ವೇದಾರ್ಥಗ್ರಹಿಕೆಯು ಅಗತ್ಯವೆ?
ವೇದಗಳನ್ನು ಅರ್ಥಾನುವಾದಸಹಿತವಾಗಿ ವ್ಯಾಸಂಗಮಾಡುವುದು ಅತಿ ಅವಶ್ಯಕವಾದದ್ದು. ವೇದವನ್ನು ಅರ್ಥವತ್ತಾಗಿ ಅಭ್ಯಾಸಮಾಡುವುದು ಎಲ್ಲರ ಪ್ರಥಮ ಕರ್ತವ್ಯ. ಎಷ್ಟೇ ವಿದ್ಯಾವಂತನಾದರೂ, ವೇದವನ್ನು ಸ್ವಲ್ಪ ಮಟ್ಟಿಗಾದರೂ ಅರಿತಿಲ್ಲದಿದ್ದರೆ ಅವನ ಪಾಂಡಿತ್ಯವು ಪೂರ್ಣವಾಗಿರುವುದಿಲ್ಲ. ಈಗಿನ ನಾಗರೀಕ ಜನಾಂಗಗಳ ನಡೆನುಡಿಗಳಿಗೂ, ಆಚಾರ ವ್ಯವಹಾರ, ಸಂಗೀತಸಾಹಿತ್ಯಾದಿ ವಿದ್ಯೆಗಳಿಗೂ ವೇದವೇ ತಳಹದಿ.
ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನಗ್ರಂಥವು ಋಗ್ವೇದವಾಗಿದೆ. ಈ ಸ್ಥಾನವು ಮತ್ತಾವ ಗ್ರಂಥಕ್ಕೂ ದೊರೆಯಲಾರದು. ಋಗ್ವೇದಕ್ಕೆ ಈ ಸ್ಥಾನವು ದೊರೆಯಲು ಮತ್ತೊಂದು ಕಾರಣವೆಂದರೆ - ಸಾಧಾರಣವಾಗಿ ಕೆಲವು ಶತಮಾನಗಳ ಹಿಂದೆ ಬರೆದಿರುವ ಒಂದು ಗ್ರಂಥವು ಕ್ರಮಕ್ರಮವಾಗಿ ಪಾಠಾಂತರ ಭೇದಗಳಿಂದ ವ್ಯತ್ಯಾಸವನ್ನು ಹೊಂದುತ್ತಾ ಕಾಲಾನಂತರ ಮೂಲಗ್ರಂಥದಿಂದ ವಿಷಯ, ಸಾಹಿತ್ಯದಲ್ಲಿಯೂ ಬೇರೆಯಾಗಿರುವಂತೆ ಕಾಣುವುದು. ಆದರೆ ವೇದದಲ್ಲಿ ಮಾತ್ರ ಈ ರೀತಿ ಇರುವುದಿಲ್ಲ. ಭಾಷೆಗೆ ಲಿಪಿ ಇಲ್ಲದ ಕಾಲದಲ್ಲಿ ವೇದವು ತಂದೆಯಿಂದ ಮಗನಿಗೂ, ಗುರುವಿನಿಂದ ಶಿಷ್ಯನಿಗೂ ಬಾಯಿಪಾಠವಾಗಿ ಉಪದೇಶಿಸಲ್ಪಟ್ಟು ಪರಂಪರೆಯಾಗಿ ನಡೆದುಕೊಂಡು ಬಂದಿರುವುದು. ಈ ರೀತಿ ಒಬ್ಬರಿಂದೊಬ್ಬರಿಗೆ ಹೇಳಿಕೊಡುವ ಕಾಲದಲ್ಲಿಯೂ, ಅಭ್ಯಾಸಮಾಡುವ ಕಾಲದಲ್ಲಿಯೂ ಈ ವೇದಪಾಠವು ವ್ಯತ್ಯಾಸವಾಗದಂತೆ ವಿಶೇಷ ಶ್ರಮದಿಂದ ಉಚ್ಚಾರಣೆ ಮೊದಲಾದವುಗಳನ್ನು ಸ್ವರಸಹಿತ ತಪ್ಪಿಲ್ಲದಂತೆ ಪಠನ ಮಾಡುವುದು ಆ ಕಾಲದಲ್ಲೂ ಹಾಗೂ ಈ ಕಾಲದಲ್ಲೂ ಕಟ್ಟುನಿಟ್ಟಾಗಿ ಅನುಸರಿಸುತ್ತಿರುವುದರಿಂದ ವೇದಕಾಲದಲ್ಲಿ ಯಾವರೀತಿ ಇದ್ದಿತೋ ಈಗಲೂ ಅದೇ ರೀತಿಯಲ್ಲಿರುವುದು. ಈ ವೇದಕ್ಕೆ ಒಂದು ಅಕ್ಷರವನ್ನಾಗಲಿ, ಕಡೆಗೆ ಒಂದು ಒತ್ತು ಅಥವಾ ಸ್ವರವನ್ನಾಗಲಿ, ಸೇರಿಸುವುದು, ತೆಗೆದುಹಾಕುವುದು ಅಥವಾ ವ್ಯತ್ಯಾಸಮಾಡುವುದು ಸಾಧ್ಯವಿಲ್ಲ. ಆಧುನಿಕ ಸಂಸ್ಕೃತದಲ್ಲಿ ಸಂದರ್ಭ ಅಥವಾ ಅರ್ಥಾನುಸಾರ ಪರಿಚ್ಛೇದಮಾಡಿ ನಾನಾ ಅರ್ಥಗಳನ್ನು ಕಲ್ಪಿಸುವುದು ಹೊಸದೇನಲ್ಲ. ಆದರೆ ವೇದಗಳಲ್ಲಿ ಋಷಿಗಳ ಅಭಿಪ್ರಾಯಕ್ಕೆ ಭಂಗಬರಬಹುದೆಂಬ ಶಂಕೆಯಿಂದ ವೇದಋಷಿಗಳು ಅವುಗಳ ಪದಪಾಠ ಹಾಗೂ ಸ್ವರವನ್ನು ನಿರ್ಧರಿಸಿರುವರು. ಹೀಗಾಗಿ ಯಾರೂ ಮನಸ್ಸುಬಂದಂತೆ ಅಥವಾ ತಮಗೆ ಬೇಕಾದ ಅರ್ಥಕ್ಕೆ ಸರಿಹೊಂದುವಂತೆ ಪರಿಚ್ಛೇದನ ಮಾಡುವಹಾಗಿಲ್ಲ. ಸಂಹಿತೆಯಂತೆ ಪದವನ್ನೂ ಸಹ ಪೂರ್ವನಿರ್ಧರಿಸಿ ವ್ಯತ್ಯಾಸಕ್ಕೆ ಅವಕಾಶವಿಲ್ಲದಂತೆ ಮಾಡಿರುವರು.
ಸಂಸ್ಕೃತ ಭಾಷಾಭ್ಯಾಸವೂ, ವೇದವಿದ್ಯಾ ವ್ಯಾಸಂಗವೂ ಪ್ರಾರಂಭದಲ್ಲಿ ಕಠಿನವಾಗಿರುವುದು. ಹೀಗಾಗಿ ನಮ್ಮಲ್ಲಿ ವೇದವನ್ನು ಅಭ್ಯಾಸಮಾಡಿದರೂ ಅದನ್ನು ಸುಮ್ಮನೆ ತಪ್ಪಿಲ್ಲದಂತೆ ಬಾಯಿಪಾಠಮಾತ್ರ ಮಾಡುವರು. ಅದರ ಅರ್ಥವು ವ್ಯಾಸಂಗಕ್ಕೆ ಕಷ್ಟತರವಾದುದೆಂದು ಅನೇಕರು ಅದರ ಹವ್ಯಾಸಕ್ಕೇ ಹೋಗುವುದಿಲ್ಲ. ಸಂಸ್ಕೃತದಲ್ಲಿ ದೊಡ್ಡ ಪಂಡಿತರಾದವರಿಗೂ ವೇದಭಾಷೆಯು ಸುಲಭವಾಗಿ ತಿಳಿಯುವುದಿಲ್ಲ. ಪಂಡಿತರಿಗೆ ಈ ರೀತಿ ಇರುವಾಗ ಸಾಧಾರಣ ಜನರು ಇದರ ಅರ್ಥ ವಿಮರ್ಶೆಯಲ್ಲಿ ಹೇಗೆ ಮನಸ್ಸುಮಾಡುವರು? ವೇದದ ಅರ್ಥವನ್ನು ತಿಳಿಯದೆ ಸುಮ್ಮನೆ ಬಾಯಿಪಾಠ ಮಾಡುವುದು ನಿಷ್ಫಲವೆಂದು ಯಾಸ್ಕರು ತಮ್ಮ ನಿರುಕ್ತದಲ್ಲಿ ಹೇಳಿರುವರು :-
