿಂದ ಹಿಂದಕ್ಕೆ ಬರಲು ತಕ್ಕ ಉಪಾಯವನ್ನು ಮಾಡಿದನು ಎಂಬ ಅಭಿಪ್ರಾಯ.
ಆದಿತ್ಯ ಪರವಾದ ಅರ್ಥವು
ಆತ್ಮವ್ಯತಿರಿಕ್ತವಾದ ವಸ್ತುವು ಈ ಪ್ರಪಂಚದಲ್ಲಿ ಇದೆ ಎಂಬುದಾಗಿ ಸಾಮಾನ್ಯರ ಮನಸ್ಸಿನಲ್ಲಿ ತೋರುವುದಷ್ಟೆ. ಈ ರೀತಿಯ ಮಿಥ್ಯಾಬುದ್ಧಿಯು ಮನದಲ್ಲಿ ಉಂಟಾಗುವುದಕ್ಕೆ ಮೊದಲೇ ಮನಸ್ತತ್ತ್ವವು (ಎಂದರೆ ಪ್ರಾಣಿಗಳ ಮನಸ್ಸು) ಸೃಷ್ಟಿಸಲ್ಪಟ್ಟಿತು. ಮನಸ್ಸು ಸೃಷ್ಟಿಸಲ್ಪಟ್ಟಮೇಲೆ ಮನಸ್ಸಿನ ವ್ಯಾಪಾರಗಳು ನಡೆಯುವವು. ಅನಂತರ ಮನಸ್ಸಿನ ವ್ಯಾಪಾರದ ಆಲೋಚನೆ ಎಂದರೆ ಆತ್ಮವ್ಯತಿರಿಕ್ತವಾದ ವಸ್ತುಗಳು ಇರುವವು ಎಂಬ ಮಿಥ್ಯಾ ಬುದ್ಧಿಯು ಉತ್ಪನ್ನವಾಯಿತು. ಸೃಷ್ಟಿಪೂರ್ವದಲ್ಲಿ ಬ್ರಹ್ಮವು ಅವ್ಯಕ್ತಾವಸ್ಥೆಯಲ್ಲಿದ್ದಾಗ ಈ ಜಗತ್ತು ಆ ಅವ್ಯಕ್ತಾವಸ್ಥೆಯಲ್ಲಿ ಕಾರಣರೂಪದಿಂದ ಇದ್ದವು. ಅನಂತರ ಅವ್ಯಕ್ತವು ವ್ಯಕ್ತಸ್ಥಿತಿಗೆ ಬಂದಾಗ ಜಗತ್ತಿನ ವಸ್ತುಗಳು ಕಾರಣಾವಸ್ಥೆಯಿಂದ .ಕಾರ್ಯಾವಸ್ಥೆಗೆ ಬಂದವು. ಇದೆಲ್ಲವೂ ಬ್ರಹ್ಮ ಸೃಷ್ಟಿ. ಉದಾಹರಣೆಗೆ ಮಡಕೆ ಮೊದಲಾದ ಮಣ್ಣಿನ ವಸ್ತುಗಳು ನಾನಾ ವಿಧದ ಆಕಾರಗಳಿಂದ ಕಾಣುತ್ತಿದ್ದರೂ ಅವುಗಳ ಮೂಲ ಕೇವಲ ಮಣ್ಣು ಮಾತ್ರ. ಹಾಗೇ ಜಗತ್ತಿನಲ್ಲಿ ಕಂಡುಬರುವ ವಸ್ತುಗಳೂ ನಾನಾಬಗೆಯದ್ದಾಗಿದ್ದರೂ ಅವುಗಳ ಮೂಲವು ಬ್ರಹ್ಮನೇ. ಆದ್ದರಿಂದ ಅದಿತ್ಯನ ಅನುಗ್ರಹದಿಂದ ಬ್ರಹ್ಮಭಾವವನ್ನು ಪಡೆದಿರುವ ನನಗೆ ನನಗಿಂತ ಬೇರೆಯಾದ ವಸ್ತುವು ಪ್ರಪಂಚದಲ್ಲಿ ಇಲ್ಲವೆಂಬ ಪರಿಜ್ಞಾನವು ಉಂಟಾಗಿರುವುದೆಂದು ಋಷಿಯು ವರ್ಣಿಸಿರುವನು.
