Sunday, March 29, 2020

ವೇದಗಳ ಪ್ರಧಾನ ಭಾಗಗಳ ಮೇಲ್ನೋಟ - ಉಪನಿಷತ್ತುಗಳು

ವೇದಗಳ ಪ್ರಧಾನ ಭಾಗಗಳ ಮೇಲ್ನೋಟ - ಉಪನಿಷತ್ತುಗಳು


ವೇದಸಾಹಿತ್ಯಗಳ ಸರಣಿ ಗ್ರಂಥಗಳಲ್ಲಿ ಕಟ್ಟಕಡೆಯ ಭಾಗವೇ ಉಪನಿಷತ್ತುಗಳು. ಉಪನಿಷತ್ತುಗಳನ್ನು ವೇದಜ್ಞಾನಗಳ ಅಂತಿಮ ಫಲ (ವೇದಾಂತ - ವೇದಸ್ಯ ಅಂತಃ) ಎಂಬುದಾಗಿ ಪರಿಗಣಿಸಲಾಗಿದೆ. ಉಪನಿಷತ್ತುಗಳಲ್ಲಿರುವ ಆಲೋಚನೆಗಳು ಅವುಗಳ ಅಂತರಾರ್ಥಗಳು, ಭಾಷೆ ಮತ್ತು ಶಬ್ದಸಂಪತ್ತುಗಳ ಮೂಲಕ ಅತ್ಯುನ್ನತ ಶಿಖರವನ್ನು ತಲುಪಿವೆ.

ಬೃಹದಾರಣ್ಯಕೋಪನಿಷತ್ತಿನ 4-22ನೇ ಮಂತ್ರವು ಪರೋಕ್ಷಪ್ರಿಯಾ ಇವ ಹಿ ದೇವಾಃ - ದೇವತೆಗಳು/ಋಷಿಗಳು ಪರೋಕ್ಷ ಮಾತುಗಳನ್ನು ಇಷ್ಟಪಡುವರು. ಅವರು ಜ್ಞಾನವನ್ನು ಬಹಿರಂಗಪಡಿಸದೆ ಅದನ್ನು ಮುಚ್ಚಿಡುವುದನ್ನು ಬಯಸುವರು. ಹೀಗೆ ಮಾಡುವುದರಿಂದ ಸಾಧಕನು ಮಂತ್ರಗಳ ಅಂತರಾರ್ಥಗಳು ಅರಿಯಲು ಆಳವಾಗಿ ಅಧ್ಯಯನ ಮಾಡುವನು. ಇದೇ ರೀತಿಯ ಅರ್ಥವನ್ನು ತಿಳಿಯಪಡಿಸುವ ಮತ್ತಷ್ಟು ಮಂತ್ರಗಳು ಐತರೇಯ ಉಪನಿಷತ್ತಿನಲ್ಲಿ ಕಂಡುಬರುವುದು.

ಋಗ್ವೇದದ ಮಂತ್ರ - 5.62.1 ಮತ್ತು ಯಜುರ್ವೇದದ 40.17ರಲ್ಲಿನ ಮಂತ್ರಗಳೂ ಈ ರೀತಿಯ ಅಭಿಪ್ರಾಯಗಳನ್ನು ಸಮರ್ಥಿಸುತ್ತವೆ:
ಋತೇನ ಋತಮಪಿಹಿತಂ ಧೃವಂ ವಾಂ ಸೂರ್ಯಸ್ಯ ಯತ್ರ ವಿಮುಚಂತ್ಯಶ್ವಾನ್|
ದಶ ಜ್ನತಾ ಸಹ ತಸ್ಯುಸ್ತದೇಕಂ ದೇವಾನಾಂ ಶ್ರೇಷ್ಠ ವಪುಶಾಮಪಶ್ಯಮ್ - ಋ.5.62.1
ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ|
ಯೋsಸಾವಾದಿತ್ಯ ಪುರುಷಃ ಸೋsಸಾವಾಹಂ| 
ಓಂ ಖಂ ಬ್ರಹ್ಮ - (ಈಶಾವಾಸ್ಯೋಪನಿಷತ್ - 15 - ಯಜುರ್ವೇದ -40.17)