ಸ್ಥಾಣುರಯಂ ಭಾರಹಾರಃ ಕಿಲಾಭೂದಧೀತ್ಯ ವೇದಂ ನ ವಿಜಾನಾತಿ ಯೋsರ್ಥಂ|
ಯೋsರ್ಥಜ್ಞ ಇತ್ಸಕಲಂ ಭದ್ರಮಶ್ನು ತೇ ನಾಕಮೇತಿ ಜ್ಞಾನವಿಧೂತಪಾಪ್ಮಾ|
ಯಾದ್ಗೃಹೀತಮವಿಜ್ಞಾತಂ ನಿಗದೇನೈವ ಶಬ್ದ್ಯತೇ|
ಅನಗ್ನಾವಿವ ಶುಷ್ಕೇಂಧೋ ನ ತಜ್ವಲತಿ ಕರ್ಹಿಚಿತ್|
ಉತತ್ವಃ ಪಶ್ಯನ್ನ ದದರ್ಶ ವಾಚಮುತ ತ್ವಃ ಶೃಣ್ವನ್ನ ಶೃಣೋತ್ಯೇನಾಂ|
ಉತೋ ತ್ವಸ್ಮೈ ತ್ವನ್ನಂ ವಿಸಸ್ರೇ ಜಾಯೇವ ಪತ್ಯ ಉಶಶೀ ಸುವಾಸಾಃ|
ಉತ ತ್ವಂ ಸಖ್ಯೇ ಸ್ಥಿರಪೀತಮಾಹುರ್ನೈನಂ ಹಿನ್ವಂತ್ಯಪಿ ವಾಜಿನೇಷು|
ಅಧೇನ್ವಾಚರತಿ ಮಾಯಯೈಷ ವಾಚಂ ಶುಶ್ರುವಾ ಅಫಲಾಮಪುಷ್ಪಾಂ||
ಅಂದರೆ - ವೇದಾರ್ಥವನ್ನು ತಿಳಿಯದೆ ಸುಮ್ಮನೆ ವೇದಾಧ್ಯಯನವನ್ನು ಮಾಡಿದವನು ಮೋಟುಮರದಂತೆ ಸುಮ್ಮನೆ ಭಾರವನ್ನು ಹೊತ್ತಿರುವನೇ ಹೊರತು ಅದರಿಂದ ಅವನಿಗೆ ಯಾವ ಪ್ರಯೋಜನವೂ ಇಲ್ಲ. ಅರ್ಥವನ್ನು ತಿಳಿಯದೆ ಸುಮ್ಮನೆ ಮಂತ್ರೋಚ್ಚಾರಣೆ ಮಾಡುವುದರಿಂದ, ಆರಿಹೋದ ಬೆಂಕಿಯಲ್ಲಿ ಎಷ್ಟೇ ಒಣಗಿದ ಸೌದೆಯನ್ನು ಹಾಕಿದರೂ ಹೊತ್ತಿ ಉರಿಯದಿರುವಂತೆ, ಮಂತ್ರೋಚ್ಚಾರಣೆಯು ವ್ಯರ್ಥವಾಗುವುದು.
ವೇದಾರ್ಥವಿಮರ್ಶೆ ಮಾಡುವುದರಲ್ಲಿ ಮತ್ತೊಂದು ತೊಡಕಿರುವುದು. ಅದಕ್ಕೆ ಸಂಸ್ಕೃತ ಭಾಷಾಜ್ಞಾನದೊಂದಿಗೆ ಮಿಮಾಂಸಾ, ವ್ಯಾಕರಣ, ಜ್ಯೋತಿಷ, ವೇದಾಂತ ಇವುಗಳ ಸಹಾಯವೂ ಬೇಕು. ವೇದಮಂತ್ರಗಳ ಛಂದಸ್ಸು ರೂಢಿಯಲ್ಲಿರುವ ಶ್ಲೋಕ, ವೃತ್ತ ಮೊದಲಾದವುಗಳಂತೆ ಇರುವುದಿಲ್ಲ.
ಪ್ರೇರಣೆ : ಡಾ. ಜಯಂತಿ ಮನೋಹರ ಅವರ Symbolism of Rigveda
……. ಮುಂದುವರೆಯುವುದು
No comments:
Post a Comment