ಇದಂ ಯಮಸ್ಯ ಸಾಧನಂ ದೇವಮಾನಂ ಯದುಚ್ಯತೇ|
ಇಯಮಸ್ಯ ಧಮ್ಯತೇ ನಾಳೀರಯಂ ಗೀರ್ಭಿಃ ಪರಿಷ್ಕೃತಃ||7||
ಯಮನ ಪರವಾದ ಅರ್ಥ
ದೇವತೆಗಳಿಂದ ನಿರ್ಮಿತವಾದ ಈ ಯಮಲೋಕವೇ ಯಮನ ನಿವಾಸಸ್ಥಾನವೆಂದು ಪ್ರಸಿದ್ಧವಾಗಿದೆ. ಈ ಯಮನ ಪ್ರೀತ್ಯರ್ಥವಾಗಿ ವೇನುವೆಂಬ ವಾದ್ಯವಿಶೇಷವನ್ನು ಊದುತ್ತಾರೆ ಮತ್ತು ಈ ಯಮನು ಸ್ತುತಿರೂಪವಾದ ವಾಕ್ಯಗಳಿಂದ ಪ್ರಶಂಸಿಸಲ್ಪಡುತ್ತಾನೆ.
ಆದಿತ್ಯ ಪರವಾದ ಅರ್ಥ
ದೇವತೆಗಳಿಂದ ಅಥವಾ ಪ್ರಕಾಶಮಾನವಾದ ರಶ್ಮಿಗಳಿಂದ ಯಾವ ಸ್ಥಾನವು ನಿರ್ಮಿತವಾಗಿದೆಯೋ ಅದು ಆದಿತ್ಯಮಂಡಲವೆಂದು ಪ್ರಸಿದ್ಧವಾಗಿದೆ. ಈ ಆದಿತ್ಯಮಂಡಲವೇ ಅದಿತ್ಯನ ಸ್ಥಾನ. ಈ ಅದಿತ್ಯನ ಪ್ರೀತ್ಯರ್ಥವಾಗಿ ಸ್ತುತಿರೂಪವಾದ ವಾಕ್ಯಗಳನ್ನು ಪಠಿಸುತ್ತಾ ಸ್ತೋತ್ರಾದಿಗಳಿಂದ ಜನರು ಆದಿತ್ಯನನ್ನು ಸ್ತುತಿಸುತ್ತಾರೆ.
ಈ ಸೂಕ್ತದಲ್ಲಿನ ಮಂತ್ರಗಳು ಅರ್ಥಗರ್ಭಿತವಾಗಿವೆ. ಅದರಂತೆ ಋಷಿಕುಮಾರನು ಯಮಾಲಯದೆಡೆಗೆ ಹೋಗುವುದು ತನ್ನ ಮನಸ್ಸಿನಲ್ಲಿ ರಚಿತವಾದ ರಥದಲ್ಲಿ. ಈ ರಥಕ್ಕೆ ಚಕ್ರಗಳಿಲ್ಲ, ಒಂದೇ ಸ್ತಂಭ. ಎಲ್ಲೆಡೆಗೂ ಚಲಿಸುವಂಥದ್ದು, ಹಾಗೂ ಅವನ ಉರ್ಧ್ವಗತಿಯ ಪ್ರತಿಯೊಂದು ಹಂತದಲ್ಲೂ ಚಲಿಸುವಂಥದ್ದು, ಅವನ ಪ್ರಯಾಣದ ಹಿಂಭಾಗದಲ್ಲಿ ಹಾದಿಯು ಸೃಷ್ಟಿಸಲ್ಪಡುವುದು. ದಾರಿಯು ಮುಕ್ತವಾಗುತ್ತಾ ಹೋಗುವುದು. ಅದರಿಂದಾಗಿ ಯಮಾಲಯದಿಂದ ಮರಳಿ ಪಾರ್ಥಿವ ಜೀವನಕ್ಕೆ ಬರುವುದು ಸುಲಭವಾಗುತ್ತದೆ. ಅಲ್ಲದೆ, ಈ ಜೀವನ ಮತ್ತು ಅದರಾಚೆಗೆ ಎನಿರುವುದೋ ಅದರೊಂದಿಗಿನ ಸಂವಹನವೂ ಸ್ವಾಭಾವಿಕವೂ ನಿಶ್ಚಿತವೂ ಆಗುವುದು. ಈ ಸೂಕ್ತದ ಒಗಟಿನಂತಿರುವ ಸ್ವರೂಪ, ಕುತೂಹಲದ ಮುಸುಕನ್ನೆಳೆದ ಸಂಭಾಷಣೆ, ಯಮನು ಬಳಸಿದ ಒಗಟಿನಂತಹ ಶಬ್ದಗಳು, ಆ ಋಷಿಯು ಸಿದ್ಧಿಸಿಕೊಂಡ ಆಧ್ಯಾತ್ಮಿಕ ಸ್ಥಿತಿಯ ರಹಸ್ಯಮಯ ಸ್ವರೂಪವನ್ನು ತೋರುತ್ತದೆ.
ಇಲ್ಲಿಗೆ ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತವು ಮುಗಿದಿದೆ.
ಮೂಲ : ಋಗ್ವೇದ ಸಂಹಿತ - ಭಾಗ - 30
ಸಂಗ್ರಹ : ಗುರುಪ್ರಸಾದ್ ಹಾಲ್ಕುರಿಕೆ
No comments:
Post a Comment