"ಸತ್ಯವನ್ನು ಬಂಗಾರದ ಕೊಳಗದಲ್ಲಿ (ಮುಚ್ಚಳ) ಬಚ್ಚಿಡಲಾಗಿದೆ". ಇದೇ ಕಲ್ಪನೆಯು
ಈಶಾವಾಸ್ಯೋಪನಿಷತ್ - 15ರಲ್ಲಿ ಪ್ರತಿಧ್ವನಿಸಿದೆ. ವೇದಮಂತ್ರಗಳ ಅರ್ಥವನ್ನು ಮರೆಮಾಡಿರುವುದರ ಬಗೆಗೆ ಉಪನಿಷತ್ ಮತ್ತು ಆರಣ್ಯಕಗಳಲ್ಲಿ ಅನೇಕ ಮಂತ್ರಗಳು ಮತ್ತು ಚರ್ಚೆಗಳು ಕಂಡುಬರುವುದು.

ಕಠೋಪನಿಷತ್ತಿನ 1.23ರಲ್ಲಿ :
ನಾಯಮಾತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ|
ಯಮೇವೈಷ ವೃಣುತೆ ತೇನ ಲಭ್ಯಸ್ತಸೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ||


ಚರ್ಚೆಯ ಮೂಲಕವಾಗಲಿ ಅಥವಾ ಮಹಾನ್ ಬುದ್ಧಿಶಕ್ತಿಯನ್ನು ಪಡೆಯುವುದರಿಂದಾಗಲಿ ಹಾಗೂ ಉಪನ್ಯಾಸವನ್ನು ಕೇಳುವುದರಿಂದಾಗಲಿ ಆಯ್ಕೆಯಾದ ವ್ಯಕ್ತಿಯೊಬ್ಬನು ಬ್ರಹ್ಮನ ಬಗೆಗೆ ಮಹಾನ್ ಜ್ಞಾನವನ್ನು ಹೊಂದುವುದಕ್ಕಾಗುವುದಿಲ್ಲ. ಆಯ್ಕೆಯಾದ ವ್ಯಕ್ತಿ ಎಂಬ ಪದವು ಈ ಮಂತ್ರದಲ್ಲಿ ತಪಸ್ಸಿನ ಮೂಲಕ ಅರ್ಥಗರ್ಭಿತ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಂಡ ಋಷಿಗಳನ್ನು ಸೂಚಿಸುವುದು. ಇದೇ ರೀತಿಯ ಹೇಳಿಕೆಗಳನ್ನು ಋಗ್ವೇದ ಮಂತ್ರಗಳಲ್ಲೂ ಕಾಣಬಹುದು:
ನ ನೂನಮಸ್ತಿ ನೋ ಶ್ವಃ ಕಸ್ತದ್ವೇದ ಯದದ್ಭುತಮ್|
ಅನ್ಯಸ್ಯ ಚಿಂತಮಭಿ ಸಂಚರೇಣ್ಯಮುಠಾಧೀತಂ ವಿ ನಷ್ಯತಿ|| - ಋಗ್ವೇದ - 1-170-1
ಋತಂ ಚಿಕಿತ್ವ ಋತಮಿಚ್ಚಿಕಿದ್ವರ್ಯುತಸ್ಯ ಧಾರಾ ಅನು ತೃನ್ಧಿ ಪೂರ್ವಾಃ|
ನಾಹಂ ಯಾತು ಸಹಸಾ ನ ದ್ವಯೇನ ಋತಂ ಸಪಾಮ್ಯಋಷಸ್ಯ ವೃಷ್ಣಃ|| ಋಗ್ವೇದ - 5-12-2
ನಕಿಷ್ಠಂ ಕರ್ಮಣಾ ನಶ ಧ್ಯಶ್ವಕಾರ ಸದಾಕೃಧಮ್|
ಇಂದ್ರಂ ನ ಯಜ್ಞೈ ರ್ವಿಶ್ವಮೂರ್ತಮುಂಬಸದೃಷ್ಠಂ ಘ್ರುಷ್ಣವೊಜಸಮ್|| ಋಗ್ವೇದ - 8-70-3


ವೇದಮಂತ್ರಗಳ ಉದ್ದೇಶ ಮತ್ತು ಬಳಕೆ

ವೇದಮಂತ್ರಗಳ ಉದ್ದೇಶ ಮತ್ತು ಬಳಕೆಗೆ ಸಂಬಂಧಿಸಿದಂತೆ ಬ್ರಾಹ್ಮಣ ಗ್ರಂಥಗಳಲ್ಲಿ ವಿವರಗಳನ್ನು ನೋಡಬಹುದು.

