ಕಲ್ಪಸೂತ್ರಗಳು
ಕಲ್ಪಸೂತ್ರಗಳು ಮಂತ್ರೋಚ್ಚಾರಣೆ ಹಾಗೂ ಯಜ್ಞಾದಿಕರ್ಮಗಳಲ್ಲಿ ಉಪಯುಕ್ತವಾದ ವಿಷಯಗಳನ್ನು ವಿವರಿಸುವುದಕ್ಕಾಗಿ ರಚಿಸಿರುವ ನಿಯಮ ಮತ್ತು ವಿಧಿನಿಷೇಧಗಳನ್ನು ಬೋಧಿಸುವ ಗ್ರಂಥಗಳು ಎನ್ನುವರು.
ಕಲ್ಪಸೂತ್ರಗಳಿಂದ ವೇದಾಧ್ಯಯನ ಮಾಡುವವರಲ್ಲಿ ಒಂದು ಹೊಸ ಯುಗವೇ ಆರಂಭವಾಗಿದೆ ಎಂಬ ಭಾವನೆಯುಂಟಾಗಿ, ವೇದಕ್ಕೆ ಪ್ರಾಮುಖ್ಯತೆ ಕಡಿಮೆಯಾಗಿ ಕಲ್ಪಸೂತ್ರವೇ ಮುಖ್ಯ ಆಧಾರವಾಗತೊಡಗಿತು ಎಂಬ ಅಪವಾದವಿದೆ.
ಕಲ್ಪಸೂತ್ರಗಳನ್ನು ದೈನಂದಿನ ಸಂಧ್ಯಾವಂದನೆಗಳಲ್ಲಿ ಬಳಸುವರೇ? ಬಳಸಿದಲ್ಲಿ ಹೇಗೆ ಬಳಸುವರು? ಅದರ ಬಳಕೆಯು ಇತ್ತೀಚೆಗೆ ಕಡಿಮೆಯಾಗುತ್ತಿದೆಯೇ?
ಕಲ್ಪಸೂತ್ರಗಳು
ಕಲ್ಪಸೂತ್ರಗಳು ಮಂತ್ರೋಚ್ಚಾರಣೆ ಹಾಗೂ ಯಜ್ಞಾದಿಕರ್ಮಗಳಲ್ಲಿ ಉಪಯುಕ್ತ ವಿಷಯಗಳನ್ನು ವಿವರಿಸುವುದು ಹಾಗೂ ನಿಯಮ ಮತ್ತು ನಿಷೇಧ ಇತ್ಯಾದಿಗಳನ್ನು ಬೋಧಿಸುವುದು. ಇವುಗಳಿಗೆ ಅದನ್ನು ರಚಿಸಿದ ಋಷಿಗಳ ಹೆಸರುಗಳಿರುವುದು.
ಅಶ್ವಲಾಯನರು ರಚಿಸಿದ ಸೂತ್ರಕ್ಕೆ ಅಶ್ವಲಾಯನಶ್ರೌತಸೂತ್ರ ಎನ್ನುವರು. ಇದರಲ್ಲಿ ಶ್ರೌತಸೂತ್ರ, ಗೃಹ್ಯಸೂತ್ರ, ಧರ್ಮಸೂತ್ರ, ಶುಲ್ವಸೂತ್ರ ಎಂಬ 4 ಭಾಗಗಳಿವೆ.
ಈ ನಾಲ್ಕು ಸೂತ್ರಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ :
ಶ್ರೌತಸೂತ್ರ - ಇದರಲ್ಲಿ ಯಜ್ಞ ಯಾಗಾದಿಗಳನ್ನು ಮಾಡುವ ಕ್ರಮ ಹಾಗೂ ಅವುಗಳಲ್ಲಿ ಉಪಯೋಗಿಸಬೇಕಾದ ಮಂತ್ರಗಳ ವಿವರಣೆ ಇರುವುದು.
ಗೃಹ್ಯಸೂತ್ರ - ಇದರಲ್ಲಿ ದ್ವಿಜರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಅನುಸರಿಸಬೇಕಾದ ಧರ್ಮನಿಯಮಗಳ ಬಗ್ಗೆ ವಿವರಣೆ ಇರುವುದು.
ಧರ್ಮಸೂತ್ರದಲ್ಲಿ ಜನರು ಆಚರಿಸಬೇಕಾದ ಧರ್ಮನಿಯಮಗಳ ಬಗ್ಗೆ ವಿವರಣೆ ಇರುವುದು.
ಶುಲ್ವಸೂತ್ರ - ಯಜ್ಞದಲ್ಲಿ ಉಪಯುಕ್ತವಾದ - ಅಗ್ನಿಕುಂಡ, ವೇದಿಕೆ, ಯಜ್ಞಸಾಮಗ್ರಿಗಳು ಇತ್ಯಾದಿಗಳನ್ನು ರಚಿಸುವ ಕ್ರಮ, ಪ್ರಮಾಣ ಮುಂತಾದ ವಿಶಯಗಳನ್ನು ವಿವರಿಸಲಾಗಿದೆ.
ಪ್ರತಿಯೊಂದು ವೇದಕ್ಕೂ ಈ ನಾಲ್ಕು ಸೂತ್ರಗಳು ಇದ್ದಿರಬಹುದು, ಆದರೆ, ಈಗ ಕೆಲವು ಮಾತ್ರ ದೊರೆಯುವುದು. ಈ ಸೂತ್ರಗಳು ವೇದಾರ್ಥವನ್ನು ಅರಿತುಕೊಳ್ಳಲು ಸಹಕಾರಿ.
ಈ ಸೂತ್ರಗಳ ಆಧಾರವೇ ಬ್ರಾಹ್ಮಣ. ಸಾಯಣಾಚಾರ್ಯರ ಪ್ರಕಾರ:
ಬೋಧಿತಾನಾಂ ಕರ್ಮಣಾಂ ಸುಖಾವಬೊಧಾಯ ಭಗವಾನ್ ಬೊಧಾಯನಃ ಕಲ್ಪಸೂತ್ರಮಕಲ್ಪಯೇತ್|
ಕಲ್ಪಸೂತ್ರಗಳು ವೇದದ ಪ್ರತಿಯೊಂದು ಶಾಖೆಗೂ ಇರುವುದು. ಇವುಗಳಲ್ಲಿ ಹೋತೃವಿಗೆ ಉಪಯೋಗವಾದದ್ದು - ಅಶ್ವಲಾಯನ ಮತ್ತು ಸಾಂಖ್ಯಾಯನ.
ಅಶ್ವಲಾಯನದಲ್ಲಿ ಎರಡು ಭಾಗಗಳಿದ್ದು ಪ್ರತಿಯೊಂದು ಭಾಗದಲ್ಲೂ 6 ಅಧ್ಯಾಯಗಳಿದ್ದು ಪ್ರತಿ ಅಧ್ಯಾಯದಲ್ಲೂ ಕಂಡಿಕೆಗಳೆಂಬ ಸಣ್ಣ ಭಾಗಗಳಿರುವುದು. ಈ ಸೂತ್ರದಲ್ಲಿ ದರ್ಶ, ಪೌರ್ಣಮಾಸ ಇತ್ಯಾದಿ ಯಾಗಗಳ ವಿವರಣೆ ಇರುವುದು.
ಕೃಷ್ಣಯಜುರ್ವೇದಕ್ಕೆ ಬೋಧಾಯನ ಹಾಗೂ ಅಪಸ್ತಂಬ ಸೂತ್ರಗಳಿವೆ. ಹಾಗೇ ಶುಕ್ಲಯಜುರ್ವೇದಕ್ಕೆ ಕಾತ್ಯಾಯನ ಸೂತ್ರಗಳಿದ್ದು, ಸಾಮವೇದಕ್ಕೆ ಲಾಟ್ಯಾಯನ ಮತ್ತು ದ್ರಾಹ್ಯಾಯಣಗಳು ಇರುವುದು.
ಸಂಧ್ಯಾವಂದನೆಗಳಾದ ಮೇಲೆ, ಗುರುಹಿರಿಯರಿಗೆ ಆಶೀರ್ವಾದ ಬಯಸಿ ನಮಸ್ಕರಿಸುವಾಗ ಈ ಸೂತ್ರಗಳನ್ನು ಅನುಸರಿಸಿ, ಅಶ್ವಲಾಯನ, ಬೋಧಾಯನ, ಆಪಸ್ತಂಬ ಮುಂತಾದ ಶಾಖೆಗಳನ್ನು ಹೇಳುತ್ತಾರೆ. ಇದೇ ರೀತಿಯಾಗಿ ವಿವಾಹ ಕಾರ್ಯದಲ್ಲೂ ಪ್ರವರವನ್ನು ಹೇಳುವರು.
ಉದಾಹರಣೆಗೆ :-
"ಅಂಗೀರಸ, ಆಯಾಸ್ಯ, ಗೌತಮತ್ರಯಾರ್ಷೇಯ, ಗೌತಮ ಸಗೋತ್ರಃ ಬೊಧಾಯನ ಸೂತ್ರಃ ….. (ವೇದ) ಶಾಖಾಧ್ಯಾಯಿ) ಶ್ರೀ…….ಶರ್ಮಣಃ (ಶರ್ಮ ಎಂಬುದನ್ನು ಬ್ರಾಹ್ಮಣರಿಗೂ, ವರ್ಮಾ ಎಂಬುದನ್ನು ಕ್ಷತ್ರಿಯರಿಗೂ ಹಾಗೂ ಗುಪ್ತ ಎಂಬುದನ್ನು ವೈಶ್ಯರಿಗೂ) ಅಹಂಭೋಃ ಅಭಿವಾದಯೇ".
"ಅಂಗೀರಸ, ಬಾರ್ಹಸ್ಪತ್ಯ, ಭಾರದ್ವಾಜ, ಮಾಂತ್ರವರ, ಆತ್ಮಭುವಪಂಚಾರ್ಷೇಯ ಆತ್ಮಭುವಪಂಚಾರ್ಷೇಯ ಸಗೋತ್ರಃ …...ಸೂತ್ರಃ (ವೇದ) …. ಶಾಖಾಧ್ಯಾಯಿ ಶ್ರೀ……..ಶರ್ಮಣಃ ಅಹಂಭೋಃ ಅಭಿವಾದಯೇ".
ಇಂದಿನ ಜನಾಂಗದಲ್ಲಿ ಈ ರೀತಿಯಾಗಿ ಪ್ರವರವನ್ನು ಹೇಳಿಕೊಂಡು ಅಭಿವಾದನ ಮಾಡುವುದು ಬಹುತೇಕವಾಗಿ ತಪ್ಪಿಹೋಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಗೋತ್ರದ ಮೂಲದಲ್ಲಿನ ಮೂರು ಅಥವಾ ಐದು ಋಷಿಗಳನ್ನು ಅರಿತಿರಬೇಕು ಹಾಗೂ ಇದನ್ನು ಸಕಾಲದಲ್ಲಿ ಬಳಸಬೇಕು, ಅಲ್ಲವೇ? ಇದನ್ನು ಅರಿಯಲು ತಪ್ಪದೆ ಒಂಟಿಕೊಪ್ಪಲ್ ಪಂಚಾಂಗವನ್ನು ವೀಕ್ಷಿಸಬಹುದು. ಅದಕ್ಕೆ ಮೊದಲು ನಿಮ್ಮ ಗೋತ್ರ, ವೇದ, ಸೂತ್ರಗಳ ಬಗ್ಗೆ ಅರಿವಿರಲೇಬೇಕು.
ಪ್ರೇರಣೆ : ಡಾ.ಜಯಂತಿ ಮನೋಹರ ಅವರ ಕೃತಿ - "Symbolism of Rigveda"
ಮುಂದುವರೆಯುವುದು….
No comments:
Post a Comment