ಹೇತುನಿರ್ವಚನಂ ನಿಂದಾ ಪ್ರಶಂಸಾ ಸಂಶಯೋ ವಿಧಿಃ|
ಪರಕ್ರಿಯಾ ಪುರಾಕಲ್ಪೋ ವ್ಯವಧಾರಣಕಲ್ಪನಾ|
ಉಪಮಾನಂ ದೃಶ್ಯತೇ ತು ವಿಧಯೋ ಬ್ರಾಹ್ಮಣಸ್ಯ ತು|| ಶಾಬರಭಾಷ್ಯೇ - 2.1.8

ಈ ಗ್ರಂಥಗಳಲ್ಲಿ ಧಾರ್ಮಿಕ ಸಂಸ್ಕಾರಗಳಲ್ಲಿ ಅನುಸರಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ವಿವರವಾದ ಮಾರ್ಗದರ್ಶನವಿರುವುದು. ಸಮಸ್ಯೆಗೆ ಪರಿಹಾರ ಅಥವಾ ನಿರ್ದಿಷ್ಟ ಪ್ರಯೋಜನಗಳನ್ನು ಪಡೆದುಕೊಳ್ಳಲು ವಿವಿಧ ದೇವತೆಗಳನ್ನು ಆಹ್ವಾನಿಸಲು ನಿರ್ದಿಷ್ಟವಾದ ಮಂತ್ರಗಳು ಅಥವಾ ಮಂತ್ರಗಳ ಸಮೂಹಗಳನ್ನು ಯಾವಾಗ, ಎಲ್ಲಿ ಬಳಸಬೇಕೆಂಬುದರ ಬಗ್ಗೆ ಕಡ್ಡಾಯವಾದ ಸೂಚನೆಗಳಬಗ್ಗೆ ಈ ಗ್ರಂಥಗಳಲ್ಲಿ ವಿವರಿಸಲಾಗಿದೆ. ಉದಾಹರಣೆಗೆ - ರೋಗಿಯೊಬ್ಬನು ತೀವ್ರವಾದ ಖಾಯಿಲೆಯಿಂದ ಬಹುಕಾಲದಿಂದ ಬಳಲುತ್ತಿದ್ದರೆ, ಅದರಿಂದ ಪರಿಹಾರವನ್ನು ಪಡೆದುಕೊಳ್ಳಲು ಮಿತ್ರ ಹಾಗೂ ವರುಣ ದೇವತೆಗಳನ್ನು ಆಹ್ವಾನಿಸಲು ಋಗ್ವೇದ - 3-62-16 ಮಂತ್ರವನ್ನು ಉಪಯೋಗಿಸಲು ಸೂಚನೆಗಳಿರುವುದು.

ಆ ನೋ ಮಿತ್ರಾವರುಣಾ ಘ್ರುತೈರ್ಗವ್ಯೂತಿಮುಕ್ಷತಮ್|
ಮಧ್ವಾ ರಜಾಂಸಿ ಸುಕೃತ್ || ಋಗ್ವೇದ - 3-62-16

ಇಲ್ಲಿ ಮತ್ತೊಂದು ವಿಷಯವನ್ನು ಉಲ್ಲೇಖಿಸಿರುವುದೇನೆಂದರೆ ಮಿತ್ರ ಮತ್ತು ವರುಣ ದೇವತೆಗಳು ಪ್ರಾಣ ಮತ್ತು ಅಪಾನಗಳ ಅಭಿಮಾನಿ ದೇವತೆಗಳಾದ್ದರಿಂದ ಹಾಗೂ ಅವುಗಳು ರೋಗಿಯು ಅನುಭವಿಸುತ್ತಿರುವ ದೀರ್ಘಕಾಲದ ಖಾಯಿಲೆಗೆ ಸಂಬಂಧಿಸಿರುವುದರಿಂದ ಮೇಲೆ ವಿವರಿಸಿರುವ ಮಂತ್ರದ ಮೂಲಕ ಈ ದೇವತೆಗಳನ್ನು ಆಹ್ವಾನಿಸಿದಾಗ ರೋಗಿಗೆ ಉಪಶಮನವುಂಟಾಗುವುದು.


ಪ್ರೇರಣೆ - ಡಾ.ಜಯಂತಿ ಮನೋಹರ ಅವರ ಕೃತಿ - Symbolism of Rig-Veda.





No comments:

Post a Comment

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ...